ನಂಬಿಕೆಗಳಿಗೆ ತರ್ಕ, ವಿಜ್ಞಾನದ ತಳಹದಿ ಇರಲೇಬೇಕಾ? ಎಲ್ಲವನ್ನೂ ಪ್ರಶ್ನೆ ಮಾಡಿದ ನಂತರವೇ ಒಪ್ಪಿಕೊಳ್ಳಬೇಕಾ? ನಮಗೆ ಒಳಿತಾಗುವುದಾದರೆ ಅದಕ್ಕೆ ಕಾರಣವಾದರೂ ಯಾಕೆ ಬೇಕು? ಹೀಗೆ ಆಲೋಚಿಸುವವರೂ ಇದ್ದಾರೆ. ಸುಮ್ಮನೆ ಏನನ್ನೂ ಒಪ್ಪಬಾರದು. ತರ್ಕ, ವೈಜ್ಞಾನಿಕ ತಳಹದಿ ಇಲ್ಲದ್ದು ಯಾಕೆ ಒಪ್ಪಿಕೊಳ್ಳಬೇಕು ಎನ್ನುವವರೂ ಇದ್ದಾರೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಎರಡೂ ಬಗೆಯ ಆಲೋಚನೆಯ ಸರಿಯಾದದ್ದೇ. ಏಕೆಂದರೆ, ಜ್ಯೋತಿಷ, ವಾಸ್ತು ಮತ್ತಿತರ ವಿಚಾರಗಳಲ್ಲಿ ಅಂಥ ಕೆಲ ಮಾಹಿತಿಗಳಿವೆ. ಅವುಗಳಿಗೆ ನಂಬಿಕೆಯನ್ನು ಹೇಳಬಹುದೇ ವಿನಾ ತರ್ಕವನ್ನೋ ವೈಜ್ಞಾನಿಕ ಕಾರಣವನ್ನೋ ಅಲ್ಲ. ಈ ಲೇಖನದಲ್ಲಿ ಅಂಥದ್ದೇ ಮಾಹಿತಿ ಇದೆ. ಇವುಗಳನ್ನು ಸಂಜೆ ಸೂರ್ಯ ಮುಳುಗಿದ ನಂತರ ಮನೆಯಿಂದ ಹೊರಗೆ ನೀಡಬಾರದು ಎನ್ನುತ್ತದೆ ಜ್ಯೋತಿಷ. ಯಾವುದವು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹಣ
ಲಕ್ಷ್ಮೀ ದೇವಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಂಜೆ ಸೂರ್ಯಾಸ್ತದ ನಂತರ ಬೇರೆಯವರಿಗೆ ಹಣ ನೀಡಿದಲ್ಲಿ ಆ ವ್ಯಕ್ತಿ ಹಾಗೂ ಮನೆಯಿಂದ ಲಕ್ಷ್ಮೀದೇವಿ ದೂರವಾಗುತ್ತಾಳೆ ಎಂಬ ನಂಬಿಕೆಯಿದೆ.
ಹಾಲು
ಅದೇ ರೀತಿ ಹಾಲನ್ನು ವಿಷ್ಣು ಹಾಗೂ ಲಕ್ಷ್ಮಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷದ ಪ್ರಕಾರವಾಗಿ, ಸೂರ್ಯಾಸ್ತದ ನಂತರ ಯಾರಾದರೂ ಹಾಲನ್ನು ಬೇರೆ ಮನೆಗೆ ನೀಡಿದಲ್ಲಿ ಲಕ್ಷ್ಮೀ ಕೋಪಿಸಿಕೊಳ್ಳುತ್ತಾಳೆ. ಆ ಮನೆಯಲ್ಲಿ ಬೆಳವಣಿಗೆ ನಿಂತುಹೋಗುತ್ತದೆ.
ಮೊಸರು
ಮೊಸರು ಅಂದರೆ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದು. ಒಬ್ಬ ವ್ಯಕ್ತಿಗೆ ಸಂತೋಷ ಹಾಗೂ ವೈಭವದ ಜೀವನ ದೊರೆಯುವುದು ಇದರಿಂದ. ಯಾರಾದರೂ ತಮ್ಮ ಮನೆಯಿಂದ ಮೊಸರನ್ನು ಬೇರೆಯವರಿಗೆ ಸೂರ್ಯಾಸ್ತದ ನಂತರ ನೀಡಿದಲ್ಲಿ ಆ ಮನೆಯಲ್ಲಿ ಇರುವವರ ಸಂತೋಷ ಹಾಗೂ ವೈಭವದಲ್ಲಿ ಕೊರತೆ ಆಗುತ್ತದೆ.
ಅರಿಶಿಣ
ಅರಿಶಿಣ ಕೂಡ ಗುರು ಗ್ರಹಕ್ಕೆ ಸಂಬಂಧಿಸಿದ್ದು. ಒಂದು ವೇಳೆ ಸೂರ್ಯಾಸ್ತದ ನಂತರ ಅರಿಶಿಣ ಇನ್ನೊಬ್ಬರಿಗೆ ನೀಡಿದರೆ ಗುರು ದುರ್ಬಲವಾಗುತ್ತದೆ. ಇದರಿಂದ ಆ ಕುಟುಂಬದಲ್ಲಿನ ವ್ಯಕ್ತಿಗಳಿಗೆ ಸಂಪತ್ತು ಮತ್ತು ಆರೋಗ್ಯದಲ್ಲಿ ಕೊರತೆ ಆಗುತ್ತದೆ.
ಬೆಳ್ಳುಳ್ಳಿ ಹಾಗೂ ಈರುಳ್ಳಿ
ಜ್ಯೋತಿಷ ಪ್ರಕಾರ ಕೇತು ಗ್ರಹವನ್ನು ಪ್ರತಿನಿಧಿಸುತ್ತವೆ ಬೆಳ್ಳುಳ್ಳಿ ಹಾಗೂ ಈರುಳ್ಳಿ. ಈ ಗ್ರಹವು ವಾಮಾಚಾರ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಸೂರ್ಯಾಸ್ತದ ನಂತರ ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ನೀಡಬಾರದು.
ಅಂದಹಾಗೆ, ಆರಂಭದಲ್ಲೇ ತಿಳಿಸಿದಂತೆ ಇದು ನಂಬಿಕೆಗೆ ಸಂಬಂಧಪಟ್ಟಿದ್ದು. ಹಾಗಿದ್ದರೆ ಹಾಲು- ಮೊಸರಿನ ಅಂಗಡಿಯವರು, ಕೆಎಂಎಫ್ನವರು, ಗ್ರಂಥಿಗೆ ಅಂಗಡಿಯವರು, ಎಟಿಎಂಗಳನ್ನು ಇಟ್ಟಿರುವ ಬ್ಯಾಂಕ್ನವರು ಏನು ಮಾಡಬೇಕು ಅನ್ನೋ ಪ್ರಶ್ನೆಗಳನ್ನು ಕೇಳುವವರಿದ್ದಲ್ಲಿ, ದಯವಿಟ್ಟು ಕ್ಷಮಿಸಿ; ಇದು ಆಯಾ ವ್ಯಕ್ತಿಯ ನಂಬಿಕೆಯ ಸಂಗತಿ. ಪಾಲಿಸಲೇಬೇಕು ಎಂಬ ಬಲವಂತ ಯಾರಿಗೂ ಇಲ್ಲ.
(Money, milk, yogurt, turmeric, onion and garlic these 6 things should not give outside the home after sunset according to Astrology. Know why?)