Panchamrutha: ವಿಷ್ಣು ಪೂಜೆಯಲ್ಲಿ ಪಂಚಾಮೃತದ ಮಹತ್ವವೇನು? ಇದನ್ನು ಸೇವಿಸುವಾಗ ಮಾಡಲೇಬಾರದ ತಪ್ಪುಗಳಿವು!

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಪೂಜೆ, ಪುನಸ್ಕಾರಗಳಿಗೂ ತನ್ನದೇ ಆದ ನಿಯಮ ಮತ್ತು ಸಾಂಪ್ರದಾಯಿಕ ಮಹತ್ವಗಳಿವೆ. ಅದರಲ್ಲೂ ಸೃಷ್ಟಿಯ ರಕ್ಷಕನಾದ ಮಹಾವಿಷ್ಣುವಿನ ಆರಾಧನೆಯಲ್ಲಿ 'ಪಂಚಾಮೃತ'ಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಶ್ರೀಸತ್ಯನಾರಾಯಣ ಪೂಜೆಯಿಂದ ಹಿಡಿದು ಕೃಷ್ಣ ಜನ್ಮಾಷ್ಟಮಿಯವರೆಗೆ, ವಿಷ್ಣುವಿನ ಯಾವುದೇ ಪೂಜೆಯು ಪಂಚಾಮೃತ ನೈವೇದ್ಯವಿಲ್ಲದೆ ಪೂರ್ಣಗೊಳ್ಳುವುದಿಲ್ಲ.

Panchamrutha: ವಿಷ್ಣು ಪೂಜೆಯಲ್ಲಿ ಪಂಚಾಮೃತದ ಮಹತ್ವವೇನು? ಇದನ್ನು ಸೇವಿಸುವಾಗ ಮಾಡಲೇಬಾರದ ತಪ್ಪುಗಳಿವು!
ಪಂಚಾಮೃತದ ಮಹತ್ವ
Image Credit source: Pinterest

Updated on: Jun 13, 2026 | 3:45 PM

ಧಾರ್ಮಿಕ ಗ್ರಂಥಗಳು ಭಗವಾನ್ ವಿಷ್ಣುವನ್ನು ಬ್ರಹ್ಮಾಂಡದ ರಕ್ಷಕ ಮತ್ತು ಪಾಲಕ ಎಂದು ಬಣ್ಣಿಸುತ್ತವೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ವಿಷ್ಣು ಭೂಮಿಯ ಮೇಲೆ ಅನೇಕ ಅವತಾರಗಳನ್ನು ಎತ್ತಿದ್ದಾನೆ. ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನವೆಂದರೆ ಅದು ಏಕಾದಶಿ. ಏಕಾದಶಿಯ ದಿನದಂದು ಉಪವಾಸ ವ್ರತವನ್ನು ಆಚರಿಸಿ, ವಿಷ್ಣುವನ್ನು ಆರಾಧಿಸುವುದರಿಂದ ಮಾನವನಿಗೆ ಮೋಕ್ಷ ಸಿಗುತ್ತದೆ ಮತ್ತು ಮರಣಾನಂತರ ವೈಕುಂಠದಲ್ಲಿ ಸ್ಥಾನ ಲಭಿಸುತ್ತದೆ ಎಂಬುದು ಸನಾತನ ಧರ್ಮದ ಗಾಢ ನಂಬಿಕೆಯಾಗಿದೆ.

ಪೂಜೆಯ ಫಲ ನೀಡುವ ಪವಿತ್ರ ಪಂಚಾಮೃತ:

ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಧಾರ್ಮಿಕ ಆಚರಣೆ, ಹಬ್ಬ ಅಥವಾ ಪೂಜಾ ಸಮಾರಂಭಗಳು ಪಂಚಾಮೃತವನ್ನು ಅರ್ಪಿಸದೆ ಪೂರ್ಣಗೊಳ್ಳುವುದಿಲ್ಲ. ಪಂಚಾಮೃತವಿಲ್ಲದೆ ಮಾಡುವ ಪೂಜೆಯನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ಪೂಜೆಯಿಂದ ಯಾವುದೇ ಸತ್ಫಲಗಳು ದೊರೆಯುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಸತ್ಯನಾರಾಯಣ ಸ್ವಾಮಿ ಪೂಜೆಯಿಂದ ಹಿಡಿದು ಶ್ರೀಕೃಷ್ಣನ ಆರಾಧನೆಯವರೆಗೆ ಮಹಾವಿಷ್ಣುವಿನ ಎಲ್ಲಾ ರೂಪಗಳ ಪೂಜೆಯಲ್ಲೂ ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಪಂಚಾಮೃತ ಎಂದರೇನು ಮತ್ತು ಅದನ್ನು ತಯಾರಿಸುವುದು ಹೇಗೆ?

ಪಂಚಾಮೃತ ಎಂದರೆ ಐದು ಅಮೃತ ಸದೃಶ್ಯ ಪದಾರ್ಥಗಳ ಪವಿತ್ರ ಮಿಶ್ರಣವಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ ವಿವರಿಸಿರುವಂತೆ ಇದರ ತಯಾರಿಕೆಗೆ ಬಳಸುವ ಐದೂ ಪದಾರ್ಥಗಳು ಅತ್ಯಂತ ಮಂಗಳಕರವಾಗಿದ್ದು, ಪ್ರತಿಯೊಂದಕ್ಕೂ ವಿಶೇಷ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ. ಶುದ್ಧ ಹಸುವಿನ ಹಾಲು, ಮೊಸರು, ಹಸುವಿನ ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳೇ ಆ ಐದು ಪದಾರ್ಥಗಳು. ಈ ಎಲ್ಲಾ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಒಂದು ಶುದ್ಧವಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ ದೇವರಿಗೆ ಅರ್ಪಿಸಲು ನೈವೇದ್ಯವನ್ನು ಸಿದ್ಧಪಡಿಸಲಾಗುತ್ತದೆ.

ತುಳಸಿ ಎಲೆಯಿಲ್ಲದೆ ಅಪೂರ್ಣವಾಗುವ ನೈವೇದ್ಯ:

ವಿಷ್ಣು ಮತ್ತು ಅವನ ಅವತಾರಗಳಿಗೆ ಪಂಚಾಮೃತವನ್ನು ಅರ್ಪಿಸುವಾಗ ಅದಕ್ಕೆ ತುಳಸಿ ದಳವನ್ನು (ಎಲೆ) ಸೇರಿಸುವುದು ಕಡ್ಡಾಯವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಎಲೆಗಳಿಲ್ಲದೆ ಮಹಾವಿಷ್ಣುವು ಪಂಚಾಮೃತವನ್ನಾಗಲಿ ಅಥವಾ ಬೇರೆ ಯಾವುದೇ ನೈವೇದ್ಯವನ್ನಾಗಲಿ ಸ್ವೀಕರಿಸುವುದಿಲ್ಲ. ಇದರೊಂದಿಗೆ ಪಂಚಾಮೃತವನ್ನು ಎಂದಿಗೂ ಅವಮಾನಿಸಬಾರದು ಅಥವಾ ವ್ಯರ್ಥ ಮಾಡಬಾರದು. ದೇವರಿಗೆ ಅರ್ಪಿಸಿದ ಪಂಚಾಮೃತವನ್ನು ನಿಂದಿಸುವವರು ಅಥವಾ ಅಪವಿತ್ರಗೊಳಿಸುವವರು ತಮ್ಮ ಪುಣ್ಯವನ್ನು ನಾಶಪಡಿಸಿಕೊಂಡು, ಪಾಪದ ಭಾಗಿಗಳಾಗುತ್ತಾರೆ ಎಂದು ಧರ್ಮಗ್ರಂಥಗಳು ಎಚ್ಚರಿಸುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪಂಚಾಮೃತ ತಯಾರಿಕೆಯಲ್ಲಿ ಪಾಲಿಸಬೇಕಾದ ಕಠಿಣ ನಿಯಮಗಳು:

ಪಂಚಾಮೃತವನ್ನು ತಯಾರಿಸುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಇದನ್ನು ಯಾವಾಗಲೂ ಸೂರ್ಯಾಸ್ತದ ಮೊದಲು, ಅಂದರೆ ಹಗಲಿನ ವೇಳೆಯಲ್ಲೇ ತಯಾರಿಸಬೇಕು. ಇದರ ತಯಾರಿಕೆಗೆ ಕಡ್ಡಾಯವಾಗಿ ದೇಸಿ ಹಸುವಿನ ಹಾಲನ್ನು ಮಾತ್ರ ಬಳಸಬೇಕು, ಯಾವುದೇ ಕಾರಣಕ್ಕೂ ಎಮ್ಮೆ ಹಾಲು ಅಥವಾ ಪ್ಯಾಕೆಟ್ ಹಾಲನ್ನು ಬಳಸಬಾರದು. ಕೊನೆಯದಾಗಿ, ದೇವರಿಗೆ ನೈವೇದ್ಯ ಇಡುವ ಮುನ್ನ ಅದಕ್ಕೆ ಪವಿತ್ರವಾದ ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಸೇರಿಸುವುದನ್ನು ಮರೆಯಬಾರದು.

ಪಂಚಾಮೃತ ಸೇವಿಸುವಾಗ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

ದೇವಸ್ಥಾನಗಳಲ್ಲಿ ಅಥವಾ ಪೂಜೆಯ ನಂತರ ಪಂಚಾಮೃತ ಪ್ರಸಾದವನ್ನು ಸ್ವೀಕರಿಸುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಪಂಚಾಮೃತವನ್ನು ಯಾವಾಗಲೂ ಬಲಗೈ ಕೆಳಗೆ ಎಡಗೈಯನ್ನು ಇಟ್ಟು, ಎರಡೂ ಕೈಗಳಿಂದ ಗೌರವಪೂರ್ವಕವಾಗಿ ಸ್ವೀಕರಿಸಿ ಸೇವಿಸಬೇಕು. ಪ್ರಸಾದವನ್ನು ಕುಡಿಯುವಾಗ ಅದು ತಪ್ಪಾಗಿಯೂ ನೆಲದ ಮೇಲೆ ಚೆಲ್ಲಬಾರದು. ನೆಲದ ಮೇಲೆ ಚೆಲ್ಲುವುದು ದೇವರಿಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us