
2026 ರ ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ (2026 Hockey World Cup) ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದ್ದು, ಭಾರತದ ಎರಡೂ ತಂಡಗಳು ನಿರೀಕ್ಷಿತ ಆರಂಭ ಪಡೆದುಕೊಂಡಿವೆ. ಪುರುಷರ ವಿಶ್ವಕಪ್‌ನಲ್ಲಿ, ಟೀಂ ಇಂಡಿಯಾ ತನ್ನ ಮೊದಲ ಪೂಲ್ ಪಂದ್ಯದಲ್ಲಿ ವೇಲ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದರೆ, ಇತ್ತ ಮಹಿಳಾ ಹಾಕಿ ತಂಡವು (India Women’s Hockey), ಮಹಿಳಾ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸದಿದ್ದರೂ ಒಲಿಂಪಿಕ್ಸ್ ಪದಕ ವಿಜೇತ ಚೀನಾ ವಿರುದ್ಧ 2-2 ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆಗಸ್ಟ್ 16 ರಂದು ಭಾನುವಾರ ನೆದರ್ಲ್ಯಾಂಡ್ಸ್‌ನ ಆಮ್ಸ್ಟೆಲ್ವೀನ್‌ನಲ್ಲಿ ನಡೆದ ತಮ್ಮ ಮೊದಲ ಪೂಲ್ ಡಿ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿತು. 8 ನೇ ನಿಮಿಷದಲ್ಲಿ ನವನೀತ್ ಕೌರ್ ಫೀಲ್ಡ್ ಗೋಲ್ ಗಳಿಸುವುದರೊಂದಿಗೆ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದಾಗ್ಯೂ, ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಏಕೆಂದರೆ ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ (15) ಚೀನಾ ಪೆನಾಲ್ಟಿ ಸ್ಟ್ರೋಕ್ ಪಡೆದು ಗೋಲು ಗಳಿಸಿ ಮೊದಲ ಕ್ವಾರ್ಟರ್ ಅನ್ನು 1-1 ರಿಂದ ಸಮಬಲಗೊಳಿಸಿತು. ಕೇವಲ 10 ನಿಮಿಷಗಳ ನಂತರ, ಟೀಂ ಇಂಡಿಯಾ ಮತ್ತೆ ಮುನ್ನಡೆ ಸಾಧಿಸಿತು. ಈ ಬಾರಿ, 25 ನೇ ನಿಮಿಷದಲ್ಲಿ, ದೀಪಿಕಾ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2-1 ರಿಂದ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಮುಂದಿನ 14 ನಿಮಿಷಗಳ ಕಾಲ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿತು. ಆದರೆ 39 ನೇ ನಿಮಿಷದಲ್ಲಿ, ಚೀನಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಸ್ಕೋರ್ ಅನ್ನು 2-2 ರಿಂದ ಸಮಬಲಗೊಳಿಸಿತು. ಚೀನಾ ಮುನ್ನಡೆ ಸಾಧಿಸುತ್ತದೆ ಎಂದು ತೋರುತ್ತಿತ್ತು, ಆದರೆ ಭಾರತದ ಬಲವಾದ ರಕ್ಷಣಾ ಪಡೆ ಮೂರು ಪೆನಾಲ್ಟಿ ಕಾರ್ನರ್‌ಗಳು ಸೇರಿದಂತೆ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿಪಂದ್ಯವನ್ನು 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಈ ಫಲಿತಾಂಶದೊಂದಿಗೆ, ಎರಡೂ ತಂಡಗಳು ತಲಾ 1 ಅಂಕಗಳನ್ನು ಪಡೆದವು. ಚೀನಾ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ತನ್ನ ಮೊದಲ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ.
𝗪𝗛𝗔𝗧 𝗔 𝗪𝗔𝗬 𝗧𝗢 𝗦𝗧𝗔𝗥𝗧 𝗢𝗨𝗥 𝗪𝗢𝗥𝗟𝗗 𝗖𝗨𝗣 𝗖𝗔𝗠𝗣𝗔𝗜𝗚𝗡! 🔥🇮🇳
The Indian Women’s Team showed immense character, resilience and fighting spirit to secure a hard-fought 2-2 draw against Olympic silver medallists China in their opening match of the FIH Hockey… pic.twitter.com/QIYons4rEN
— Hockey India (@TheHockeyIndia) August 16, 2026
ಚೀನಾದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಭಾರತ ತಂಡಕ್ಕೆ ಸವಾಲು ಸುಲಭವಾಗಿರಲಿಲ್ಲ. ಈ ಚೀನಾ ತಂಡ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿತು, ಆದರೆ ಭಾರತ ಮಹಿಳಾ ತಂಡಕ್ಕೆ ಆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕೂ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು, ಅದೇ ಚೀನಾ ತಂಡ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿತ್ತು. ಆದ್ದರಿಂದ, ಇಂತಹ ಬಲಿಷ್ಠ ತಂಡದ ವಿರುದ್ಧ ಭಾರತ ಮಹಿಳಾ ತಂಡದ ಪ್ರದರ್ಶನ ಸ್ಮರಣೀಯವಾಗಿತ್ತು. ಇದೀಗ ಟೀಂ ಇಂಡಿಯಾದ ಮುಂದಿನ ಪಂದ್ಯ ಆಗಸ್ಟ್ 18 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಾದರೂ ಭಾರತ ಗೆಲುವಿನ ಖಾತೆ ತೆರೆಯುತ್ತಾ ಕಾದುನೋಡಬೇಕಿದೆ.