ಕಾರ್ತಿಕ ಮಾಸದ ಹಬ್ಬಗಳಲ್ಲಿ ತುಳಸೀ ವಿವಾಹ ಅಥವಾ ತುಳಸೀ ಪೂಜೆ ವಿಶೇಷ. ಪ್ರತಿ ಭಾರತೀಯರೂ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಇದು ರಾತ್ರಿ ಆಚರಿಸುವ ಹಬ್ಬ. ಏಕಾದಶೀ ತಿಥಿಯಂದು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇದನ್ನು ಉತ್ಥಾನ ದ್ವಾದಶೀ ಎಂದೂ ಕರೆಯುವುದುಂಟು. ಶಯನೈಕಾದಶಿಯಂದು ಮಲಗಿದ ವಿಷ್ಣು ಇಂದು ಏಳುತ್ತಾನೆ. ಹಾಗಾಗಿ ಇದನ್ನು ಪ್ರಬೋಧಿನೀ ಏಕಾದಾಶೀ ಎಂದೂ ಕರೆಯುತ್ತಾರೆ.
ಜಲಂಧರ ಎನ್ನುವ ರಾಕ್ಷಸನನ್ನು ವಿವಾಹವಾದವಳು ವೃಂದಾ. ಆಕೆಯೇ ತುಳಸೀ. ಜಲಂಧರನಿಂದ ಲೋಕಕ್ಕೆ ಕಂಟಕವೊದಗಿ ಬಂದಿತು. ಆ ಕಾರಣಕ್ಕೆ ಮಹಾವಿಷ್ಣು ಜಲಂಧರನ ರೂಪ ಧರಿಸಿ ನಿಜವಾದ ಜಲಂಧರನನ್ನು ಸಂಹರಿಸಿದ. ಅನಂತರ ತನ್ನ ರೂಪವನ್ನು ತೋರಿಸುತ್ತಾನೆ. ಕೋಪಗೊಂಡ ವೃಂದಾ ಮಹಾವಿಷ್ಣುವಿಗೆ ಶಾಪವನ್ನು ಕೊಡುತ್ತಾಳೆ. ನಿನಗೂ ಪತ್ನಿ ವಿಯೋಗವಾಗಲಿ ಎಂದು. ಶಾಪದ ಫಲವಾಗಿ ರಾಮನ ಅವತರಾದಲ್ಲಿ ವಿಯೋಗವೂ ಆಯಿತು.
ವೃಂದೆಯೂ ಮತ್ತೆ ತುಳಸೀ ರೂಪವನ್ನು ತಾಳುತ್ತಾಳೆ. ಮಹಾವಿಷ್ಣುವೂ ಸಾಲಗ್ರಾಮ ರೂಪದಲ್ಲಿ ನೆಲೆಸುತ್ತಾನೆ. ಮಹಾವಿಷ್ಣುವಿಗೆ ವೃಂದಾಳ ಪಾತಿವ್ರತ್ಯ ಇಷ್ಟವಾಗುತ್ತದೆ. ಆದರೆ ಲೋಕಕಂಟಕ ಜಲಂಧರನನ್ನು ಸಂಹರಿಸದೇ ಬೇರೆ ಉಪಾಯವಿರಲಿಲ್ಲ. ಅದಕ್ಕಾಗಿ ತುಳಸಿಯನ್ನು ವಿವಾಹವಾಗುತ್ತಾನೆ. ಮುಂದೆ ಸಾಲಗ್ರಾಮದ ರೂಪದಲ್ಲಿ ಇರುವ ಮಹಾವಿಷ್ಣುವಿಗೆ ತುಳಸಿ ಪ್ರಿಯವಾದುದಾಗುತ್ತದೆ. ಇದರ ಒಂದು ವಿವಾಹವನ್ನು ತುಳಸಿಯ ಜೊತಡ ನೆಲ್ಲಿಕಾಯಿಯನ್ನು ಇಟ್ಟು ಪೂಜಿಸುವ ಕ್ರಮ ಬಂದಿದೆ. ಇಲ್ಲಿಂದ ಮನುಷ್ಯರ ವಿವಾಹಗಳು ನಡೆಯಬೇಕು ನಡೆಯುತ್ತದೆ ಎನ್ನುವುದು ಸಂಪ್ರದಾಯ.
ಈ ದಿನವನ್ನು ಚಾತುರ್ಮಾಸ್ಯದ ಕೊನೆಯ ದಿನ ಎಂದೂ ಹೇಳುತ್ತಾರೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಗೆ ನಾಲ್ಕು ತಿಂಗಳು. ಇದನ್ನೇ ಮಹಾವಿಷ್ಣುವಿನ ಯೋಗ ನಿದ್ರೆಯ ಅವಧಿಯಾದ ಕಾರಣ ಸಂನ್ಯಾಸಿಗಳು ಗೃಹಸ್ಥರು ಚಾತುರ್ಮಾಸ್ಯ ವ್ರತವನ್ನು ಆಚರಿಸುವುದು.
ಈ ದಿನದಿಂದ ನೆಲ್ಲಿಕಾಯಿಯನ್ನು ತಿನ್ನುವ ಪದ್ದತಿ ಇದೆ. ಇನ್ನು ನೆಲ್ಲಿ ಕಾಯಿ ಬೆಳವಣಿಗೆಯಾಗಿ ಸ್ವಾದಿಷ್ಟವಾಗುತ್ತದೆ.
ತುಳಸಿಯ ಸುತ್ತ ದೀಪವನ್ನು ಬೆಳಗಿ, ತುಳಸಿ ಕಟ್ಟೆಯ ಎದುರು ಸುಂದರ ರಂಗವಲ್ಲಿ ಹಾಕಿ, ವಿವಿಧ ಭಕ್ಷಗಳನ್ನು ಮಾಡಿ, ತುಳಸೀ ವಿವಾಹವನ್ನು ಮಾಡುವುದು. ರಾತ್ರಿ ಸಮಯದಲ್ಲಿ ಹರಿ ದಿನವಾದ ದ್ವಾದಶಿ ಇರಬೇಕು.
– ಲೋಹಿತ ಹೆಬ್ಬಾರ್ – 8762924271