ಪುರುಷ ಪ್ರಧಾನ ಸಮಾಜವನ್ನು ನಾವೀಗ ನೋಡುತ್ತಿದ್ದೇವೆ. ಆದ್ರೆ ಭಗವಾನ್ ಶ್ರೀ ಕೃಷ್ಣನ(Lord Krishna) ಹೆಸರಿಗೂ ಮುಂಚೆ ಆತನ ಪ್ರೇಯಸಿ ರಾಧೆಯ(Radhe) ಹೆಸರನ್ನು ಹೇಳಲಾಗುತ್ತೇ. ಇದೇ ಸಾಕು ರಾಧೆ-ಕೃಷ್ಣನ ಪ್ರೀತಿ ಎಷ್ಟಿದೆ ಎಂದು ಸಾರಲು. ರಾಧೆ-ಕೃಷ್ಣನ ಪ್ರೀತಿ ಉದಾಹರಣೆಯೆಂಬಂತೆ ಪ್ರಪಂಚದಲ್ಲಿ ಬೇರಾವ ಪ್ರೀತಿಯೂ ಇರಲು ಸಾಧ್ಯವಿಲ್ಲ. ಕೃಷ್ಣನಿಗೆ ರುಕ್ಮಿಣಿ ಸೇರಿ ಏಳು ಮಹಾರಾಣಿಯರಲ್ಲದೆ 16,100 ಪತ್ನಿಯರಿದ್ದು 1,61,080 ಮಕ್ಕಳಿದ್ದರು. ಆದ್ರೆ ಪ್ರೇಯಸಿ ಮಾತ್ರ ರಾಧೆ ಒಬ್ಬಳೇ. ರಾಧೆ ಕೃಷ್ಣನನ್ನು ಮದುವೆಯಾಗದಿದ್ದರೂ ಸಾವಿರಾರು ಪತ್ನಿಯರು, ರುಕ್ಮಿಣಿಗೆ ಸಿಗದ ಸ್ಥಾನ, ಗೌರವ ರಾಧೆಗೆ ಸಿಕ್ಕಿದೆ. ರಾಧೆ ಇಲ್ಲದೆ ಕೃಷ್ಣ ಸಂಪೂರ್ಣವಾಗಲ್ಲ. ಪುರಾಣಗಳ ಪ್ರಕಾರ ಶ್ರೀ ಕೃಷ್ಣನು ವಿಷ್ಣುವಿನ ಅವತಾರವಾಗಿದ್ದು ರಾಧೆ ಲಕ್ಷ್ಮಿಯ ಅವತಾರವೆಂದು ಪರಿಗಣಿಸಲಾಗುತ್ತೆ.
ಕೃಷ್ಣನನ್ನು ನೋಡಲು ಕಣ್ಣು ಬಿಟ್ಟಳು ರಾಧೆ
ಕೆಲ ಪುರಾಣಗಳ ಪ್ರಕಾರ ರಾಧೆ ಕೃಷ್ಣನಿಗಿಂತ 11 ತಿಂಗಳು ದೊಡ್ಡವಳು ಎನ್ನಲಾಗಿದೆ. ರಾಧೆ 11 ತಿಂಗಳ ಮಗುವಿದ್ದಾಗ ಕೃಷ್ಣ 1 ದಿನದ ಪುಟ್ಟ ಮಗುವಾಗಿರುತ್ತಾನೆ. ಆಗಲೇ ಅವರ ಮೊದಲ ಭೇಟಿಯಾಗುವುದು. 11 ತಿಂಗಳಾದರೂ ಕಣ್ಣು ಬಿಟ್ಟಿರದ ರಾಧೆ, ಕೃಷ್ಣನನ್ನು ನೋಡಲು ಕಣ್ಣು ಬಿಡುತ್ತಾಳೆ. ರಾಧೆಯ ಮೊದಲ ನೋಟವು ಕೃಷ್ಣನೇ ಆಗಿರುತ್ತಾನೆ. ಅಲ್ಲಿಂದಲೇ ರಾಧೆ-ಕೃಷ್ಣರ ಪ್ರೀತಿ ಕೂಡ ಶುರುವಾಗುತ್ತೆ. ಕೆಲ ಪುರಾಣಗಳ ಪ್ರಕಾರ ರಾಧೆ ಕೃಷ್ಣನಿಗಿಂತ ಐದಾರು ವರ್ಷ ದೊಡ್ಡವಳು ಎನ್ನಲಾಗಿದೆ. ಇನ್ನು ಗರ್ಗ ಸಂಹಿತೆಯ ಪ್ರಕಾರ ಬ್ರಹ್ಮ ದೇವನೇ ಭೂಮಿಗೆ ಬಂದು ರಾಧೆ-ಕೃಷ್ಣನಿಗೆ ಗಂಧರ್ವ ವಿವಾಹ ಮಾಡಿಸಿದ್ದರು ಎನ್ನಲಾಗಿದೆ.
ಕೃಷ್ಣ ಮತ್ತು ರಾಧೆ ಬಾಲ್ಯದಿಂದಲೂ ಸ್ನೇಹಿತರಾಗಿರುತ್ತಾರೆ. ಕೃಷ್ಣ ಕೊಳಲು ಬಾರಿಸುವ ಮಾಂತ್ರಿಕನಾಗಿದ್ದ. ಆತನ ಕೊಳಲಿನ ನಾದಕ್ಕೆ ಬೃಂದಾವನದಲ್ಲಿ ಬರೀ ಗೋವುಗಳಲ್ಲದೆ ಗೋಪಿಕೆಯರು ಸಹ ಮರುಳಾಗಿ ಅವನಿರುವಲ್ಲಿಗೆ ಬರುತ್ತಿದ್ದರು. ಎಲ್ಲಾ ಗೋಪಿಕೆಯರು ಕೃಷ್ಣನನ್ನು ಇಷ್ಟ ಪಟ್ಟರೆ ಈ ಗೋಪಿಕೆಯರ ಪೈಕಿ ಕೃಷ್ಣನ ಮನ ಕದ್ದದ್ದು ಮಾತ್ರ ರಾಧೆ. ನೀಲಿ ಮೈಬಣ್ಣ, ಮೋಡಿ ಮಾಡುವ ಸುಂದರ ಕಣ್ಣುಗಳು, ತಿಳಿ ಗುಲಾಬಿ ತುಟಿಗಳು, ಉಕ್ಕಿನಂಥ ಶರೀರ, ಕಪ್ಪು ಗುಂಗುರು ಕೂದಲು, ಕೂದಲಲ್ಲಿ ಸಿಲುಕಿದ ನವಿಲು ಗರಿ, ಆತನ ತುಂಟತನದ ಮಾತು ಎಲ್ಲರನ್ನು ಮೋಡಿ ಮಾಡುತ್ತಿತ್ತು. ಆದ್ರೆ ರಾಧೆಗೆ ಕೃಷ್ಣನ ಕೊಳಲಿನ ನಾದವೆಂದರೆ ಅದೇನೋ ಮೋಹ. ಮೋಹನ ಮುರಳಿ ಕೃಷ್ಣನ ಕೊಳಲ ನಾದಕ್ಕೆ ರಾಧೆ ನರ್ತಿಸುವಾಗ ಸ್ವರ್ಗದ ಸೊಬಗೆಲ್ಲವೂ ಬೃಂದಾವನದಲ್ಲಿ ಸೃಷ್ಟಿಯಾಗುತ್ತಿತ್ತಂತೆ. ಬೃಂದಾವನದಲ್ಲಿ ರಾಸಲೀಲೆ ಮಾಡುವಾಗ ಗೋಪಿಕೆಯರೊಂದಿಗೆ ರಾಧೆ ಕೂಡ ಬರುತ್ತಿದ್ದಳು. ಕೃಷ್ಣನೊಂದಿಗೆ ಕುಣಿದು ಅವನ ಪ್ರೀತಿಯ ಬಲೆಯಲ್ಲಿ ಬಂಧಿಯಾಗುತ್ತಿದ್ದಳು. ಬೆಣ್ಣೆ ಕಳ್ಳ ಕೃಷ್ಣ ರಾಧೆಯ ಪ್ರೀತಿಯಲ್ಲಿ ಬಿದ್ದಿದ್ದ. ಆದ್ರೆ ಇವರಿಬ್ಬರ ಪ್ರೀತಿ ದೈಹಿಕ ಸಂಬಂಧವನ್ನು ಮೀರಿದಾಗಿತ್ತು. ರಾಧೆ-ಕೃಷ್ಣ ಎಂದಿಗೂ ಪತಿ-ಪತ್ನಿಯಾಗಿರಲಿಲ್ಲ. ಇವರಿಬ್ಬರ ಪ್ರೀತಿ ಅತ್ಯಂತ ಪವಿತ್ರವಾಗಿತ್ತು. ಒಬ್ಬರನೊಬ್ಬರೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಬೆಟ್ಟದಷ್ಟು ಪ್ರೀತಿ ಇದ್ದರೂ ರಾಧೆ-ಕೃಷ್ಣ ಮದುವೆಯಾಗುವುದಿಲ್ಲ. ಇವರು ಮದುವೆಯಾಗದಿರಲು ಹಲವು ಕಾರಣಗಳನ್ನು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ರಾಧೆಗೆ ಬಾಲ್ಯದಲ್ಲೇ ಆಯಾನ್ ಎಂಬ ಯೋಧನೊಂದಿಗೆ ಬಾಲ್ಯ ವಿವಾಹವಾಗಿತ್ತು. ಹೀಗಾಗಿ ರಾಧೆ ಕೃಷ್ಣನನ್ನು ಮದುವೆಯಾಗಲು ನಿರಾಕರಿಸಿದ್ದಳು. ಅಲ್ಲದೆ ಕೃಷ್ಣ ರಾಜನಾಗುವನು ಆದ್ರೆ ನಾನು ಗೋವುಗಳನ್ನು ಮೇಯಿಸುವ ಸಾಮಾನ್ಯ ಗೋಪಿಕೆ ಎಂಬ ಕೀಳು ಭಾವನೆ ರಾಧೆಯ ಮನಸ್ಸಲ್ಲಿತ್ತು. ಹೀಗಾಗಿ ಅವಳು ಮದುವೆಯನ್ನು ನಿರಾಕರಿಸಿದ್ದಳು. ಇನ್ನು ಪುರಾಣಗಳಲ್ಲಿ ರಾಧೆಯ ಮದುವೆ ಸಂಬಂಧ ಅನೇಕ ಬೇರೆ ಬೇರೆ ರೀತಿಯ ಕಥೆಗಳನ್ನು ನೋಡಬಹುದು. ರಾಧೆ-ಕೃಷ್ಣ ಇಬ್ಬರೂ ಮದುವೆಯಾಗದಿದ್ದರೂ ಅವರು ಎರಡು ದೇಹ ಒಂದೇ ಮನಸ್ಸು ಎಂಬಂತೆ ಇದ್ದರು.
ಮದುವೆಯೆಂಬ ಬಂಧನದಿಂದ ತನ್ನ ಪ್ರೀತಿಯನ್ನು ಸೀಮಿತಗೊಳಿಸುವುದು ಅಥವಾ ಕಟ್ಟಿ ಹಾಕುವುದು ರಾಧೆಗೆ ಇಷ್ಟ ಇರಲಿಲ್ಲ. ಕೊನೆಗೆ ರಾಧೆಯ ಮಾತುಗಳನ್ನು ಕೇಳಿ ತನ್ನ ಜಬಾಬ್ದಾರಿಯನ್ನು ನಿಭಾಯಿಸಲು ಕೃಷ್ಣ ಬೃಂದಾವನವನ್ನು ಬಿಟ್ಟು ದ್ವಾರಕೆಗೆ ಹೋಗುತ್ತಾನೆ. ಇದೇ ರಾಧೆ ಹಾಗೂ ಕೃಷ್ಣನ ಕೊನೆಯ ಭೇಟಿಯಾಗುತ್ತದೆ. ರಾಧೆ ಅಯಾನ್ನ ಮದುವೆಯಾದ ಒಂದೇ ವರ್ಷಕ್ಕೆ ಗಂಡ ತೀರಿ ಹೋಗುತ್ತಾನೆ. ಬಳಿಕ ರಾಧೆ ಕೃಷ್ಣನ ನೆನಪುಗಳಲ್ಲೇ ಕಾಲ ಕಳೆಯುತ್ತಾಳೆ. ಇವರಿಬ್ಬರ ಪ್ರೀತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಒಬ್ಬರನೊಬ್ಬರು ಭೇಟಿಯಾಗದಿದ್ದರೂ, ದೂರವಾಗಿದ್ದರೂ ತಾವು ಇರುವಲ್ಲಿಂದಲೇ ಕಷ್ಟ-ಸುಖವನ್ನು ಹಚ್ಚಿಕೊಳ್ಳುತ್ತಿದ್ದರು. ಶಾರೀರಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಿದ್ದರು. ಒಂದಿನ ರಾಧೆ ಹಾಲು ಕಾಯಿಸುವಾಗ ಕೈ ಜಾರಿ ಬಿಸಿ ಹಾಲನ್ನು ತನ್ನ ಕಾಲ ಮೇಲೆ ಚೆಲ್ಲಿಕೊಳ್ಳುತ್ತಾಳೆ. ಆದರೆ ಇಲ್ಲಿ ಬಿಸಿ ಹಾಲು ರಾಧೆಯ ಕಾಲ ಮೇಲೆ ಬಿದ್ದಿದ್ದರೂ ಬೊಬ್ಬೆ ಬಂದಿದ್ದು ಮಾತ್ರ ಕೃಷ್ಣನ ಕಾಲಿಗೆ. ಅಷ್ಟು ಪವಿತ್ರ ಪ್ರೀತಿ ಇವರಿಬ್ಬರಲ್ಲಿತ್ತು.
ರಾಧೆ ದೇಹ ತ್ಯಾಗ ಮಾಡಿದ್ರೆ ಕೊರಳನ್ನೇ ಮುರಿದ ಕೃಷ್ಣ
ಇನ್ನು ರಾಧೆಯ ಜೀವನದಲ್ಲಿ ಅದೇನೆ ನಡೆದಿದ್ದರೂ ರಾಧೆ ಹುಟ್ಟಿನಿಂದ ಸಾಯುವವರೆಗೂ ಕೃಷ್ಣನನ್ನೇ ತನ್ನ ಸಂಗಾತಿ ಎಂದು ತಿಳಿದಿದ್ದಳು. ಇವರ ಪ್ರೀತಿಗೆ ಎಷ್ಟೋ ವಿರೋಧಗಳು, ಅಡೆತಡೆಗಳು ಬಂದರೂ ರಾಧೆಯು ತನ್ನ ಕೊನೆಯ ಉಸಿರಿನ ವರೆಗೂ ಕೃಷ್ಣನ ಮೇಲಿನ ಪ್ರೀತಿಯನ್ನು ಕೊಂಚವೂ ಕಡಿಮೆ ಮಾಡಿಕೊಂಡಿರಲಿಲ್ಲ. ರಾಧೆ ಅದೆಷ್ಟೇ ಕಾದರೂ ಶ್ರೀಕೃಷ್ಣ ಮಾತ್ರ ಬೃಂದಾವನಕ್ಕೆ ಬರಲೇ ಇಲ್ಲ. ರಾಧೆಯ ಅಂತಿಮ ಕ್ಷಣಗಳು ಬಂದಿದ್ದವು. ತನ್ನ ಅಂತಿಮ ಕ್ಷಣಗಳಲ್ಲಿ ಕೃಷ್ಣನನ್ನು ನೋಡಿ ಭೂಮಿ ತೊರೆಯುವ ಆಸೆ ಹೊಂದಿದ್ದಳು. ಹೀಗಾಗಿ ಒಮ್ಮೆ ರಾಧೆ ಕೃಷ್ಣನನ್ನು ಭೇಟಿ ಮಾಡಲು ದ್ವಾರಕೆಗೆ ಬಂದಳು. ಕೊನೆಯ ಬಾರಿ ಕೃಷ್ಣನನ್ನು ನೋಡಿ ಕಣ್ತುಂಬಿಕೊಂಡಳು. ರಾಧೆ ಕೃಷ್ಣನ ಮುರುಳಿ ರಾಗವನ್ನು ಅಥವಾ ತನ್ನ ಪ್ರೀತಿಯ ಕೊಳಲಿನ ನಾದವನ್ನು ಕೇಳಿ ಭೂವಿಯನ್ನು ತೊರೆಯಲು ಬಯಸುತ್ತಿರುವುದಾಗಿ ಕೃಷ್ಣನಿಗೆ ತಿಳಿಸುತ್ತಾಳೆ. ಆಗ ಕೃಷ್ಣ ಕೊನೆಯ ಸಲ ರಾಧೆಗಾಗಿ ಅವಳಿಷ್ಟದ ಕೊಳಲ ರಾಗವನ್ನು ನುಡಿಸುತ್ತಾನೆ. ಕೃಷ್ಣನ ಕೊಳಲ ನಾದ ಕೇಳಿ ರಾಧೆ ಕಣ್ಣು ಮುಚ್ಚುತ್ತಾಳೆ. ತನ್ನ ಕೊಳಲಿನ ನಾದಕ್ಕೆ ಉಸಿರಾಗಿದ್ದ ತನ್ನ ಪ್ರೇಯಸಿಯ ಮರಣವನ್ನು ಸಹಿಸದ ಕೃಷ್ಣ ಕೊಳಲನ್ನು ಮುರಿದು ಎಸೆಯುತ್ತಾನೆ. ಅಂದಿನಿಂದ ಕೃಷ್ಣ ಕೊಳಲೂದುವುದನ್ನೇ ನಿಲ್ಲಿಸುತ್ತಾನೆ.
Published On - 6:45 am, Mon, 14 February 22