Daily Devotional: ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರ ಮಹತ್ವ ಮತ್ತು ಪ್ರಯೋಜನ

ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ಅತ್ಯಂತ ಶ್ರೇಷ್ಠ. ಇದು ಏಳು ಜನ್ಮಗಳ ಪಾಪಗಳನ್ನು ನಿವಾರಿಸಿ, ಆಸೆಗಳನ್ನು ಈಡೇರಿಸುತ್ತದೆ. ಬಿಲ್ವಪತ್ರೆಯನ್ನು ಶ್ರೀವೃಕ್ಷವೆಂದು ಕರೆಯಲಾಗಿದ್ದು, ಇದು ಬ್ರಹ್ಮ-ವಿಷ್ಣು-ಮಹೇಶ್ವರ ಹಾಗೂ ಮಹಾಲಕ್ಷ್ಮಿಯ ಆವಾಸಸ್ಥಾನವಾಗಿದೆ. ಸಕಲ ಸಮಸ್ಯೆಗಳ ನಿವಾರಣೆಗಾಗಿ ಈ ಮಾಸದಲ್ಲಿ ಬಿಲ್ವಾರ್ಚನೆ ಮಾಡುವುದು ಪುಣ್ಯಕರ.

Daily Devotional: ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದರ ಮಹತ್ವ ಮತ್ತು ಪ್ರಯೋಜನ
ಬಿಲ್ವಾರ್ಚನೆ

Updated on: Oct 31, 2025 | 12:10 PM

ಕಾರ್ತಿಕ ಮಾಸದಲ್ಲಿ ಬಿಲ್ವಾರ್ಚನೆಯ ಮಹತ್ವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಕಾರ್ತಿಕ ಮಾಸದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಕೆಲವು ವಿಧಿ ವಿಧಾನಗಳನ್ನು ಪಾಲಿಸುವುದು ಉತ್ತಮ. ಬಿಲ್ವಪತ್ರೆಗೆ ಗಂಧವನ್ನು ಲೇಪಿಸಿ, ಅದರ ಮೇಲೆ ಓಂಕಾರವನ್ನು ಬರೆದು ಶಿವಲಿಂಗ, ಶಿವನ ಭಾವಚಿತ್ರ, ಶಿವನ ದೇವಾಲಯದಲ್ಲಿ ಅಥವಾ ಬಸವನ ಬಳಿ ಇಟ್ಟು ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗಬಹುದು. ಸ್ಕಾಂದ ಪುರಾಣದಲ್ಲಿ ಬಿಲ್ವವೃಕ್ಷದ ಮಹತ್ವವನ್ನು ಸವಿವರವಾಗಿ ತಿಳಿಸಲಾಗಿದೆ. ಬಿಲ್ವಪತ್ರೆಯ ಬೇರು, ಕಾಂಡ, ಎಲೆಗಳು ಸೇರಿದಂತೆ ಸಸ್ಯದ ಪ್ರತಿಯೊಂದು ಭಾಗವೂ ದೈವೀ ಸ್ವರೂಪವನ್ನು ಹೊಂದಿದೆ.

ಕಾರ್ತಿಕ ಮಾಸದ ಸಂಧ್ಯಾಕಾಲದಲ್ಲಿ, ಶಿವನ ದೇವಾಲಯದಲ್ಲಿ ಅಥವಾ ಮನೆಯಲ್ಲೇ ಬಿಲ್ವಪತ್ರೆಯನ್ನು ಇಟ್ಟು ಓಂ ನಮಃ ಶಿವಾಯ ಮಂತ್ರವನ್ನು ಜಪಿಸುವುದರಿಂದ ಅಪಮೃತ್ಯುವಿನಿಂದ ದೂರ ಉಳಿಯಬಹುದು, ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು, ಯಶಸ್ಸು ಪ್ರಾಪ್ತವಾಗುತ್ತದೆ ಮತ್ತು ಶತ್ರುಗಳ ಕಂಟಕಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!

ಬಿಲ್ವಪತ್ರೆ ಕೀಳುವಾಗ ಈ ನಿಯಮ ತಿಳಿದಿರಲಿ:

ಬಿಲ್ವಪತ್ರೆ ಎಲೆ ಕೀಳುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಕತ್ತರಿಯಿಂದ ಎಲೆಗಳನ್ನು ಕತ್ತರಿಸುವುದು ಶುಭವಲ್ಲ. ಯಾವಾಗಲೂ ಗಂಧಲೇಪನ ಮಾಡಿ ಅರ್ಪಿಸುವುದು ಶ್ರೇಷ್ಠ. ಬಿಲ್ವಪತ್ರೆ ಒಣಗಿದರೂ ಸಹ ಅದನ್ನು ಭಗವಂತನಿಗೆ ಅರ್ಪಿಸಬಹುದು.

ಮಕರ ಸಂಕ್ರಾಂತಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಏಕಾದಶಿ ಇಂತಹ ವಿಶೇಷ ದಿನಗಳಂದು ಬಿಲ್ವಪತ್ರೆಯನ್ನು ಕೀಳುವುದು ನಿಷಿದ್ಧ. ಅಲ್ಲದೆ, ರಾತ್ರಿ ಸಮಯದಲ್ಲಿ, ಸೂರ್ಯನ ಪ್ರಕಾಶವಿಲ್ಲದಾಗ ಬಿಲ್ವಪತ್ರೆಯನ್ನು ಕೀಳಬಾರದು. ಸೂರ್ಯೋದಯದ ಸಮಯದಲ್ಲಿ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಬಿಲ್ವಪತ್ರೆಯನ್ನು ಕೀಳುವುದು ಉತ್ತಮ.

ಕಾರ್ತಿಕ ಮಾಸದಲ್ಲಿ ಕೇವಲ ಒಂದು ಬಿಲ್ವಪತ್ರೆಯನ್ನು ಶಿವನಿಗೆ ಏಕಬಿಲ್ವಂ ಶಿವಾರ್ಪಣಂ ಎಂದು ಅರ್ಪಿಸಿದರೆ ಸಾಕು. ಇದು ಕುಟುಂಬದ ಸಮಸ್ಯೆಗಳು, ಅನಾರೋಗ್ಯ, ವ್ಯಾಪಾರ-ವ್ಯವಹಾರದ ತೊಂದರೆಗಳು ಸೇರಿದಂತೆ ಸಕಲ ಸಂಕಟಗಳಿಂದ ಮುಕ್ತಿ ನೀಡುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ