ಏಪ್ರಿಲ್ 13ನೇ ತಾರೀಕಿನಂದು ಚಾಂದ್ರಮಾನ ಯುಗಾದಿ. ಪ್ಲವನಾಮ ಸಂವತ್ಸರದ ಆರಂಭದ ದಿನ. ಯಾವ ರಾಶಿಗೆ ಹೇಗಿದೆ ಸಂವತ್ಸರ ಫಲ ಎಂದು ನೋಡುವ ಪರಿಪಾಠ ಹಿಂದಿನಿಂದಲೂ ನಡೆದು ಬಂದಿದೆ. ಇಲ್ಲಿ ಕಟಕ ರಾಶಿಯ ಫಲ ಏನು ಎಂಬುದನ್ನು ತಿಳಿಸಲಾಗಿದೆ.
ಈ ಸಂವತ್ಸರದಲ್ಲಿ ಶನಿ ಗ್ರಹ ಮಕರ ರಾಶಿಯಲ್ಲಿ ಇರುತ್ತದೆ. ಇನ್ನು ರಾಹು ಹಾಗೂ ಕೇತು ಗ್ರಹಗಳು ಕ್ರಮವಾಗಿ ವೃಷಭ ಮತ್ತು ವೃಶ್ಚಿಕ ರಾಶಿಗಳಲ್ಲಿ ಇರುತ್ತವೆ. ಗುರು ಗ್ರಹವು ಏಪ್ರಿಲ್ 6ರಿಂದ ಸೆಪ್ಟೆಂಬರ್ 14, 2021ರ ತನಕ ಹಾಗೂ ನವೆಂಬರ್ 20ರ ನಂತರ ಸಂವತ್ಸರದ ಕೊನೆ ತನಕವು ಕುಂಭ ರಾಶಿಯಲ್ಲೇ ಇರುತ್ತದೆ. ಈ ಮಧ್ಯೆ ಸೆಪ್ಟೆಂಬರ್ 14ರಿಂದ ನವೆಂಬರ್ 20ರವರೆಗೆ ಮಕರ ರಾಶಿಯಲ್ಲಿ ಇರುತ್ತದೆ.
ನೆನಪಿನಲ್ಲಿಡಿ, ಇಲ್ಲಿ ತಿಳಿಸುವುದು ಗೋಚಾರದ ಫಲ ಮಾತ್ರ. ಫಲ ತಿಳಿದುಕೊಳ್ಳುವಾಗ ಯಾವುದೇ ವ್ಯಕ್ತಿಯ ದಶಾ ಮತ್ತು ಭುಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ದಶಾ ಸಂಧಿಗಳು, ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವಾಗ ಮತ್ತು ರಾಹು ದಶೆ ಮುಗಿದು ಗುರು ದಶೆ ಶುರುವಾಗುವಾಗ ಹಾಗೂ ಶುಕ್ರ ದಶೆ ಮುಗಿದು ರವಿ ದಶೆ ಆರಂಭವಾಗುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಸೂಕ್ತ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9ಕನ್ನಡ ಡಿಜಿಟಲ್ ಓದುಗರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ರಾಶಿಗಳ ಗೋಚಾರ ಫಲಗಳತ್ತ ನೋಡೋಣ
ಕಟಕ ರಾಶಿ: (ಪುನರ್ವಸು 4ನೇ ಪಾದ, ಪುಷ್ಯ 1,2,3,4ನೇ ಪಾದ, ಆಶ್ಲೇಷಾ 1,2,3,4ನೇ ಪಾದ)
ಈ ರಾಶಿಯವರ ಅಧಿಪತಿ ಚಂದ್ರ. ಇವರಲ್ಲಿ ಮೂಲತಃ ತಾಯಿಯ ಗುಣ ಇರುತ್ತದೆ. ಈ ರಾಶಿಯ ಗಂಡಸರಾಗಲೀ ಹೆಂಗಸರಾಗಲೀ ತಾಯಿಯ ರೀತಿ ಇನ್ನೊಬ್ಬರ ಕುರಿತು ಕಾಳಜಿ ತೋರಿಸುತ್ತಾರೆ. ಆದರೆ ಇವರ ಸಮಸ್ಯೆ ಏನೆಂದರೆ ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂದು ತಿಳಿಯುವುದು ಕಷ್ಟ- ಕಷ್ಟ. ಹದಿನೈದು ದಿನ ಅತ್ಯುತ್ಸಾಹದಿಂದ ಇದ್ದರೆ ಇನ್ನು ಹದಿನೈದು ದಿನ ಸಪ್ಪೆಯಾಗಿರುತ್ತಾರೆ. ಹುಣ್ಣಿಮೆ- ಅಮಾವಾಸ್ಯೆಯ ಚಂದ್ರ ಹೇಗೆ ವೃದ್ಧಿ- ಕ್ಷೀಣ ಆಗುತ್ತಾನೋ ಇವರ ಮನಸ್ಥಿಯೂ ಹಾಗೇ ಅರಳುವುದು- ಮುದುಡುವುದು ಆಗುತ್ತದೆ. ಸೇವಾ ವಲಯದಲ್ಲಿ ಹೆಚ್ಚಿನ ಪಕ್ಷ ಕಾಣಸಿಗುವವರೇ ಇವರು. ಸಿನಿಮಾ ರಂಗದಲ್ಲಿನ ನಟ- ನಟಿಯರು, ಕವಿಗಳು, ಬರಹಗಾರರು, ಸಾಹಿತಿಗಳು ಈ ರಾಶಿಯವರು ಹೆಚ್ಚು. ತಮ್ಮದೇ ಭಾವನಾ ಲೋಕದಲ್ಲಿ ವಿಹರಿಸುವ ಕಟಕ ರಾಶಿಯವರು ಯಾರನ್ನಾದರೂ ಸಿಕ್ಕಾಪಟ್ಟೆ ಹಚ್ಚಿಕೊಂಡುಬಿಡುತ್ತಾರೆ. ಹಗಲುಗನಸು ಕಾಣುತ್ತಾರೆ. ಯಾವುದೇ ಕೆಲಸ ಮನಸ್ಸಿಟ್ಟು ಮಾಡಿದಲ್ಲಿ ಇವರಂಥ ಕಲಾತ್ಮಕ ಕೆಲಸಗಳನ್ನು ಮಾಡುವಂಥವರು ಇನ್ನೊಬ್ಬರಿರುವುದಿಲ್ಲ. ಆದರೆ ಇವರಿಗೆ ಏಕಾಗ್ರತೆಯೇ ಕಷ್ಟ.
ಈ ವರ್ಷ 7ನೇ ಮನೆಯಲ್ಲಿನ ಶನಿಯಿಂದ ಪಾರ್ಟ್ನರ್ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ನಾನಾ ಬಗೆಯಲ್ಲಿ ಸವಾಲು ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಹೊಸ ವ್ಯಾಪಾರ, ವ್ಯವಹಾರ ಶುರು ಮಾಡದಿರಿ. ಇನ್ನು ಈಗಾಗಲೇ ಮದುವೆ ನಿಶ್ಚಯ ಆಗಿರುವವರು ಇದ್ದಲ್ಲಿ ಮಾತುಕತೆಯ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಕೆಲವರ ಪಿತೂರಿಯಿಂದ ಸಂಬಂಧ ಮುರಿದುಬೀಳುವಂಥ ಸಾಧ್ಯತೆ ಇದೆ. ಇನ್ನು ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ವೃಥಾ ಅನುಮಾನಗಳಿಗೆ ಕಾರಣ ಆಗಲಿದೆ. ಈ ಕಾರಣಕ್ಕೆ ಎಷ್ಟೇ ಪ್ರೀತಿ ಇದ್ದರೂ ಕೆಲ ಸಮಯ ದೂರ ಇರುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಾದ- ವಿವಾದಕ್ಕೆ ಎಡೆ ಆಗದಂತೆ ನೋಡಿಕೊಳ್ಳಿ. ತಂದೆ ಕಡೆಯಿಂದ ತುಂಬಾ ದೊಡ್ಡ ನಿರೀಕ್ಷೆ ಇರಿಸಿಕೊಂಡವರಿಗೆ ನಿರಾಸೆ ಆಗಲಿದೆ. ನಿಮಗಿಂತ ಸೋದರರು- ಸೋದರಿಯರ ಬಗ್ಗೆ ಅವರಿಗೆ ಪ್ರೀತಿ- ವಿಶ್ವಾಸ ಜಾಸ್ತಿ ಎಂಬ ಬೇಸರ ಹಾಗೂ ಅನುಮಾನ ನಿಮ್ಮ ಮನದಲ್ಲಿ ಮೂಡಲಿದೆ. ವಿದ್ಯಾರ್ಥಿಗಳಿಗೆ ವೃಥಾ ಅಲೆದಾಟ ಇರುತ್ತದೆ. ಮಹಿಳೆಯರಿಗೆ ತವರು ಮನೆಯಲ್ಲಿ ಅವಮಾನ ಆಗುವ ಸಂಭವ ಇದೆ.
ಈ ವರ್ಷದ ಬಹುತೇಕ ಸಮಯ ನಿಮ್ಮ ರಾಶಿಯ ಎಂಟನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ದೇಹದ ತೂಕ ಹೆಚ್ಚಾಗಿ, ಅದಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ತಪ್ಪಿಗೆ ಈಗ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಕಡೆಯಿಂದ ಕಾನೂನು ಉಲ್ಲಂಘನೆ ಆಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಟ್ಯಾಕ್ಸ್, ಲೆಕ್ಕಪತ್ರಗಳು ಸರಿಯಾಗಿ ಇದೆಯೇ ಎಂಬುದನ್ನು ಖುದ್ದಾಗಿ ನೀವೇ ನೋಡಿಕೊಳ್ಳಿ. ಇನ್ನೊಬ್ಬರನ್ನು ನೆಚ್ಚಿಕೊಂಡಲ್ಲಿ ಆ ನಂತರ ಪರಿತಪಿಸಬೇಕಾಗುತ್ತದೆ. ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ನಿಮಗೆ ಬೇಡದ ವಸ್ತುಗಳಿಗೆ ಖರ್ಚು ಮಾಡಬೇಡಿ. ಸ್ನೇಹಿತರು ನಿಮ್ಮ ಬಗ್ಗೆ ಟೀಕೆ ಮಾಡಿದಲ್ಲಿ ಸರಿ- ತಪ್ಪುಗಳ ವಿವೇಚನೆ ಇಟ್ಟುಕೊಂಡೇ ಉತ್ತರಿಸಿ. ಅವರ ಮಾತನ್ನು ನಿಮ್ಮ ಅಹಂಕಾರಕ್ಕೆ ಬಿದ್ದ ಪೆಟ್ಟು ಅಂದುಕೊಳ್ಳದಿರಿ. ಮಧುಮೇಹ, ರಕ್ತದೊತ್ತಡದ ಸಮಸ್ಯೆ ಇರುವವರು ಅಥವಾ ಇನ್ನೇನು ಬರುವ ಸಾಧ್ಯತೆ ಇದೆ ಎನ್ನುವ ಸೂಚನೆ ಕಾಣಿಸಿಕೊಂಡವರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದಿರಿ.
ಭೂಮಿ ವ್ಯವಹಾರದಲ್ಲಿ ಲಾಭ ಆಗುವ ಸಾಧ್ಯತೆ ಇದೆ. ಭೂಮಿ ಲಾಭ ಆಗುವ ಯೋಗ ನಿಮ್ಮ ಪಾಲಿಗೆ ಇದೆ. ಅನಿರೀಕ್ಷಿತವಾಗಿ ದೊಡ್ಡ ಮೊತ್ತ ನಿಮಗೆ ದೊರೆಯಬಹುದು. ಈಗಾಗಲೇ ಅರ್ಧಕ್ಕೆ ನಿಂತಿದ್ದ ಸೈಟ್- ಜಮೀನು ಖರೀದಿ ವ್ಯವಹಾರಗಳಲ್ಲಿ ಪ್ರಗತಿ ಕಾಣಿಸಲಿದೆ. ನಿಮ್ಮ ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಉದ್ಯೋಗ ಸ್ಥಳದಲ್ಲಿ ಗುರುತಿಸಲಾಗುತ್ತದೆ. ಮುಖ್ಯವಾಗಿ ನೀವು ಕೆಲಸ ಮಾಡುವ ಸ್ಥಳದಲ್ಲಿ ಧೈರ್ಯವಾಗಿ ತೆಗೆದುಕೊಳ್ಳುವ ನಿರ್ಧಾರದಿಂದ ಲಾಭ ಆಗಲಿದೆ. ಕಟಕ ರಾಶಿಯ ಹಿರಿಯರು ಮಕ್ಕಳ ನಡವಳಿಕೆ ಕುರಿತು ಗಮನ ತೆಗೆದುಕೊಳ್ಳಬೇಕು. ಯಾರ ಜತೆಗೆ ಸ್ನೇಹ ಮಾಡುತ್ತಿದ್ದಾರೆ ಎಂಬುದರ ಕಡೆಗೆ ಲಕ್ಷ್ಯ ನೀಡಬೇಕು. ಇನ್ನು ವಿದ್ಯಾರ್ಥಿಗಳು ಹೊಸ ಕೋರ್ಸ್ ತೆಗೆದುಕೊಳ್ಳುವಾಗ ಅದು ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವೇ ಎಂಬುದನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು. ಮಹಿಳೆಯರು ಯಾರ ಜತೆಗೂ ವಾಗ್ವಾದ ಮಾಡಿಕೊಳ್ಳದಿರಿ. ಸ್ತ್ರೀರೋಗ ಸಣ್ಣ ಮಟ್ಟದಾದ್ದರೂ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.
ಯುಗಾದಿ ಫಲದ ಪ್ರಕಾರ, ಆದಾಯ- 14, ವ್ಯಯ- 2, ರಾಜಪೂಜೆ- 6, ಅವಮಾನ- 6
ನೀವು ಯಾವ ಗುರುಗಳಿಗೆ ನಡೆದುಕೊಳ್ಳುತ್ತೀರೋ ಅವರಿಗೆ ವಸ್ತ್ರ ಸಮರ್ಪಣೆ ಮಾಡಿ.
ಇದನ್ನೂ ಓದಿ: Ugadi Rashi Bhavishya 2021: ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ: ಆರೋಗ್ಯದ ಕಡೆ ಕಾಳಜಿ ವಹಿಸಿ, ಪಿತ್ರಾರ್ಜಿತ ಆಸ್ತಿ ಬರಲಿದೆ
(Ugadi 2021 Horoscope: Get Free Ugadi 2021 Horoscope Rashi Bhavishya on Cancer. Know your Ugadi Astrology on Karkataka Rashi in Kannada.)