ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲಿ ಪೂಜೆಗೆ ವಿಶೇಷ ನಿಯಮಗಳು ಮತ್ತು ಪ್ರಾಮುಖ್ಯತೆಗಳಿರುತ್ತದೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಅಂತೆಯೇ, ಹಿಂದೂ ಧರ್ಮದಲ್ಲಿ, ಪೂಜೆಯ ಸಮಯದಲ್ಲಿ ದೀಪವನ್ನು ಬೆಳಗಿಸುವ ಸಂಪ್ರದಾಯವಿದೆ. ದೀಪವನ್ನು ಬೆಳಗಿಸುವುದು ಕತ್ತಲೆಯನ್ನು ತೊಲಗಿಸಿ ಬೆಳಕನ್ನು ಬರಮಾಡಿಕೊಳ್ಳುವುದು ಅಂದರೆ ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ ದೈವಿಕ ಶಕ್ತಿ ಅಥವಾ ಸಕಾರಾತ್ಮಕತೆಯನ್ನು ಬರಮಾಡಿಕೊಳ್ಳುವುದಾಗಿದೆ. ಅಂತೆಯೇ ಪೂಜೆಯ ಸಮಯ ಅಥವಾ ಬೆಳಿಗ್ಗೆ ಮತ್ತು ಸಂಜೆ ದೀಪಗಳನ್ನು ಬೆಳಗಿಸುವ ಮಹತ್ವವನ್ನು ಧರ್ಮಗ್ರಂಥಗಳು ವಿವರಿಸುತ್ತವೆ. ಆದರೆ ದೀಪವನ್ನು ಬೆಳಗಿಸಲು ಕೆಲವು ವಿಶೇಷ ನಿಯಮಗಳಿವೆ. ಅದನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ದೀಪ ಬೆಳಗುವಾಗ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ದೀಪ ಮೂಲೆ ಸ್ಥಿತೋ ಬ್ರಹ್ಮ
ದೀಪ ಮಧ್ಯೆ ಜನಾರ್ದನ
ದೀಪ ಆಗ್ರೇ ಶಂಕರ ಪ್ರೋಕ್ತೋ ದೀಪ ಜ್ಯೋತಿ ನಮೋಸ್ತುತೆ
ಎಂಬ ಮಂತ್ರವನ್ನು ಪಠಿಸುತ್ತಾ ದೀಪ ಬೆಳಗಿಸುವ ಕ್ರಮವಿದೆ. ಅದರಲ್ಲಿಯೂ ದೀಪದಲ್ಲಿ ಎಲ್ಲಾ ದೇವರು ಇರುವುದರಿಂದ ಒಂದು ದೀಪ ಬೆಳಗಿಸಿದರೆ ಅದು ಮುಕ್ಕೋಟಿ ದೇವತೆಗಳಿಗೆ ನಮಸ್ಕರಿಸಿದ ಪುಣ್ಯವನ್ನು ನೀಡುತ್ತದೆ ಎಂಬ ಮಾತಿದೆ. ಹಾಗಾಗಿ ದೀಪಕ್ಕೆ ಅದರದ್ದೇ ಆದಂತಹ ಶ್ರೇಷ್ಠತೆ ಇದೆ. ಆದರೆ ಒಂದು ದೀಪವನ್ನು ಬೆಳಗಿಸಿದ ನಂತರ, ಅದರ ಜ್ವಾಲೆಯಿಂದ ಮತ್ತೊಂದು ದೀಪವನ್ನು ಎಂದಿಗೂ ಬೆಳಗಿಸಬಾರದು ಎನ್ನುತ್ತಾರೆ. ಬಹಳಷ್ಟು ಜನರು ಈ ರೀತಿ ಮಾಡಿದಾಗ. ಮನೆಯ ಹಿರಿಯರು ಅಥವಾ ಅಜ್ಜಿಯರು ಈ ತಪ್ಪನ್ನು ಮಾಡದಂತೆ ನಮ್ಮನ್ನು ತಡೆಯುತ್ತಾರೆ. ಕೆಲವೊಂದು ಬಾರಿ ನಮ್ಮ ಹಳೆಯವರು ಹೇಳುವ ವಿಷಯಗಳು ಕೆಲವರಿಗೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ಅದರ ಕಾರಣಗಳು ಮತ್ತು ಅದರಿಂದ ಉಂಟಾಗುವ ಹಾನಿಯನ್ನು ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ. ಕೆಲವೊಮ್ಮೆ ಅಜ್ಜಿ -ಅಜ್ಜ ನೀಡಿದ ಸಲಹೆಯನ್ನು ನೀವು ಅನುಸರಿಸಿದರೆ ಸಂತೋಷವಾಗಿರುತ್ತೀರಿ ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ಅಶುಭ ಘಟನೆ ನಡೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹಾಗಾದರೆ ಒಂದು ದೀಪವನ್ನು ಇನ್ನೊಂದರಿಂದ ಬೆಳಗಿಸುವುದು ಸರಿಯಲ್ಲ ಏಕೆ? ಇದಕ್ಕೆ ಕಾರಣವೇನು?
ಇದನ್ನೂ ಓದಿ: 18 ವರ್ಷಗಳ ನಂತರ ರಾಹು ಶುಕ್ರ ಯುತಿ; ಈ 3 ರಾಶಿಯವರಿಗೆ ತುಂಬಾ ಒಳ್ಳೆಯದು
ಸಾಮಾನ್ಯವಾಗಿ ಅಗ್ನಿ ದೇವನು ದೀಪದ ಜ್ವಾಲೆಯಲ್ಲಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ನಾವು ದೀಪದಲ್ಲಿ ಬೆಂಕಿಯನ್ನು ಬೆಳಗಿಸಿದಾಗ, ಅದು ಮನೆಯಿಂದ ನಕಾರಾತ್ಮಕತೆಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭಗಳಲ್ಲಿ ನಾವು ಒಂದು ದೀಪವನ್ನು ಇನ್ನೊಂದರಿಂದ ಬೆಳಗಿಸಿದಾಗ, ದೀಪದಲ್ಲಿರುವ ನಕಾರಾತ್ಮಕತೆಯು ಮತ್ತೊಂದು ದೀಪಕ್ಕೂ ಪ್ರವೇಶಿಸುತ್ತದೆ ಇದು ಕೊನೆಗೊಳ್ಳುವ ಬದಲು, ನಕಾರಾತ್ಮಕತೆಯು ಮನೆಯಲ್ಲಿ ಪ್ರವಹಿಸುತ್ತದೆ. ಈ ಕಾರಣಕ್ಕಾಗಿಯೇ ಒಂದು ದೀಪವನ್ನು ಮತ್ತೊಂದು ದೀಪದಿಂದ ಬೆಳಗಿಸುವುದನ್ನು ನಿಷೇಧಿಸಲಾಗಿದೆ.
ಈ ನಂಬಿಕೆಗಳ ಹೊರತಾಗಿ ಕೆಲವು ಭಾಗಗಳಲ್ಲಿ ಒಂದು ದೀಪ ಹಚ್ಚಿದ ಮೇಲೆ ಅದರಿಂದಲೇ ಬೇರೆ ದೀಪಗಳನ್ನು ಬೆಳಗಿಸಬೇಕು ಎನ್ನಲಾಗುತ್ತದೆ. ಅಂದರೆ ದೀಪದಿಂದ ಮತ್ತೊಂದು ದೀಪ ಬೆಳಗಬೇಕು ಎಂಬ ಭಾವನೆ ಕೆಲವು ಭಾಗಗಳಲ್ಲಿ ಇದೆ. ಇದರಲ್ಲಿ ಸರಿ ಯಾವುದು ತಪ್ಪು ಯಾವುದು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ನಂಬಿಕೆ ಮತ್ತು ಪದ್ದತಿಗಳ ಅನುಸಾರ ಇದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ