
ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನಫಲ, ವಾರಫಲ, ಮಾಸಿಕಫಲ ಮತ್ತು ವರ್ಷಫಲಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದೇ ರೀತಿ, ಪ್ರತಿ ತಿಂಗಳು ಗ್ರಹಗಳ ಸಂಚಾರವನ್ನು ಗಮನಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಈ ಡಿಸೆಂಬರ್ ತಿಂಗಳು ಮೂರು ರಾಶಿಗಳ ಜನರಿಗೆ ಅದೃಷ್ಟ ಮತ್ತು ಮಂಗಳಕರ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ಆದಿತ್ಯ ರಾಜಯೋಗವು ಈ ಮೂರು ರಾಶಿಗಳಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ರಾಜಯೋಗವು ರವಿ ಮತ್ತು ಮಂಗಳ ಗ್ರಹಗಳ ವಿಶೇಷ ಸಂಯೋಗದಿಂದ ರೂಪುಗೊಳ್ಳಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳ ಪೈಕಿ ರವಿ ಗ್ರಹವನ್ನು ರಾಜ ಗ್ರಹವೆಂದು ಮತ್ತು ಮಂಗಳ ಗ್ರಹವನ್ನು ಸೇನಾಧಿಪತಿ ಅಥವಾ ಸೈನಿಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಎರಡೂ ಗ್ರಹಗಳ ಸಂಚಾರವು ನಿರ್ಣಾಯಕವಾಗಿದ್ದು, ಅವುಗಳ ಸಂಯೋಗದಿಂದ ಆದಿತ್ಯ ರಾಜಯೋಗದ ಫಲಗಳು ಮೂಡಿಬಂದಿವೆ. ಮಂಗಳ ಗ್ರಹವು ಧೈರ್ಯ, ಶಕ್ತಿ, ಸಾಹಸ ಮತ್ತು ಗುರಿ ಸಾಧನೆಯ ಪ್ರತೀಕವಾಗಿದೆ. ಪ್ರಸ್ತುತ ವೃಶ್ಚಿಕ ರಾಶಿಯಲ್ಲಿರುವ ಮಂಗಳ ಗ್ರಹವು ಡಿಸೆಂಬರ್ 7ರಂದು ಧನುಸ್ಸು ರಾಶಿಗೆ ಪ್ರವೇಶಿಸಲಿದೆ ಮತ್ತು ಜನವರಿ 16ರವರೆಗೆ ಅಲ್ಲಿಯೇ ಇರುತ್ತದೆ. ರಾಜ ಗ್ರಹ ರವಿಯು ಡಿಸೆಂಬರ್ 16ರಂದು ಧನುಸ್ಸು ರಾಶಿಗೆ ಪ್ರವೇಶಿಸಿ ಜನವರಿ 14ರವರೆಗೆ ಮಂಗಳನೊಂದಿಗೆ ಸಂಯೋಗದಲ್ಲಿರುತ್ತದೆ. ಈ ಅವಧಿಯು ಮೂರು ರಾಶಿಗಳಾದ ತುಲಾ, ಧನುಸ್ಸು ಮತ್ತು ಮೀನ ರಾಶಿಗಳಿಗೆ ಅತ್ಯಂತ ಮಂಗಳಕರವಾಗಿದೆ.
ತುಲಾ ರಾಶಿಯವರಿಗೆ ಈ ಆದಿತ್ಯ ರಾಜಯೋಗವು ಆರ್ಥಿಕವಾಗಿ ಉತ್ತಮ ಫಲಗಳನ್ನು ತರಲಿದೆ. ಕಾನೂನು ವಿಷಯಗಳಲ್ಲಿ ಯಶಸ್ಸು, ಭೂಮಿ, ಮನೆ ಅಥವಾ ನಿವೇಶನ ಖರೀದಿಯಂತಹ ಆಸ್ತಿ ಯೋಗಗಳು ಕೂಡಿಬರುತ್ತವೆ. ನಿರೀಕ್ಷಿತ ಶುಭ ಸುದ್ದಿಗಳು ದೊರೆಯಲಿವೆ. ಒಟ್ಟಾರೆ, ತುಲಾ ರಾಶಿಯವರು ಆರ್ಥಿಕವಾಗಿ ಮತ್ತು ಕಾನೂನು ವಿಷಯಗಳಲ್ಲಿ ಪ್ರಗತಿ ಕಾಣಲಿದ್ದಾರೆ.
ಧನುಸ್ಸು ರಾಶಿಯವರಿಗೆ ಈ ಗ್ರಹಗಳ ಸಂಯೋಗವು ಅತ್ಯದ್ಭುತ ಬದಲಾವಣೆಗಳನ್ನು ತರಲಿದೆ. ಸಮಾಜದಲ್ಲಿ ಗೌರವ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ, ಉನ್ನತ ಸ್ಥಾನಮಾನ, ಮತ್ತು ಅಧಿಕಾರ ಪ್ರಾಪ್ತಿಯಾಗುವ ಸಾಧ್ಯತೆಗಳಿವೆ. ದೊಡ್ಡ ಮಟ್ಟದ ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುತ್ತಾರೆ. ಧನಂ ಮೂಲಂ ಇದಂ ಜಗತ್ ಎಂಬಂತೆ, ಧನ ಪ್ರಾಪ್ತಿಯ ಯೋಗವೂ ಇರುತ್ತದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ಮೀನ ರಾಶಿಯವರು, ವಿಶೇಷವಾಗಿ ಸಾಡೇಸಾತಿಯಿಂದ ಜರ್ಜರಿತರಾಗಿದ್ದವರಿಗೆ, ಈ ಆದಿತ್ಯ ರಾಜಯೋಗವು ಅನಿರೀಕ್ಷಿತ, ಪವಾಡ ಸದೃಶ ಬದಲಾವಣೆಗಳನ್ನು ತರಲಿದೆ. ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರಗಳ ಜನರಲ್ಲೂ ಸಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಆರ್ಥಿಕವಾಗಿ ಉತ್ತಮ ಲಾಭ, ಅನೇಕ ಹೊಸ ಅವಕಾಶಗಳು, ಹೂಡಿಕೆಯಿಂದ ಲಾಭ, ಅಧಿಕಾರ ಪ್ರಾಪ್ತಿ, ಬಡ್ತಿ, ವಿದೇಶ ಯೋಗ ಮತ್ತು ಕುಟುಂಬದಲ್ಲಿ ಸಾಮರಸ್ಯದಂತಹ ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತ.
ಇತರ ರಾಶಿಗಳ ಜನರು ನಿರಾಶೆಗೊಳ್ಳುವ ಅಗತ್ಯವಿಲ್ಲ. ರವಿ ಮತ್ತು ಮಂಗಳನ ಈ ಸಂಯೋಗವು ಎಲ್ಲಾ ರಾಶಿಗಳಿಗೂ ಶುಭ ಫಲಗಳನ್ನು ನೀಡುತ್ತದೆ. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಮತ್ತು ಸುಬ್ರಹ್ಮಣ್ಯನ ಆರಾಧನೆ ಮಾಡುವುದು ಬಹಳಷ್ಟು ಶುಭಕರವೆಂದು ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Tue, 9 December 25