Daily Devotional: ದೀಪ ನಂದಿದ ಬಳಿಕದ ಬತ್ತಿಯ ಮಹತ್ವ ಮತ್ತು ಅದೃಷ್ಟ ವೃದ್ಧಿಗೆ ಸರಳ ಕ್ರಮ
ದೀಪ ನಂದಿದ ಬಳಿಕ ಅದರ ಬತ್ತಿಗಳನ್ನು ಕಸಕ್ಕೆ ಬಿಸಾಡುವುದು ಅದೃಷ್ಟ ಕಳೆದುಕೊಳ್ಳಲು ಕಾರಣವಾಗುತ್ತದೆ. ಸುಟ್ಟ ಬತ್ತಿಗಳಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಅವುಗಳನ್ನು ಸಂಗ್ರಹಿಸಿ ಹುಣ್ಣಿಮೆ, ಅಮಾವಾಸ್ಯೆ, ಅಥವಾ ಪರ್ವ ದಿನಗಳಲ್ಲಿ ಕರ್ಪೂರ-ತುಪ್ಪದೊಂದಿಗೆ ಸುಟ್ಟು ಬರುವ ವಿಭೂತಿಯನ್ನು ಹಚ್ಚಿಕೊಂಡರೆ ಶುಭ ಫಲಗಳು ಹಾಗೂ ಅದೃಷ್ಟ ಪ್ರಾಪ್ತಿಯಾಗುತ್ತದೆ.
ಬೆಂಗಳೂರು, ಅಕ್ಟೋಬರ್ 31: ಪ್ರತಿದಿನ ಮನೆಯಲ್ಲಿ ದೀಪವನ್ನು ಹಚ್ಚುವುದು ಹಿಂದೂ ಸಂಪ್ರದಾಯದ ಒಂದು ಅವಿಭಾಜ್ಯ ಅಂಗವಾಗಿದೆ. ದೀಪವು ಜ್ಞಾನ, ಬೆಳಕು ಮತ್ತು ಶುಭದ ಸಂಕೇತ. ಆದರೆ, ದೀಪ ನಂದಿದ ನಂತರ ಅದರ ಬತ್ತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಶಾಸ್ತ್ರಗಳ ಪ್ರಕಾರ, ಈ ಸುಟ್ಟ ಬತ್ತಿಗಳನ್ನು ಅಸಡ್ಡೆಯಿಂದ ಕಸಕ್ಕೆ ಬಿಸಾಡುವುದು ಅಥವಾ ನಿರ್ಲಕ್ಷಿಸುವುದು ಸೂಕ್ತವಲ್ಲ. ಯಾಕೆಂದರೆ, ದೀಪ ಉರಿಯುವಾಗ ಸಂಗ್ರಹವಾದ ಧನಾತ್ಮಕ ಶಕ್ತಿ ಆ ಬತ್ತಿಗಳಲ್ಲಿ ಅಡಗಿರುತ್ತದೆ. ಅವುಗಳನ್ನು ಬಿಸಾಡುವುದರಿಂದ ಅದೃಷ್ಟವೂ ಹೊರಟುಹೋಗುತ್ತದೆ ಎಂದು ನಂಬಲಾಗಿದೆ.
ಹಾಗಿದ್ದರೆ, ದೀಪದ ಬತ್ತಿಗಳನ್ನು ಏನು ಮಾಡಬೇಕು? ದೀಪ ಆರಿದ ಬಳಿಕ, ಸುಟ್ಟ ಬತ್ತಿಗಳನ್ನು ಸಂಗ್ರಹಿಸಿ ಒಂದು ಡಬ್ಬದಲ್ಲಿ ಇಡಬೇಕು. ಹುಣ್ಣಿಮೆ, ಅಮಾವಾಸ್ಯೆ, ಅಷ್ಟಮಿ, ನವಮಿ ಅಥವಾ ಇತರ ಪರ್ವ ಕಾಲಗಳಲ್ಲಿ ಈ ಸಂಗ್ರಹಿಸಿದ ಬತ್ತಿಗಳ ಮೇಲೆ ಸ್ವಲ್ಪ ಕರ್ಪೂರ ಹಾಗೂ ಸಾಧ್ಯವಾದರೆ ತುಪ್ಪವನ್ನು ಹಾಕಿ ಮತ್ತೆ ಹಚ್ಚಬೇಕು. ಇದರಿಂದ ಬರುವ ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳಬಹುದು, ಮಕ್ಕಳಿಗೆ ಇಡಬಹುದು, ಅಥವಾ ಯಾವುದೇ ಶುಭ ಕಾರ್ಯಗಳಿಗೆ ಹೋಗುವ ಮುನ್ನ ಹಚ್ಚಿಕೊಂಡು ಹೋದರೆ ಒಳ್ಳೆಯದಾಗುತ್ತದೆ. ಮನೆಯ ಸಿಂಹದ್ವಾರದಲ್ಲಿ ಈ ವಿಭೂತಿಯನ್ನು ಹಚ್ಚುವುದರಿಂದ ಶ್ರೇಯಸ್ಸು, ಕೀರ್ತಿ, ಪ್ರತಿಷ್ಠೆ ವೃದ್ಧಿಯಾಗುತ್ತದೆ ಹಾಗೂ ವಾಮಾಚಾರದಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದು ನಂಬಿಕೆಯ ಆಧಾರದ ಮೇಲೆ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.

