Daily Devotional: ಹೆಬ್ಬೆರಳಿನ ಮೂಲಕ ತರ್ಪಣ ಬಿಡುವುದು ಯಾಕೆ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಹೆಬ್ಬೆರಳಿನ ಮೂಲಕ ತರ್ಪಣ ಬಿಡುವುದು ಹಿಂದೂ ಆಚರಣೆಗಳಲ್ಲಿ ಆಳವಾದ ಮಹತ್ವ ಹೊಂದಿದೆ. ಇದು ಕೇವಲ ಒಂದು ಕ್ರಿಯೆಯಲ್ಲ, ಬದಲಿಗೆ ಪೂರ್ವಿಕರಿಗೆ ಸಲ್ಲಿಸುವ ಗೌರವ ಮತ್ತು ದೇಹದ ಪ್ರತಿನಿಧಿಯಾಗಿದೆ. ಹೆಬ್ಬೆರಳು ಶುಕ್ರ ಗ್ರಹವನ್ನು ಹಾಗೂ ಇಡೀ ದೇಹವನ್ನು ಪ್ರತಿನಿಧಿಸುತ್ತದೆ. ಇದರ ಮೂಲಕ ಎಳ್ಳು ನೀರು ಬಿಡುವುದರಿಂದ ಪಿಂಡ ಪ್ರದಾನವು ಪರಿಶುದ್ಧವಾಗುತ್ತದೆ ಎಂದು ನಂಬಲಾಗಿದೆ.

ತರ್ಪಣ ವಿಧಿಯಲ್ಲಿ ಹೆಬ್ಬೆರಳಿನ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳವಂತೆ ಪ್ರತಿಯೊಂದು ಆಚರಣೆಗೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ನಿರ್ದಿಷ್ಟ ವಿಧಾನಗಳಿವೆ. ದೇವರಿಗೆ ಪೂಜೆ ಸಲ್ಲಿಸುವಾಗ ಷೋಡಶೋಪಚಾರ, ಅಭಿಷೇಕಗಳು, ಅಲಂಕಾರಗಳು ಇವೆಲ್ಲವೂ ಮನಸ್ಸು, ಕೈಗಳು ಮತ್ತು ಬೆರಳುಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕೂಡಿರುತ್ತವೆ.
ಆದರೆ, ವಿಶೇಷವಾಗಿ ಅಪರ ಕಾರ್ಯಗಳು ಮತ್ತು ಶ್ರಾದ್ಧ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಹೆಬ್ಬೆರಳಿನಿಂದ ಎಳ್ಳು ನೀರನ್ನು ತರ್ಪಣ ರೂಪದಲ್ಲಿ ಬಿಡುವುದು ಏಕೆ ಎಂಬ ಕುತೂಹಲ ಮೂಡುತ್ತದೆ. ಇಷ್ಟೊಂದು ಬೆರಳುಗಳಿದ್ದರೂ, ನಾವು ಕುಂಕುಮ ಇಡಲು ಒಂದು ಬೆರಳನ್ನು, ವಿಭೂತಿ ಹಚ್ಚಲು ಮೂರು ಬೆರಳುಗಳನ್ನು ಬಳಸುತ್ತೇವೆ. ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಬೆರಳುಗಳಿಗೆ ನಿರ್ದಿಷ್ಟ ಮಹತ್ವವನ್ನು ನೀಡಲಾಗಿದೆ. ಪ್ರಾಚೀನ ಕಾಲದಿಂದಲೂ ಈ ಬೆರಳುಗಳ ಮಹತ್ವವನ್ನು ಎತ್ತಿಹಿಡಿಯಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಬೆರಳುಗಳು ವಿವಿಧ ಗ್ರಹಗಳನ್ನು ಪ್ರತಿನಿಧಿಸುತ್ತವೆ. ಹೆಬ್ಬೆರಳು ಶುಕ್ರ ಗ್ರಹದ ಪ್ರತೀಕವಾಗಿದೆ. ತೋರುಬೆರಳು ಗುರುವಿನ ಪ್ರತಿನಿಧಿಯಾಗಿದ್ದು, ಪುಷ್ಯರಾಗದಂತಹ ರತ್ನಗಳನ್ನು ಇದಕ್ಕೆ ಧರಿಸಲು ಸಲಹೆ ನೀಡಲಾಗುತ್ತದೆ. ಮಧ್ಯದ ಬೆರಳು ಶನಿಯನ್ನು ಪ್ರತಿನಿಧಿಸುತ್ತದೆ, ಇದು ಆಲಸ್ಯ, ನಿಧಾನ ಮತ್ತು ತಡದ ಗುಣಗಳನ್ನು ಸೂಚಿಸುತ್ತದೆ. ಉಂಗುರದ ಬೆರಳು ರವಿ ಅಂದರೆ ಸೂರ್ಯನನ್ನು ಪ್ರತಿನಿಧಿಸುತ್ತದೆ. ಈ ಬೆರಳಿಗೆ ದರ್ಭೆಯಿಂದ ಮಾಡಿದ ಪವಿತ್ರವನ್ನು ಏಕೆ ಧರಿಸುತ್ತೇವೆಂದರೆ, ಸೂರ್ಯನು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾನೆ, ಆರೋಗ್ಯವನ್ನು ವೃದ್ಧಿಸುತ್ತಾನೆ, ದೃಢ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತಾನೆ ಮತ್ತು ಕೆಲಸ ಕಾರ್ಯಗಳಲ್ಲಿ ಜಯವನ್ನು ತರುತ್ತಾನೆ. ಕಡೆ ಬೆರಳು ಬುಧ ಗ್ರಹದ ಪ್ರತಿನಿಧಿಯಾಗಿದೆ. ಹೀಗೆ, ನಮ್ಮ ಐದು ಬೆರಳುಗಳು ಐದು ಪ್ರಮುಖ ಗ್ರಹಗಳನ್ನು ಪ್ರತಿನಿಧಿಸುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬಡ್ಡಿ ವ್ಯಾಪಾರ ಮಾಡುವುದು ಶುಭವೇ, ಅಶುಭವೇ? ಧರ್ಮಶಾಸ್ತ್ರಗಳು ಹೇಳುವುದೇನು?
ಈ ಗ್ರಹಗಳ ಪ್ರತಿನಿಧಿತತ್ವದ ಜೊತೆಗೆ, ತರ್ಪಣದಂತಹ ಪ್ರಮುಖ ಕಾರ್ಯಗಳಲ್ಲಿ ಹೆಬ್ಬೆರಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ. ಹೆಬ್ಬೆರಳು ಶುಕ್ರನ ಪ್ರತೀಕವಾಗಿರುವುದರ ಜೊತೆಗೆ, ಇದು ಇಡೀ ದೇಹವನ್ನು ಪ್ರತಿನಿಧಿಸುತ್ತದೆ. ಜನ್ಮ ಲಗ್ನಕ್ಕೆ ಜಾತಕದಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಹೆಬ್ಬೆರಳಿಗೂ ಇದೆ. ಲಗ್ನವು ಆತ್ಮಕಾರಕವನ್ನು ಪ್ರತಿನಿಧಿಸುವಂತೆ, ಹೆಬ್ಬೆರಳು ಇಡೀ ದೇಹದ ಶಕ್ತಿಯನ್ನು ಹೊಂದಿರುತ್ತದೆ. ಆಸ್ತಿ ನೋಂದಣಿ ಮಾಡುವಾಗ ಹೆಬ್ಬೆಟ್ಟು ಗುರುತು ಹಾಕುವುದು ಪದ್ಧತಿ. ಇದು ಪೂರ್ವಿಕರ ಆಸ್ತಿಯ ಭಾರವನ್ನು ಮತ್ತು ಅಂಶವನ್ನು ಸೂಚಿಸುತ್ತದೆ. ನಮ್ಮ ತಂದೆಯವರು ಹೆಬ್ಬೆಟ್ಟು ಹಾಕಿ ನೋಂದಾಯಿಸಿದ ಆಸ್ತಿಯನ್ನು ನಾವು ಪಡೆಯಲು ನಮ್ಮ ಹೆಬ್ಬೆಟ್ಟು ಗುರುತು ಮುಖ್ಯವಾಗುತ್ತದೆ.
ಈ ಕಾರಣಗಳಿಂದಾಗಿ, ಶಂಖ, ಚಕ್ರಗಳಿಗೆ ಪ್ರಾಶಸ್ತ್ಯ ನೀಡುವಂತೆ, ತರ್ಪಣ ಬಿಡುವಾಗ ಎಳ್ಳು ನೀರನ್ನು ಹೆಬ್ಬೆರಳಿನ ಮೂಲಕ ಬಿಡುವುದು ಅತಿ ಮುಖ್ಯ. ಹೆಬ್ಬೆರಳಿನ ಮುಖಾಂತರ ಎಳ್ಳು ನೀರು ಬಿಟ್ಟಾಗ ಮಾತ್ರ ಅದು ಸಂಪೂರ್ಣವಾಗಿ ಪರಿಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಹೀಗೆ, ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಹೆಬ್ಬೆರಳಿನ ಬಳಕೆ ಆಳವಾದ ಧಾರ್ಮಿಕ, ಜ್ಯೋತಿಷ್ಯ ಮತ್ತು ಸಾಂಪ್ರದಾಯಿಕ ಅರ್ಥವನ್ನು ಹೊಂದಿದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Sun, 9 November 25




