ಜಪಮಾಲೆ ಮಣಿಯಿಂದ ಬ್ರಹಾಂಡದ ತನಕ ಸಂಖ್ಯೆ 108ರ ಜೊತೆಗೆ ಅಧ್ಯಾತ್ಮ- ಧಾರ್ಮಿಕತೆ ನಂಟು, ಏನೇನುಂಟು?
ಹಿಂದೂ ಧಾರ್ಮಿಕ ಪದ್ಧತಿಯ ಅನುಸಾರವಾಗಿ ಮಾತ್ರವಲ್ಲದೇ ವಿವಿಧ ಧರ್ಮಗಳಲ್ಲಿ ಆಧ್ಯಾತ್ಮಿಕವಾಗಿ ಹಾಗೂ ಧಾರ್ಮಿಕವಾಗಿ ಸಂಖ್ಯೆ ‘108’ ಎಂಬುದು ತುಂಬ ವಿಶಿಷ್ಟವಾದದ್ದು, ಜಪಮಾಲೆಯಿಂದ ಮೊದಲುಗೊಂಡು, ಹೋಮ- ಹವನಗಳಲ್ಲಿ ನೀಡುವ ಆಹುತಿಯ ತನಕ ಈ ಸಂಖ್ಯೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಜಪಮಾಲೆ ಮಣಿಯಿಂದ ಬ್ರಹಾಂಡದ ತನಕ ಸಂಖ್ಯೆ 108ರ ಜೊತೆಗೆ ಅಧ್ಯಾತ್ಮ-ಧಾರ್ಮಿಕತೆ ನಂಟು, ಏನೇನುಂಟು?

ಹಿಂದೂ ಧಾರ್ಮಿಕ ಪದ್ಧತಿಯ ಅನುಸಾರವಾಗಿ ಮಾತ್ರವಲ್ಲದೇ ವಿವಿಧ ಧರ್ಮಗಳಲ್ಲಿ ಆಧ್ಯಾತ್ಮಿಕವಾಗಿ ಹಾಗೂ ಧಾರ್ಮಿಕವಾಗಿ ಸಂಖ್ಯೆ ‘108’ ಎಂಬುದು ತುಂಬ ವಿಶಿಷ್ಟವಾದದ್ದು. ಅದರಲ್ಲೂ ಹಿಂದೂ ಧರ್ಮದಲ್ಲಿನ ಆಚರಣೆಯನ್ನೇ ನಿರ್ದಿಷ್ಟವಾಗಿ ತೆಗೆದುಕೊಳ್ಳುವುದಾದರೆ ಜಪಮಾಲೆಯಿಂದ ಮೊದಲುಗೊಂಡು, ಹೋಮ- ಹವನಗಳಲ್ಲಿ ನೀಡುವ ಆಹುತಿಯ ತನಕ ಈ ಸಂಖ್ಯೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಅದನ್ನು ಇನ್ನಷ್ಟು ವಿಸ್ತಾರವಾಗಿ ತಿಳಿದುಕೊಳ್ಳುವುದಕ್ಕೆ ಈ ಲೇಖನದ ಮೂಲಕವಾಗಿ ಪ್ರಯತ್ನವನ್ನು ಪಡೋಣ. ಮೊದಲಿಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳಿರುವಂಥ ಈ ಸಂಖ್ಯೆಯ ವಿವರಣೆಯೊಂದಿಗೆ ಆರಂಭಿಸೋಣ.
“ನಮ್ಮ ದೇಹದಲ್ಲಿ 114 ಚಕ್ರಗಳಿವೆ. 72 ಸಾವಿರ ನಾಡಿಗಳಿವೆ. ಅವುಗಳು 114 ಜಂಕ್ಷನ್ ಗಳಲ್ಲಿ ಭೇಟಿ ಆಗುತ್ತವೆ. ಅವುಗಳನ್ನೇ ಚಕ್ರಗಳು ಅಂತ ಕರೆಯಲಾಗುತ್ತದೆ. ಅದರಲ್ಲಿ ದೇಹದ ಹೊರಗೆ 2 ಹಾಗೂ ದೇಹದ ಒಳಗೆ 112 ಚಕ್ರಗಳಿವೆ. ಆ ಪೈಕಿ 4ಕ್ಕೆ ಏನೂ ಮಾಡುವ ಅಗತ್ಯವಿಲ್ಲ. ಅವುಗಳು ಹಾಗೇ ಇರುತ್ತವೆ. ಕೆಲವು ಬೆಳವಣಿಗೆಗಳಿಂದ ಅವುಗಳು ತಾವಾಗಿಯೇ ಸ್ವಚ್ಛಂದವಾಗಿ ಹಾರಾಡುತ್ತವೆ. ಇನ್ನು ಬಾಕಿ 108 ಇವೆಯಲ್ಲ ಅವುಗಳಿಗಾಗಿ ನಾವು ಕೆಲವು ಕೆಲಸಗಳನ್ನು ಮಾಡಬೇಕು. ಆ 108ರ ಸಲುವಾಗಿಯೇ ಜನರು 108 ಸಂಖ್ಯೆಯ ಜಪಮಾಲೆಯನ್ನು ಧರಿಸುತ್ತಾರೆ. ಮಂತ್ರಗಳನ್ನು 108 ಬಾರಿ ಜಪಿಸುತ್ತಾರೆ. ಯಾಕೆಂದರೆ ಈ 108 ಚಕ್ರದ ಸಲುವಾಗಿ ಮಾಡಬೇಕಾಗುತ್ತದೆ.
“108ರ ಸಂಖ್ಯೆಯೇ ಬಹಳ ಮುಖ್ಯವಾದದ್ದು. ಸೂರ್ಯನ ಸುತ್ತಳತೆಯನ್ನು ಲೆಕ್ಕಕ್ಕೆ ಹಿಡಿದರೆ, ಸೂರ್ಯ ಹಾಗೂ ಭೂಮಿಯ ಮಧ್ಯೆ ಇರುವ ಅಂತರವು ಆ ಸುತ್ತಳತೆಯ 108 ಬಾರಿಯಷ್ಟು ಆಗುತ್ತದೆ. ಇನ್ನು ಚಂದ್ರನ ಸುತ್ತಳತೆಯ 108 ಬಾರಿಯಷ್ಟು ಅಂತರವು ಚಂದ್ರ ಹಾಗೂ ಭೂಮಿಯ ಮಧ್ಯೆ ಇದೆ. ಭೂಮಿಯ ಒಟ್ಟು ಸುತ್ತಳತೆ ಏನಿದೆ, ಅದರ 108 ಬಾರಿಯಷ್ಟರ ಅಂತರವು ಭೂಮಿ ಹಾಗೂ ಸೂರ್ಯನ ಮಧ್ಯೆ ಇದೆ. ಈ ದೇಹಕ್ಕೆ ಆರೋಗ್ಯ ರೀತಿಯಿಂದಲೂ ಮುಖ್ಯವಾದದ್ದು 84 ಆಸನಗಳು. ಅದರಲ್ಲಿ 21 ಸರಿಯಾಗಿ ಮಾಡಿದರೆ, ಇನ್ನು ಆ ಪೈಕಿ ಒಂದು ಆಸನದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿದರೆ ಬ್ರಹ್ಮಾಂಡದ ಜೊತೆಗೆ ಅನುಸಂಧಾನಕ್ಕೆ ಪೂರಕವಾಗುತ್ತದೆ,” ಎನ್ನುತ್ತಾರೆ ಜಗ್ಗಿ ವಾಸುದೇವ್.
ಈ ಸಂದರ್ಭಕ್ಕೆ ಉಪಯುಕ್ತ ಆದೀತು ಎಂಬ ಕಾರಣಕ್ಕೆ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ ವಿಚಾರವೊಂದರ ಪ್ರಸ್ತಾವ ಮಾಡಲಾಗುತ್ತಿದೆ. “ದಿನಕ್ಕೆ ಎಷ್ಟು ಗಾಯತ್ರಿ ಜಪ ಮಾಡಬೇಕು?” ಎಂಬ ಪ್ರಶ್ನೆಯನ್ನು ಆಚಾರ್ಯರನ್ನು ಒಬ್ಬರು ಕೇಳಿರುತ್ತಾರೆ. ಅದಕ್ಕೆ ಅವರ ಉತ್ತರ ಹೀಗಿತ್ತು: “ಒಂದು ದಿನದಲ್ಲಿ 3 ಸಾವಿರಕ್ಕಿಂತ ಹೆಚ್ಚು ಗಾಯತ್ರಿ ಜಪ ಮಾಡಬಾರದು. ಗಾಯತ್ರಿ ಜಪ ಮಾಡುವುದು ಕೆಟ್ಟದಲ್ಲ. ಆದರೆ ಆ ಸಂಖ್ಯೆ 3 ಸಾವಿರ ದಾಟಬಾರದು ಎನ್ನುತ್ತಾರೆ. ಒಂದು ಹೊತ್ತಿಗೆ 1 ಸಾವಿರ ಸಂಖ್ಯೆಯನ್ನು ದಾಟಬಾರದು. ಗಾಯತ್ರಿ ಮಂತ್ರ 24 ಅಕ್ಷರವಿದೆ. 1 ಸಾವಿರ ಗುಣಕ 24 ಅಂದರೆ 24 ಸಾವಿರ ಆಗುತ್ತದೆ. ಮೂರು ಹೊತ್ತಿಗೆ 24 ಸಾವಿರದ ಗುಣಕ 3 ಅಂತಾದರೆ 72 ಸಾವಿರ. ದೇಹದ ಒಟ್ಟು ನಾಡಿಗಳ ಸಂಖ್ಯೆ 72 ಸಾವಿರ ಇದೆ. ಈ ಸಂಖ್ಯೆಗಿಂತ ಹೆಚ್ಚು ಶಕ್ತಿ ಹರಿವು ಆದಲ್ಲಿ ತೊಂದರೆ ಆಗುತ್ತದೆ. ಇದನ್ನು ಪ್ರತ್ಯಕ್ಷ ನೋಡಿದ್ದೇನೆ,” ಎಂದು ಹೇಳಿ, ದೇವುಡು ನರಸಿಂಹ ಶಾಸ್ತ್ರಿ ಅವರ ಉದಾಹರಣೆಯನ್ನು ಕೊಡುತ್ತಾರೆ. ದಿನಕ್ಕೆ ಹತ್ತು ಸಾವಿರ, ಐವತ್ತು ಸಾವಿರ ಅಂತ ಗಾಯತ್ರಿ ಜಪ ಶುರು ಮಾಡಿದರೆ ಆ ಶಕ್ತಿಯನ್ನು ತಡೆಯುವುದಕ್ಕೆ ಈ ದೇಹಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ ಬನ್ನಂಜೆ ಗೋವಿಂದಾಚಾರ್ಯರು.
ಮತ್ತೆ ಸಂಖ್ಯೆ ನೂರಾ ಎಂಟರ ವಿಚಾರಕ್ಕೆ ಬರುವುದಾದರೆ, ಸೂರ್ಯ ನಮಸ್ಕಾರದಲ್ಲಿ ಹನ್ನೆರಡು ಭಂಗಿಗಳಿವೆ, ಅದರ ಒಂಬತ್ತು ಆವೃತ್ತಿಯಲ್ಲಿ ಮಾಡಿದರೆ ಒಟ್ಟು ಸಂಖ್ಯೆ 108 ಆಗುತ್ತದೆ. ಹೀಗೆ ಸಂಖ್ಯೆಗಳು 108ರ ಕಡೆಗೆ ಸಾಗುವುದೇಕೆ ಎಂಬುದಕ್ಕೆ ಇಲ್ಲಿರುವ 1 ಮತ್ತು 0 ಹಾಗೂ 8 ಇವುಗಳಿಗೆ ಇರುವಂಥ ಅರ್ಥವನ್ನು ಹುಡುಕಿಕೊಳ್ಳಬೇಕಾಗುತ್ತದೆ. 1 ಅಂದರೆ ಅಂತಿಮ ಸತ್ಯ ಅಥವಾ ದೇವರು ಎಂಬರ್ಥವಿದೆ. ಇನ್ನು 0 ಅನ್ನು ಖಾಲಿ ಅಂತಷ್ಟೇ ಅಂದುಕೊಳ್ಳಬೇಕಿಲ್ಲ. ಇದರ ಅರ್ಥ ಸಂಪೂರ್ಣ, ಪರಿಪೂರ್ಣತೆ ಎಂದು ಸಹ ಆಗುತ್ತದೆ. ಆ ನಂತರ 8 ಅಂದರೆ ಅನಂತ, ಕೊನೆಯೇ ಇಲ್ಲದ್ದು, ಸಂಖ್ಯೆಯಿಂದ ಎಣಿಸಿ ಕೊನೆ ಆಗುವಂಥದ್ದು ಅಲ್ಲ ಎಂದಾಗುತ್ತದೆ. ಈ ಮೂರನ್ನೂ ಒಂದು ತತ್ವವಾಗಿ, ವಿಚಾರವಾಗಿ, ಸಂದೇಶವಾಗಿ ನೀಡಿರುವುದೇ ‘108’ರ ಸಂಖ್ಯೆ.
ರುದ್ರಾಕ್ಷಿ ಮಾಲೆಯೇ ಇರಬಹುದು, ತುಳಸೀ ಮಣಿ ಮಾಲೆಯೇ ಇರಬಹುದು 108ರ ಸಂಖ್ಯೆಯಲ್ಲಿ ಇರುವುದನ್ನು ಕಾಣುತ್ತೇವೆ. ಜಪವನ್ನು ಅನುಷ್ಠಾನವಾಗಿ ಮಾಡುವವರು, ಇಷ್ಟು ಸಂಖ್ಯೆಯಲ್ಲಿ ಆಗಬೇಕು ಎಂಬ ಸಂಕಲ್ಪ ಮಾಡಿ, ತಮ್ಮ ಕಾಮ್ಯಾರ್ಥವನ್ನು ಪಡೆಯಬೇಕು ಎಂದು ಬಯಸುವವರು ಈ ಜಪ ಮಾಲೆಯನ್ನು ಬಳಸುತ್ತಾರೆ. ಇದು ಏಕಾಗ್ರತೆಯ ಭಾಗವೂ ಹೌದು. ಮನಸ್ಸು ಒಂದು ಕಡೆ ನೆಟ್ಟಂತೆ ಇದ್ದು, ಒಂದು ಕಾರ್ಯದಲ್ಲಿ ತೊಡಗಿಕೊಳ್ಳುವುದಕ್ಕೂ ಮಾನಸಿಕವಾಗಿ ಇದು ಸಹಕಾರಿ ಹೌದು. ಅದೇ ರೀತಿ ಆಧ್ಯಾತ್ಮಿಕವಾಗಿಯೂ ಇದರಲ್ಲಿ ಅಗಾಧವೆನಿಸುವ ಅರ್ಥ ಅಡಗಿಕೊಂಡಿದೆ.
ಲೇಖನ- ಸ್ವಾತಿ ಎನ್.ಕೆ.




