ಒಬ್ಬ ವ್ಯಕ್ತಿ ಆರೋಗ್ಯಕರವಾಗಿದ್ದಾನೆ ಎನ್ನಲು ಆತನ ಮಾನಸಿಕ ಮತ್ತು ದೈಹಿಕ ಸ್ಥಿತಿ ಸದೃಢವಾಗಿರಬೇಕಾಗುತ್ತದೆ. ಊಟ, ತಿಂಡಿ, ಜೀವನಶೈಲಿ, ಸುತ್ತಲಿನ ವಾತಾವರಣ, ಕೆಲಸ ಎಲ್ಲವೂ ಆರೋಗ್ಯದ (Health) ಮೇಲೆ ಪರಿಣಾಮ ಬೀರುವ ಸಂಗತಿಗಳೇ. ಅವುಗಳೊಟ್ಟಿಗೆ ನಿದ್ರೆಯೂ (Sleep) ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಮತೋಲನವವನ್ನು ಕಾಪಾಡಿಕೊಳ್ಳು ಸಹಕರಿಸುತ್ತದೆ. ದಿನಕ್ಕೆ 8 ಗಂಟೆಗಳ ಕಾಲ ಯಾವುದೇ ಅಡೆತಡೆ ಇಲ್ಲದೇ ನಿದ್ರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಅವಶ್ಯಕ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಇಂದಿನ ಒತ್ತಡದ ಕಾರ್ಯಶೈಲಿ, ಬದಲಾದ ಜೀವನ ಕ್ರಮಗಳಿಂದಾಗ (Lifestyle) ಸಮಯ ಸಿಕ್ಕರೆ ನಿದ್ರೆ, ಇಲ್ಲದಿದ್ದರೆ ಇಲ್ಲ ಎನ್ನುವಂತಹ ಪರಿಸ್ಥಿತಿಯನ್ನು ಎಲ್ಲರೂ ಎದುರಿಸುತ್ತಿದ್ದೇವೆ. ಮನಸ್ಸು ಮತ್ತು ದೇಹದ ಹಿತದೃಷ್ಟಿಯಿಂದ (Mental and Physical Health) ಇದು ಅಪಾಯಕಾರಿಯಾಗಿದ್ದು ಮನಸ್ಸಿಗೆ ಕಿರಿಕಿರಿ ತರುವುದಷ್ಟೇ ಅಲ್ಲದೇ ನಮ್ಮನ್ನು ನಿಷ್ಕ್ರಿಯಗೊಳಿಸಿಬಿಡುತ್ತದೆ. ಹೀಗಾಗಿ ಎಷ್ಟೇ ಕೆಲಸ ಕಾರ್ಯಗಳಿದ್ದರೂ ನಿದ್ರೆಗೆ ಮಹತ್ವ ಕೊಡುವುದು ಮುಖ್ಯ.
ವಾಸ್ತುಶಾಸ್ತ್ರದ ಪ್ರಕಾರ (Vastu Tips) ನಾವು ಯಾವ ದಿಕ್ಕಿಗೆ ತಲೆ ಹಾಕಿ ಮಲಗುತ್ತೇವೆ ಎನ್ನುವುದು ಕೂಡಾ ಪ್ರಮುಖ ಅಂಶವಾಗಿದೆ. ಉತ್ತಮ ನಿದ್ರೆಯ ಜತೆಗೆ ಮನಸ್ಸು ಶಾಂತಿಯುತವಾಗಿರಬೇಕೆಂದರೆ ಮಲಗುವ ದಿಕ್ಕನ್ನು ಗಮನಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವುದನ್ನು ಪಾಲಿಸಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಸಾಧ್ಯ. ಜತೆಗೆ ಅದು ನಮ್ಮ ಆರ್ಥಿಕ ಸ್ಥಿತಿಗತಿಯ ಮೇಲೂ ಧನಾತ್ಮಕ ಪರಿಣಾಮ ಬೀರಬಲ್ಲದು ಎಂದು ಹಿರಿಯರು ಹೇಳುತ್ತಾರೆ.
ವಾಸ್ತುವಿನ ಪ್ರಕಾರವೇ ಹೇಳುವುದಾದರೆ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗುವುದಕ್ಕೆ ಪ್ರಾಶಸ್ತ್ಯ ನೀಡಬಹುದು. ಏಕೆಂದರೆ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ಉತ್ತಮ ನಿದ್ರೆಯ ಜತೆಗೆ ಧನಾತ್ಮಕ ಆಲೋಚನೆಗಳೂ ನಮ್ಮ ಮನಸ್ಸಿನಲ್ಲಿ ಮೂಡುವುದು ಸಾಧ್ಯವಿದ್ದು, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಅದು ಸಹಕಾರಿಯಾಗುತ್ತದೆ ಎನ್ನುವ ನಂಬಿಕೆ ಚಾಲ್ತಿಯಲ್ಲಿದೆ.
ಅಂತೆಯೇ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಖುಷಿ ಸಿಗುವ ಜತೆಗೆ ಸಾಧನೆಯ ಹಾದಿಯಲ್ಲಿ ಸಾಗಲು ಪ್ರೇರೇಪಣೆ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಲ್ಲೂ ಕೆಲ ಪ್ರಯೋಜನಗಳಿದ್ದು ಸಂತೋಷ ಲಭಿಸುವುದಕ್ಕೆ ಇದು ಸಹಕಾರಿ ಎಂದು ವಾಸ್ತು ಶಾಸ್ತ್ರ ಬಲ್ಲವರು ಹೇಳುತ್ತಾರೆ.
ಆದರೆ, ಅದೇನೇ ಇದ್ದರೂ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ಮಾತ್ರ ತಲೆ ಇಟ್ಟುಕೊಂಡು ಮಲಗಬಾರದಂತೆ. ಏಕೆಂದರೆ ಉತ್ತರಕ್ಕೆ ತಲೆ ಹಾಕಿಕೊಂಡಾಗ ಬರೀ ಋಣಾತ್ಮಕ ಆಲೋಚನೆಗಳೇ ನಮ್ಮ ಮನಸ್ಸನ್ನು ಭಾದಿಸುತ್ತವಂತೆ. ಅವು ನಮ್ಮನ್ನು ಆತಂಕಕ್ಕೆ ನೂಕುವ ಜತೆ ಜತೆಗೆ ನಮ್ಮ ಏಳ್ಗೆಗೂ ಮಾರಕವಾಗುತ್ತವೆ ಎನ್ನಲಾಗುತ್ತದೆ.
ಇಷ್ಟೇ ಅಲ್ಲದೇ, ಮಲಗುವ ಮುಂಚೆ ಕೈ, ಕಾಲು, ಮುಖ, ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಂಡೇ ನಿದ್ರಿಸಬೇಕು. ಯಾವುದೇ ಕಾರಣಕ್ಕೂ ಅಶುದ್ಧವಾಗಿರುವ ದೇಹದೊಂದಿಗೆ ಮಲಗಬಾರದು. ಮಲಗುವ ಮುನ್ನ ಹಾಸಿಗೆಯ ಶುಭ್ರತೆಯತ್ತಲೂ ಗಮನ ಇಡಬೇಕಿರುವುದು ಪ್ರಮುಖವಾಗಿದ್ದು, ಕೊಳಕು ಹಾಸಿಗೆ, ಮುರಿದ ಮಂಚದ ಮೇಲೆ ಮಲಗುವುದು ಮತ್ತಷ್ಟು ಅನಿಷ್ಠವನ್ನೇ ತಂದೊಡುತ್ತದೆ ಎಂಬ ನಂಬಿಕೆ ಇದೆ. ಜತೆಗೆ, ಯಾವುದೇ ಕಾರಣಕ್ಕೂ ನಗ್ನವಾಗಿ ಮಲಗಬಾರದು, ಉಡುಪನ್ನು ಧರಿಸಿಯೇ ಮಲಗಬೇಕು ಎನ್ನುವುದನ್ನೂ ಹೇಳಲಾಗಿದೆ.
Vastu Tips: ವಾಸ್ತು ಪ್ರಕಾರ ಅಡುಗೆ ಕೋಣೆಯಿಂದ ಅತಿಥಿಗಳ ಕೋಣೆ ತನಕ ಈ ಬಣ್ಣ ಇದ್ದರೆ ಒಳಿತು