
ಸನಾತನ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅದರಲ್ಲೂ ಅಕ್ಟೋಬರ್‌ನಿಂದ ನವೆಂಬರ್ ವರೆಗೆ ಅನೇಕ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ಎರಡು ತಿಂಗಳುಗಳು ಹಬ್ಬ ಹರಿದಿನಗಳ ಪ್ರಮುಖ ತಿಂಗಳುಗಳು ಅಂತಾನೇ ಹೇಳಬಹುದು. ಅಕ್ಟೋಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ನವರಾತ್ರಿ ಹಬ್ಬಗಳನ್ನು ಆಚರಿಸಲಾಗಿದೆ. ಹಾಗೇ ನವೆಂಬರ್ ತಿಂಗಳಿನಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಯಾವೆಲ್ಲಾ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ನವೆಂಬರ್ 1- ಕಾರ್ತಿಕ ಅಮವಾಸ್ಯೆ: ಕಾರ್ತಿಕ ಅಮವಾಸ್ಯೆಯು ನವೆಂಬರ್ 1 ರ ಶುಕ್ರವಾರದಂದು ಬರುತ್ತದೆ. ಇದು ದೀಪಾವಳಿಯ ದಿನವೂ ಆಗಿದೆ. ಈ ವಿಶೇಷ ದಿನದಂದು ಕೆಲವರು ಲಕ್ಷ್ಮೀ ದೇವಿಯನ್ನು ಕೂಡಾ ಪೂಜಿಸುತ್ತಾರೆ. ಸ್ಕಂದ ಮತ್ತು ಭವಿಷ್ಯ ಪುರಾಣದ ಪ್ರಕಾರ ಕಾರ್ತಿಕ ಅಮವಾಸ್ಯೆಯಂದು ಪವಿತ್ರ ತೀರ್ಥ ಸ್ನಾನ ಮತ್ತು ಲಕ್ಷ್ಮೀ ಪೂಜೆಯನ್ನು ಮಾಡುವುದರಿಂದ ಸಕಲ ಪಾಪಗಳು ನಿವಾರಣೆಯಾಗುತ್ತದೆ.
ನವೆಂಬರ್ 2 – ಗೋ ಪೂಜೆ: ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋವರ್ಧನ ಪೂಜೆ ಅಥವಾ ಗೋಪೂಜೆಯನ್ನು ಆಚರಿಸಲಾಗುತ್ತದೆ. ಈ ಬಾರೀ ಗೋ ಪೂಜೆಯನ್ನು ನವೆಂಬರ್ 2 ರ ಶನಿವಾರದಂದು ಆಚರಿಸಲಾಗುತ್ತದೆ. ಗೋ ಪೂಜೆಯ ದಿನದಂದು ಶ್ರೀ ಕೃಷ್ಣ, ಪ್ರಕೃತಿ ಮಾತೆ ಮತ್ತು ಗೋಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ.
ನವೆಂಬರ್ 3 – ಭಾಯ್ ದೂಜ್: ಕಾರ್ತಿಕ ಮಾಸದ ಶುಕ್ಷ ಪಕ್ಷದ ಎರಡನೇ ದಿನ ಉತ್ತರ ಭಾರತದಾದ್ಯಂತ ಸಹೋದರ-ಸಹೋದರಿಯರಿಗೆ ಮೀಸಲಾದ ಪವಿತ್ರ ಹಬ್ಬವಾದ ಭಾಯ್ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ನವೆಂಬರ್ 3 ಆದಿತ್ಯವಾರ ಈ ಹಬ್ಬವನ್ನು ಆಚರಿಸಲಾಗುವುದು. ಈ ದಿನ ಸಹೋದರಿಯರು ಪೂಜೆ, ವ್ರತ, ಉಪವಾಸ ಮಾಡುವ ಮೂಲಕ ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುತ್ತಾರೆ.
ನವೆಂಬರ್ 13- ತುಳಸಿ ಪೂಜೆ: ದೀಪಾವಳಿ ಹಬ್ಬ ಮುಗಿದ ಬಳಿಕ ಕಾರ್ತಿಕ ಮಾಸದ ಶುಕ್ಷ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ವಿಷ್ಣು ದೇವರು ಮತ್ತು ತುಳಸಿ ವಿವಾಹವಾಯಿತು ಎಂಬ ನಂಬಿಕೆಯೂ ಇದೆ. ಈ ವರ್ಷ ನವೆಂಬರ್ 13, ಬುಧವಾರದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ.
ನವೆಂಬರ್ 15 – ಗುರುನಾನಕ್ ಜಯಂತಿ: ಸಿಖ್ ಗುರು ಗುರು ನಾನಕ್ ದೇವ್ ಜೀ ಅವರ ಜನ್ಮ ದಿನವನ್ನು ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಪ್ರಕಾಶ್ ಪರ್ವ ಅಥವಾ ಗುರು ಪರ್ಬ ಎಂದು ಕರೆಯಲಾಗುವ ಗುರು ನಾನಕ್ ಜಯಂತಿಯನ್ನು ಈ ಬಾರಿ ನವೆಂಬರ್ 15 ರಂದು ಆಚರಿಸಲಾಗುವುದು.
ನವೆಂಬರ್ 16 – ವೃಶ್ಚಿಕ ಸಂಕ್ರಮಣ: ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾತಿ ಎಂದು ಕರೆಯಲಾಗುತ್ತದೆ. ನವೆಂಬರ್ 16 ರಂದು ಸೂರ್ಯನು ತುಲಾ ರಾಶಿಯಿಂದ ಹೊರ ಬಂದು ವೃಶ್ಚಿಕ ರಾಶಿಗೆ ಸಾಗುತ್ತಾನೆ. ಈ ದಿನ ಸೂರ್ಯನನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.
ನವೆಂಬರ್ 18 – ಕನಕದಾಸ ಜಯಂತಿ: ಜಾತಿ, ಮತ ಮತ್ತು ಸಮಾಜದ ಪಿಡುಗಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಾ, ಸಮಾಜ ಹಾಗೂ ದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಈ ಬಾರಿ ನವೆಂಬರ್ 18 ರಂದು ಆಚರಿಸಲಾಗುವುದು.
ನವೆಂಬರ್ 28 – ಪ್ರದೋಷ ವ್ರತ: ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಶೇಷ ದಿನ ಶಿವ ದೇವರ ಆರಾಧನೆಗೆ ಸಮರ್ಪಿತವಾಗಿದೆ. ಈ ಪ್ರದೋಷ ಉಪವಾಸವನ್ನು ಆಚರಿಸುವ ಮೂಲಕ ಅಪೇಕ್ಷಿತ ವರಗಳು ಸಿಗುತ್ತವೆ ಎಂಬ ಧಾರ್ಮಿಕ ನಂಬಿಕೆಯೂ ಇದೆ. ನವೆಂಬರ್ ತಿಂಗಳಲ್ಲಿ 28 ನೇ ತಾರೀಕಿನಂದು ಪ್ರದೋಷ ವೃತವನ್ನು ಆಚರಿಸಲಾಗುವುದು.
ನವೆಂಬರ್ 29 – ಮಾಸ ಶಿವರಾತ್ರಿ: ಹಿಂದೂ ಧರ್ಮದಲ್ಲಿ ಮಾಸಿಕ ಶಿವರಾತ್ರಿ ಹಬ್ಬವನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಆಚರಿಸಲಾಗುತ್ತದೆ. ಈ ತಿಂಗಳ 29 ನೇ ತಾರೀಕಿನಂದು ಮಾಸ ಶಿವರಾತ್ರಿಯನ್ನು ಆಚರಿಸಲಾಗುವುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Tue, 29 October 24