Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ

Ram Navami 2022: ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ತ್ವ, ಮಹ್ವತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀ ರಾಮ ನವಮಿಯಂದು ಶ್ರೀ ರಾಮ ತತ್ತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮ ನಾಮ ಜಪ, ಶ್ರೀ ರಾಮನ ಉಪಾಸನೆಗಳನ್ನು ಮಾಡುವುದರಿಂದ ಬಹಳ ಪ್ರಯೋಜನ ಪಡೆಯಬಹುದೆಂದು ಹೇಳಲಾಗುತ್ತದೆ.

Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ
ಶ್ರೀ ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವ, ಪುನರ್ವಸು ನಕ್ಷತ್ರದಲ್ಲಿ ಪೂಜಾ ಮುಹೂರ್ತ ವಿವರ ಇಲ್ಲಿದೆ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 09, 2022 | 6:06 AM

ಮಹಾವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನು ಜನಿಸಿದ ನವಮಿ ದಿನ ಶ್ರೀ ರಾಮ ನವಮಿ ಹಬ್ಬ ಆಚರಿಸಲಾಗುತ್ತದೆ. ಈ ಬಾರಿ ಬಾಳೆ ಭಾನುವಾರ ಏಪ್ರಿಲ್ 10ರಂದು ಆಚರಿಸಲಾಗುವುದು. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಕಟಕ ರಾಶಿಯಲ್ಲಿ, ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ (Muhurat) ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಶ್ರೀ ರಾಮ ನವಮಿ ಎಂದರೆ ಹಬ್ಬದ ಸಂಭ್ರಮ (Spiritual). ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ (Ram Navami 2022).

  1. ಈ ಬಾರಿ ರಾಮ ನವಮಿ ಪೂಜಾ ಮುಹೂರ್ತ ನವಮಿ ತಿಥಿ ಆರಂಭ ಕಾಲ: 10 ಏಪ್ರಿಲ್‌ 2022 ಪ್ರಾತಃಕಾಲ 01:23 am ನವಮಿ ತಿಥಿ ಅಂತ್ಯ ಕಾಲ: 11 ಏಪ್ರಿಲ್‌ 2022 ಪ್ರಾತಃಕಾಲ 03:15 am ರಾಮ ನವಮಿ ಪೂಜೆ ಮುಹೂರ್ತ: ಹಗಲು 11:10 ರಿಂದ ಮಧ್ಯಾಹ್ನ 01:32

ಪೌರಾಣಿಕ ಹಿನ್ನೆಲೆ ಧರ್ಮ ಶಾಸ್ತ್ರಗಳ ಪ್ರಕಾರ ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಎಂಬ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ಶ್ರೀ ರಾಮ ನವಮಿಯ ಮಹತ್ವ ಶ್ರೀ ರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ತ್ವ, ಮಹ್ವತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀ ರಾಮ ನವಮಿಯಂದು ಶ್ರೀ ರಾಮ ತತ್ತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮ ನಾಮ ಜಪ, ಶ್ರೀ ರಾಮನ ಉಪಾಸನೆಗಳನ್ನು ಮಾಡುವುದರಿಂದ ಬಹಳ ಪ್ರಯೋಜನ ಪಡೆಯಬಹುದೆಂದು ಹೇಳಲಾಗುತ್ತದೆ.

ರಾಮ ನವಮಿಯ ಆಧ್ಯಾತ್ಮಿಕ ಮಹತ್ವ

  1. ರಾಮ:  ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ ‘ರಾ’ ಎಂದರೆ ಬೆಳಕು ‘ಮ’ ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.
  2. ದಶರಥ: ಶ್ರೀರಾಮನ ತಂದೆ ದಶರಥ ‘ದಶ’ ಎಂದರೆ ಹತ್ತು, ‘ರಥ’ ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.
  3. ಕೌಸಲ್ಯಾ: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ ‘ಕೌಶಲ್ಯ’. ಒಬ್ಬ ನುರಿತ ಸಾರಥಿ ಹತ್ತು ರಥಗಳ ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.
  4. ಆಯೋಧ್ಯೆ: ಶ್ರೀ ರಾಮ ಜನಿಸಿದ ಸ್ಥಳ. ‘ಯೋಧ್ಯಾ’ ಎಂದರೆ ಯುದ್ಧ, ‘ಅ’ ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.

ಶ್ರೀ ರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು ಏನು ಗೊತ್ತಾ? ​ನಮ್ಮೊಳಗಿರುವ ಶ್ರೀ ರಾಮ: ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ!

ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್‌ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.

ರಾಮ ನವಮಿ ಆಚರಣೆ ಅಂದರೆ ಉಪವಾಸ ಮಾಡುತ್ತಾ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಕಲ್ಯಾಣ್ಯೋತ್ಸವ ಮಾಡಬೇಕು: ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಬತ್ತು ದಿನಗಳವರೆಗೆ ರಾಮ ನವಮಿ ಉತ್ಸವವು ನಡೆಯುತ್ತದೆ. ರಾಮ ನವಮಿಯಂದು ಶ್ರೀ ರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ. ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮ ನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.

ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಬತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ. ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ. ‌

ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ಅವರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟರು. ಅವರು ತಮ್ಮನ್ನು ತಾವು ಆದರ್ಶ ಪುರುಷ ಎಂದು ಜೀವನದುದ್ದಕ್ಕೂ ನೋಡಿಕೊಂಡರು. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದನು.

ರಾಮ ನವಮಿಯ ಪೂಜೆ ವಿಧಾನ:

  1. ರಾಮ ನವಮಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ. ಇದರೊಂದಿಗೆ ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
  2.  ರಾಮನ ಪೂಜೆಯಲ್ಲಿ ತುಳಸಿ ಪತ್ರೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
  3.  ಮರದ ಪೀಠವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ರಾಮನು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನು ಸ್ಥಾಪಿಸಿ.
  4. ಇದರ ನಂತರ ಗಂಗಾಜಲವನ್ನು ಸಿಂಪಡಿಸಿ ಮತ್ತು ಅಕ್ಕಿಯಿಂದ ಅಷ್ಟ ದಳವನ್ನು ಮಾಡಿ. ಅಷ್ಟ ದಳದ ಮೇಲೆ ತಾಮ್ರದ ಕಲಶವನ್ನು ಇಟ್ಟು ನಾಲ್ಕು ಮುಖದ ದೀಪವನ್ನು ಬೆಳಗಿಸಿ.
  5. ಬೇಕಿದ್ದರೆ ತೊಟ್ಟಿಲಿನಲ್ಲಿ ಬಾಲ ರಾಮನ ಅಥವಾ ರಾಮ ಲೀಲೆಯ ವಿಗ್ರಹವನ್ನು ಇಟ್ಟು ತೂಗಿ, ನಂತರ ರಾಮನಿಗೆ ಆರತಿಯನ್ನು ಮಾಡಬೇಕು ಅಥವಾ ವಿಷ್ಣು ಸಹಸ್ರನಾಮ ಪಠಿಸಬಹುದು. ಇದರ ನಂತರ ಪಾಯಸ, ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸಿ.
  6. ಈ ದಿನ ನೀವು ರಾಮನ ಭಕ್ತಿಯಲ್ಲಿ ಮುಳುಗಿ ಕೀರ್ತನೆಯನ್ನು ಹಾಡಬಹುದು. ಹಾಗೂ ಈ ದಿನ ರಾಮಚರಿತ ಮಾನಸ ಮತ್ತು ರಾಮ ಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ಸಂಜೆ ರಾಮನಿಗೆ ಸಂಬಂಧಿಸಿದ ಕಥೆಯನ್ನು ಕೂಡ ಕೇಳಿ.
  7. ರಾಮನವಮಿ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದು ಶ್ರೀರಾಮನ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಹೆಚ್ಚು ಸಹಕಾರಿಯಾಗಿದೆ.

ರಾಮ ನವಮಿಯಂದು ಈ ಮೇಲಿನಂತೆ ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನವಮಿ ವ್ರತವನ್ನು ಆಚರಿಸುವುದರಿಂದ ಭಗವಾನ್‌ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ರಾಮ ನವಮಿ ದಿನದಂದು ಶುಭ ಮುಹೂರ್ತದಲ್ಲಿ ರಾಮನನ್ನು ಪೂಜಿಸಿದರೆ ಪೂಜೆಯ ಫಲ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದು ವಾಡಿಕೆ. (ಬರಹ -ವಾಟ್ಸಪ್ ಸಂದೇಶ)

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ