
ಕಾಮನ್‌ವೆಲ್ತ್ ಕ್ರೀಡಾಕೂಟವನ್ನು (Commonwealth Games) ಆಯೋಜಿಸುವ ಬಗ್ಗೆ ಭಾರತ ಸರ್ಕಾರ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಅಂದರೆ, 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಹರಾಜಿನಲ್ಲಿ ಭಾಗವಹಿಸಲಿದೆ ಎಂಬುದು ಈಗ ಸ್ಪಷ್ಟವಾಗಿದೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗುಜರಾತ್ ಸರ್ಕಾರಕ್ಕೆ ಅನುದಾನ ನೆರವು ನೀಡಲು ಅನುಮೋದನೆ ನೀಡಲಾಗಿರುವುದರಿಂದ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಗೆದ್ದರೆ, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಲು ಈ ಅನುದಾನ ನೆರವಾಗಲಿದೆ.ಈ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಕೇವಲ ಕ್ರೀಡಾಪಟುಗಳು ಮಾತ್ರವಲ್ಲದೆ ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು, ಮಾಧ್ಯಮ ವ್ಯಕ್ತಿಗಳು ಸೇರಿದಂತೆ ಇತರರು ಕೂಡ ಭಾಗವಹಿಸಲಿದ್ದಾರೆ. ಇದು ಸ್ಥಳೀಯ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುವುದಲ್ಲದೆ ಹೆಚ್ಚಿನ ಆದಾಯವನ್ನು ತರಲಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಅಹಮದಾಬಾದ್ ಮೊದಲ ಆಯ್ಕೆಯಾಗಿದೆ. ಏಕೆಂದರೆ ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು ಲಭ್ಯವಿದೆ. ಅಲ್ಲದೆ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಯಶಸ್ವಿಯಾಗಿ ನಡೆದಿತ್ತು. ಕ್ರೀಡೆಗಳನ್ನು ಮೀರಿ, ಭಾರತದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವುದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಿದಂತ್ತಾಗುತ್ತದೆ. ಇದರ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಸಿಗಲಿದೆ.
ಭಾರತ ಕೊನೆಯದಾಗಿ 2010 ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದೀಗ 2030 ರಲ್ಲಿ ನಡೆಯಲ್ಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಜೊತೆಗೆ ದೆಹಲಿ ಮತ್ತು ಭುವನೇಶ್ವರವನ್ನು ಪರಿಗಣಿಸಲಾಗುವುದು ಎಂದು ಐಒಎ ಅಧ್ಯಕ್ಷೆ ಪಿಟಿ ಉಷಾ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅವರು ‘2026 ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಡಿಮೆ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಆದರೆ 2030 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯ ನಮಗೆ ಸಿಕ್ಕರೆ, ಎಲ್ಲಾ ಕ್ರೀಡೆಗಳನ್ನು ನಾವು ನಡೆಸುತ್ತೇವೆ ಎಂದರು. ವಾಸ್ತವವಾಗಿ 2026 ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ ಮತ್ತು ಶೂಟಿಂಗ್‌ನಂತಹ ಪ್ರಮುಖ ಕ್ರೀಡೆಗಳನ್ನು ವೆಚ್ಚದ ಕಾರಣ ತೆಗೆದು ಹಾಕಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Wed, 27 August 25