
ಹಿಂದೂ ಸಂಸ್ಕೃತಿ, ಪುರಾಣ ಮತ್ತು ವಾಸ್ತುಶಾಸ್ತ್ರದಲ್ಲಿ ಆಮೆಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಭಗವಾನ್ ವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದಾದ ಕೂರ್ಮಾವತಾರವೇ ಇದಕ್ಕೆ ಮುಖ್ಯ ಕಾರಣವಾಗಿದೆ. ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡುವಾಗ, ಮುಳುಗುತ್ತಿದ್ದ ಮಂದಾರ ಪರ್ವತವನ್ನು ವಿಷ್ಣುವು ಆಮೆಯ ರೂಪದಲ್ಲಿ ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ದೇವತೆಗಳಿಗೆ ರಕ್ಷಣೆ ನೀಡಿದನು. ಆ ಸಮುದ್ರ ಮಂಥನದಿಂದಲೇ ಲೋಕಕಲ್ಯಾಣದ ಅಮೃತ ಉದ್ಭವಿಸಿದ್ದರಿಂದ, ಆಮೆಯನ್ನು ಸ್ಥಿರತೆ, ದೀರ್ಘಾಯುಷ್ಯ, ಜ್ಞಾನ ಮತ್ತು ಸಂಪತ್ತಿನ ಸಂಕೇತವೆಂದು ಪೂಜಿಸಲಾಗುತ್ತದೆ.
ಮನೆಯಲ್ಲಿ ಆಮೆಯ ಪ್ರತಿಮೆ, ಸ್ಫಟಿಕ ಅಥವಾ ಲೋಹದ ಆಕೃತಿಯನ್ನು ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆರೋಗ್ಯ ಮತ್ತು ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ವಾಸ್ತುಶಾಸ್ತ್ರದ ಪ್ರಕಾರ, ಆಮೆಯನ್ನು ಮುಖ್ಯವಾಗಿ ಉತ್ತರ, ಈಶಾನ್ಯ ಅಥವಾ ನೈಋತ್ಯ ದಿಕ್ಕುಗಳಲ್ಲಿ ಇಡುವುದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದಾಗಿದ್ದು, ಇಲ್ಲಿ ಆಮೆ ಇಡುವುದರಿಂದ ಸಂಪತ್ತು, ವೃತ್ತಿಜೀವನ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿ ಸಿಗುತ್ತದೆ. ದೇವ ಮೂಲೆಯಾದ ಈಶಾನ್ಯದಲ್ಲಿ ಆಮೆಯನ್ನು ಇರಿಸಿದರೆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ. ಹಾಗೆಯೇ, ನೈಋತ್ಯ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಸ್ಥಿರತೆ ಬರುವುದರ ಜೊತೆಗೆ ಕುಟುಂಬದ ಸದಸ್ಯರ ನಡುವಿನ ಸಂಬಂಧಗಳು ಬಲಗೊಳ್ಳುತ್ತವೆ ಎಂದು ನಂಬಲಾಗಿದೆ.
ಆಮೆಯನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದರ ಆಧಾರದ ಮೇಲೆ ಅದನ್ನು ಇಡುವ ದಿಕ್ಕು ಮತ್ತು ಸಿಗುವ ಫಲಗಳು ಬದಲಾಗುತ್ತವೆ. ಲೋಹದ ಆಮೆಯಾಗಿದ್ದರೆ ಅದನ್ನು ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸುವುದರಿಂದ ವೃತ್ತಿ ಬೆಳವಣಿಗೆಯಾಗುತ್ತದೆ. ಸ್ಫಟಿಕ ಅಥವಾ ಗಾಜಿನ ಆಮೆಯನ್ನು ಉತ್ತರ ಅಥವಾ ನೈಋತ್ಯ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಯಾಗಿ ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ. ಆರೋಗ್ಯ ವೃದ್ಧಿಗಾಗಿ ಮತ್ತು ಧನಾತ್ಮಕ ಶಕ್ತಿಗಾಗಿ ಮರದ ಆಮೆಯನ್ನು ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಕಲ್ಲಿನ ಆಮೆಗೆ ನೈಋತ್ಯ ದಿಕ್ಕು ಉತ್ತಮವಾಗಿದ್ದು ಇದು ಆರ್ಥಿಕ ಸ್ಥಿರತೆ ನೀಡುತ್ತದೆ. ಇನ್ನು ಸಂಪತ್ತು ಹೆಚ್ಚಾಗಲು ಆಗ್ನೇಯದಲ್ಲಿ ಸೆರಾಮಿಕ್ ಆಮೆಯನ್ನು ಹಾಗೂ ಅದೃಷ್ಟಕ್ಕಾಗಿ ಈಶಾನ್ಯದಲ್ಲಿ ಮಣ್ಣಿನ ಆಮೆಯನ್ನು ಇರಿಸಬೇಕು.
ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?
ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸುವಾಗ ಕೆಲವು ಸರಳ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ, ಆಮೆಯ ಮುಖವು ಯಾವಾಗಲೂ ಪೂರ್ವ ದಿಕ್ಕಿಗೆ (ಕೆಲವೊಮ್ಮೆ ಉತ್ತರಕ್ಕೂ ಇಡಬಹುದು) ಮುಖ ಮಾಡಿರುವಂತೆ ನೋಡಿಕೊಳ್ಳಿ. ಆಮೆಯನ್ನು ಎಂದಿಗೂ ಬರಿ ನೆಲದ ಮೇಲೆ ನೇರವಾಗಿ ಇಡಬಾರದು; ಬದಲಿಗೆ ಒಂದು ಗಾಜಿನ ಅಥವಾ ಲೋಹದ ತಟ್ಟೆಯಲ್ಲಿ ನೀರು ಮತ್ತು ವರ್ಣರಂಜಿತ ಕಲ್ಲುಗಳನ್ನು ಹಾಕಿ ಅದರ ಮಧ್ಯದಲ್ಲಿ ಆಮೆಯನ್ನು ಇರಿಸಬೇಕು, ಇದು ಸಕಾರಾತ್ಮಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಮನೆಯ ಮುಖ್ಯ ಪ್ರವೇಶದ್ವಾರದ ಬಳಿ ಆಮೆಯನ್ನು ಇಡುವುದರಿಂದ ಕೆಟ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿದಂತೆ ತಡೆಯುತ್ತದೆ. ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಆಮೆಯನ್ನು ಮನೆಗೆ ತರಲು ಶುಭ ದಿನಗಳಾಗಿದ್ದು, ಜ್ಯೋತಿಷ್ಯದ ಪ್ರಕಾರ ಆಮೆ ಉಂಗುರ ಧರಿಸುವುದರಿಂದಲೂ ಅದೃಷ್ಟ ಒಲಿಯುತ್ತದೆ ಎಂದು ನಂಬಲಾಗಿದೆ.
ಒಂದು ವೇಳೆ ನೀವು ಕೃತಕ ಪ್ರತಿಮೆಗಳ ಬದಲಿಗೆ ನಿಜವಾದ ಜೀವಂತ ಆಮೆಯನ್ನು ಮನೆಯಲ್ಲಿ ಸಾಕಲು ಬಯಸಿದರೆ, ಅದಕ್ಕೆ ಹೆಚ್ಚಿನ ಜವಾಬ್ದಾರಿ ಬೇಕಾಗುತ್ತದೆ. ಜೀವಂತ ಆಮೆಯನ್ನು ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ, ಅದಕ್ಕೆ ಸೂಕ್ತವಾದ ಆವಾಸಸ್ಥಾನ ಮತ್ತು ಸರಿಯಾದ ಆರೈಕೆಯನ್ನು ಒದಗಿಸಬೇಕಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಒಂದು ವೇಳೆ ನಿಮಗೆ ಆಮೆಯ ಸರಿಯಾದ ಆರೈಕೆ ಮತ್ತು ಪೋಷಣೆ ಮಾಡಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಆಟಿಕೆ ಅಥವಾ ಲೋಹದ ಆಮೆಯನ್ನೇ ಇಟ್ಟುಕೊಳ್ಳುವುದು ಅತ್ಯಂತ ಸೂಕ್ತ ಮತ್ತು ಶ್ರೇಯಸ್ಕರ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Sat, 16 May 26