ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬವನ್ನು ಕ್ಷಮೆಯ ರಾತ್ರಿ ಅಥವಾ ಕ್ಷಮೆ ಕೋರುವ ರಾತ್ರಿ ಎಂದು ಕರೆಯುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಎಂಟನೇ ತಿಂಗಳಾದ ಶಾಬಾನ್‌ನ 14 ಅಥವಾ 15 ನೇ ದಿನದಂದು ಶಬ್-ಎ-ಬರಾತ್ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತು ಈ ಹಬ್ಬವನ್ನು ಸಂಜೆ ಮಾಡಲಾಗುತ್ತದೆ. ಈ ದಿನ ಮುಸ್ಲಿಮರು ಜಾಗರಣೆ, ಉಪವಾಸ ಮಾಡುವುದು ಮತ್ತು ಪವಿತ್ರ ಕುರಾನ್ ಓದುವಂತಹ ಆಚರಣೆಗಳನ್ನು ಮಾಡುವ ಮೂಲಕ ಕರುಣಾಮಯಿ ಅಲ್ಲಾನಲ್ಲಿ ತಮ್ಮ ಪಾಪಗಳಿಗೆ ಮುಕ್ತಿ ನೀಡುವಂತೆ ಕ್ಷಮೆ ಕೇಳುತ್ತಾರೆ. ಹಾಗೂ ವಿಶೇಷವಾಗಿ ತಮ್ಮ ಮೃತ ಕುಟುಂಬಸ್ಥರಿಗೆ ಮೋಕ್ಷ ಸಿಗುವಂತೆ ಬೇಡಿಕೊಳ್ಳುತ್ತಾರೆ.
ಶಬ್-ಎ-ಬರಾತ್ ಅರ್ಥ
ಶಬ್-ಎ-ಬರಾತ್ನ ಅರ್ಥ ಪ್ರಾಯಶ್ಚಿತ್ತದ ರಾತ್ರಿ ಎಂದು ಅನುವಾದಿಸಬಹುದು. ಈ ಹಬ್ಬಕ್ಕೆ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತೆ. ಶಬ್-ಎ-ಬರಾತ್ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಏಷ್ಯಾದಲ್ಲಿ ಮುಸ್ಲಿಮರು ಆಡಂಬರ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಇದು ಇಸ್ಲಾಂ ಧರ್ಮದ ಪವಿತ್ರ ರಾತ್ರಿಗಳಲ್ಲಿ ಒಂದಾಗಿದೆ. ಜನರು ತಮ್ಮ ಪೂರ್ವಜರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಮತ್ತು ನರಕದಿಂದ ಅವರನ್ನು ರಕ್ಷಿಸಲು ಈ ರಾತ್ರಿ ದೇವರಲ್ಲಿ ವಿಶೇಷ ನಮಾಜ್ ಮೂಲಕ ಬೇಡಿಕೊಳ್ಳುತ್ತಾರೆ.
ಶಾಬಾನ್ ತಿಂಗಳು
ಶಾಬಾನ್ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಎಂಟನೇ ತಿಂಗಳಾಗಿದೆ. ಮತ್ತು ಈ ತಿಂಗಳಲ್ಲಿ ಯುದ್ಧವನ್ನು ನಿಷೇಧಿಸಲಾಗಿದೆ. ಈ ತಿಂಗಳು ಯಾವುದೇ ರೀತಿಯ ಹಿಂಸೆ, ಯುದ್ಧಗಳಿಗೆ ಜಾಗವಿಲ್ಲ. ಕೇವಲ ದೇವರ ಕೃಪೆಗೆ ಪಾತ್ರರಾಗಲು ದೇವರಿಗೆ ಹತ್ತಿರವಾಗಲು ಈ ತಿಂಗಳು ದೇವರನ್ನು ಹೆಚ್ಚಾಗಿ ಸ್ಮರಿಸಲಾಗುತ್ತೆ. ಇಸ್ಲಾಂನ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಇದೂ ಕೂಡ ಒಂದಾಗಿದೆ. ಪವಿತ್ರ ರಂಜಾನ್ ಮಾಸಕ್ಕೆ 15 ದಿನಗಳ ಮೊದಲು ಈ ದಿನ ಆಚರಿಸಲಾಗುತ್ತೆ. ಹಾಗೂ ಶಾಬಾನ್ನ 15ನೇ ದಿನದಂದು ಉಪವಾಸ ಸಹ ಮಾಡಲಾಗುತ್ತೆ. ಶಾಬಾನ್ 15 ನೇ ಆಚರಣೆ ಮತ್ತು ಅಬ್ಬಾಸ್ ಇಬ್ನ್ ಅಲಿಯ ಜನ್ಮ ದಿನವನ್ನು ಈ ರಾತ್ರಿ ಸೂಚಿಸುತ್ತದೆ.
ಶಬ್-ಎ-ಬರಾತ್ 2022 ದಿನಾಂಕ
ಶಾಬಾನ್ ತಿಂಗಳು ಮಾರ್ಚ್ 3 ರಿಂದ ಪ್ರಾರಂಭವಾಗಿ ಏಪ್ರಿಲ್ 1ರಂದು ಕೊನೆಯಾಗುತ್ತೆ. ಶಾಬಾನ್ 15 ನೇ ದಿನ ಬರುವುದು ಮಾರ್ಚ್ 18ರಂದು. ಇಸ್ಲಾಮಿಕ್ ದಿನಾಂಕದ ಪ್ರಕಾರ ಶಬ್-ಎ-ಬರಾತ್ ಮಾರ್ಚ್ 18 ರ ಸಂಜೆ ಪ್ರಾರಂಭವಾಗಿ ಮಾರ್ಚ್ 19 ರ ಸಂಜೆ ಕೊನೆಗೊಳ್ಳುತ್ತದೆ.
ಶಬ್-ಎ-ಬರಾತ್ ಇತಿಹಾಸ
ಶಾಬಾನ್ ತಿಂಗಳ 15 ರಂದು, ಶಿಯಾ ಮುಸ್ಲಿಮರ 12 ನೇ ಇಮಾಮ್ ಮುಹಮ್ಮದ್ ಅಲ್ ಮಹದಿ ಜನಿಸಿದರು. ಅಂದಿನಿಂದ ಆ ದಿನವನ್ನು ಅವರ ಜನ್ಮದಿನವನ್ನಾಗಿ ಆಚರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಸುನ್ನಿ ಮುಸ್ಲಿಮರು 15 ನೇ ಶಬಾನ್ ರಂದು ಅಲ್ಲಾನು ಭೀಕರ ಪ್ರವಾಹದಿಂದ ತಮ್ಮ ರಕ್ಷಿಸಿದ ದಿನವೆಂದು ಸ್ಮರಿಸಿಕೊಳ್ಳುತ್ತಾರೆ. ಮತ್ತೊಂದು ನಂಬಿಕೆಯ ಪ್ರಕಾರ ಪ್ರವಾದಿ ಮುಹಮ್ಮದ್ ಈ ದಿನ ಮಕ್ಕಾ ನಗರವನ್ನು ಪ್ರವೇಶಿಸಿದರು ಎಂದು ನಂಬಲಾಗಿದೆ. ಇನ್ನೊಂದು ನಂಬಿಕೆಯ ಪ್ರಕಾರ ಪ್ರವಾದಿ ಮುಹಮ್ಮದ್ ಅವರ ಪ್ರೀತಿಯ ಪತ್ನಿ ಆಯೇಷಾ ಸಿದ್ದಿಕಾ ಅವರು ಈ ರಾತ್ರಿ ಕಾಣೆಯಾದಾಗ ಅವರನ್ನು ಹುಡುಕಲು ಹೊರಟಿದ ನಂತರ, ಬೇಗಂ ಆಯೇಷಾ ಮದೀನಾದ ಸ್ಮಶಾನದಲ್ಲಿ ಸಿಕ್ಕರು ಎನ್ನಲಾಗಿದೆ. ಹಾಗಾಗಿ ಈ ದಿನ ಸತ್ತವರ ಕ್ಷಮೆಗಾಗಿ ದೀರ್ಘಕಾಲ ಪ್ರಾರ್ಥಿಸಲಾಗುತ್ತೆ.
ಶಬ್-ಎ-ಬರಾತ್ ಮಹತ್ವ
ಶಬ್-ಎ-ಬರಾತ್ ಎಂದರೆ ಪ್ರಾಯಶ್ಚಿತ್ತದ ರಾತ್ರಿ, ಈ ದಿನ, ಸರ್ವಶಕ್ತನಾದ ಅಲ್ಲಾಹುನನ್ನು ಪ್ರಾರ್ಥಿಸಿ ಪಾಪಗಳನ್ನು ಕ್ಷಮಿಸುವಂತೆ ಕೇಳಿಕೊಳ್ಳಲಾಗುತ್ತೆ. ಶಬ್-ಎ-ಬರಾತ್ ರಾತ್ರಿ, ದೇವರು ಎಲ್ಲಾ ಪುರುಷರು ಮತ್ತು ಮಹಿಳೆಯರ ಭವಿಷ್ಯವನ್ನು ಮುಂಬರುವ ವರ್ಷದಲ್ಲಿ ಅವರು ಹಿಂದೆ ಮಾಡಿದ ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡು ಬರೆಯುತ್ತಾರೆ ಎಂದು ಮುಸ್ಲಿಮರು ನಂಬುತ್ತಾರೆ.
ಶಬ್ ಇ ಬಾರಾತ್ ಆಚರಣೆ
ಪ್ರಪಂಚದಾದ್ಯಂತ ಮುಸ್ಲಿಮರು ಈ ರಾತ್ರಿ ಪವಿತ್ರ ಕುರಾನ್ ಪಠಿಣೆ, ಜಾಗರಣೆ, ಉಪವಾಸ ಮಾಡುತ್ತಾರೆ. ಮತ್ತು ತಮ್ಮ ಕುಟುಂಬ ಸದಸ್ಯರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಸಮಾಧಿ ಬಳಿ ಮಂತ್ರ ಪಠಿಸಿ ಅವರು ಮಾಡಿದ ಪಾಪಗಳಿಗೆ ಮುಕ್ತಿ ನೀಡಿ ಮೋಕ್ಷ ನೀಡುವಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ. ತಮ್ಮ ಹಿರಿಯರ ಆಶೀರ್ವಾದ ಸದಾ ತಮ್ಮ ಮೇಲಿರುವಂತೆ ಬೇಡುತ್ತಾರೆ.
ಇದನ್ನೂ ಓದಿ: Maha Shivratri 2022: ಮಹಾಶಿವರಾತ್ರಿಯ ಪಾರಣ ಪೂಜಾ ಸಮಯ ಮತ್ತು ಪೂಜಾ ವಿಧಾನ
ಶಬ್ ಎ ಬರಾತ್ 2021; ಕ್ಷಮೆಯ ರಾತ್ರಿ.. ತಿಳಿಯಿರಿ ಮುಸ್ಲಿಮರು ಆಚರಿಸುವ ಪ್ರವಿತ್ರ ರಾತ್ರಿಯ ಮಹತ್ವ