Neeraj Chopra: ಚಿನ್ನವನ್ನೇನೋ ಗೆದ್ದೆ, ಆದರೆ..? ಬಂಗಾರಕ್ಕೆ ಮುತ್ತಿಟ್ಟ ಬಳಿಕ ನಿರಾಸೆಯಿಂದ ನೀರಜ್ ಹೇಳಿದ್ದೇನು ಗೊತ್ತಾ?

|

Updated on: Aug 28, 2023 | 7:36 AM

Neeraj Chopra: ನಾನು 90 ಮೀಟರ್ ದೂರ ಜಾವೆಲಿನ್ ಎಸೆಯುವುದು ನನ್ನ ಗುರಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಕೂಡ ಅದಕ್ಕೆ ಪ್ರಯತ್ನಿಸಿದೆ. ಆದರೆ ಅದು ಆಗಿಲ್ಲ. ಸದ್ಯಕ್ಕೆ 90 ಮೀಟರ್‌ಗಿಂತ ಚಿನ್ನದ ಪದಕವೇ ಮುಖ್ಯ ಎನಿಸುತ್ತಿದೆ. ಮುಂದೆ ಸಾಕಷ್ಟು ಪೈಪೋಟಿ ಇದೆ, 90 ಮೀಟರ್ ಗುರಿ ದಾಟುತ್ತೇನೆ’ ಎಂದು ನೀರಜ್ ಹೇಳಿದರು.

Neeraj Chopra: ಚಿನ್ನವನ್ನೇನೋ ಗೆದ್ದೆ, ಆದರೆ..? ಬಂಗಾರಕ್ಕೆ ಮುತ್ತಿಟ್ಟ ಬಳಿಕ ನಿರಾಸೆಯಿಂದ ನೀರಜ್ ಹೇಳಿದ್ದೇನು ಗೊತ್ತಾ?
ನೀರಜ್ ಚೋಪ್ರಾ
Follow us on

ಹಂಗೇರಿಯ ಬುಡಾಪೆಸ್ಟ್​ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ (World Athletics Championships) ಜಾವೆಲಿನ್ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ (Neeraj Chopra) ಬಂಗಾರಕ್ಕೆ ಮುತ್ತಿಕ್ಕಿದ್ದಾರೆ. 88.17 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ವಿಶ್ವ ಚಾಂಪಿಯನ್ ಶಿಪ್ ವಶಪಡಿಸಿಕೊಂಡು ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ವಿಶ್ವ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ನೀರಜ್ ಪಾತ್ರರಾಗಿದ್ದಾರೆ. ಆಗಸ್ಟ್ 27 ರ ಭಾನುವಾರ ತಡರಾತ್ರಿ ನಡೆದ ಜಾವೆಲಿನ್ (Javelin) ಫೈನಲ್‌ನಲ್ಲಿ ನೀರಜ್‌ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ಹುಸಿಗೊಳಿಸದ ನೀರಜ್ ಭಾರತಕ್ಕೆ ಬಂಗಾರದ ಕೊಡುಗೆ ನೀಡಿದರು. ಅಷ್ಟೇ ಅಲ್ಲ, ಜಾವೆಲಿನ್ ಥ್ರೋನಲ್ಲಿ ಒಂದೇ ಬಾರಿಗೆ ಒಲಿಂಪಿಕ್ ಚಿನ್ನ ಮತ್ತು ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಗೆದ್ದ ವಿಶ್ವದ ಮೂರನೇ ಜಾವೆಲಿನ್ ಎಸೆತಗಾರ ಎನಿಸಿಕೊಂಡರು. ಆದರೆ ವಿಶ್ವವೇ ಮೆಚ್ಚುವ ಸಾಧನೆ ಮಾಡಿದರೂ ನೀರಜ್ ಮೊಗದಲ್ಲಿ ಮಾತ್ರ ಅದೊಂದು ಗುರಿ ತಲುಪದ ಕೊರಗು ಎದ್ದು ಕಾಣುತ್ತಿತ್ತು.

2016ರಲ್ಲಿ ನೀರಜ್ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಈಗ 7 ವರ್ಷಗಳ ನಂತರ, ನೀರಜ್ ಮತ್ತೆ ತಮ್ಮ ಅದ್ಭುತ ಪ್ರದರ್ಶನದಿಂದ ಹಿರಿಯ ಮಟ್ಟದಲ್ಲಿಯೂ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಈ ರೀತಿಯಾಗಿ, ನೀರಜ್ ಅವರು ಹಿರಿಯ ಮಟ್ಟದಲ್ಲಿ ಪ್ರತಿ ಪ್ರಮುಖ ಪಂದ್ಯಗಳು ಮತ್ತು ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸದಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಚಿನ್ನದ ಹುಡುಗನ ಐತಿಹಾಸಿಕ ಸಾಧನೆ: ನೀರಜ್ ಮುಡಿಗೆ ಮತ್ತೊಂದು ಬಂಗಾರ

ಗುರಿ ಮುಟ್ಟಲಾಗಲಿಲ್ಲ

ವಾಸ್ತವವಾಗಿ​ ಒಲಿಂಪಿಕ್ ಚಾಂಪಿಯನ್ ಆದ ಬಳಿಕ, ಪ್ರತಿಯೊಂದು ಸಂದರ್ಶನದಲ್ಲಿಯೂ ನೀರಜ್, 90 ಮೀಟರ್ ದೂರ ಜಾವೆಲಿನ್ ಎಸೆಯುವುದೇ ನನ್ನ ಗುರಿ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ 87.58 ಮೀಟರ್‌ಗಳಷ್ಟು ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದ ನೀರಜ್, ಅಂದಿನಿಂದ 90 ಮೀಟರ್ ಎಸೆಯುವುದು ನನ್ನ ಗುರಿ ಎಂದು ಹೇಳುತ್ತಲೇ ಬಂದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ನೀರಜ್ ಕಳೆದುಕೊಂಡಿದ್ದರು. ಗಾಯದಿಂದ ಚೇತರಿಸಿಕೊಂಡು ಡೈಮಂಡ್ ಲೀಗ್‌ನಲ್ಲಿ ಆಡಿದ್ದ ನೀರಜ್​, ಸತತವಾಗಿ ಪದಕ ಗೆದ್ದರೂ 90 ಮೀಟರ್‌ ಗುರಿ ತಲುಪಲಾಗಲಿಲ್ಲ. ಇದೀಗ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿಯೂ ನೀರಜ್​ಗೆ ತಮ್ಮ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

90 ಮೀಟರ್‌ಗಿಂತ ಚಿನ್ನದ ಪದಕವೇ ಮುಖ್ಯ

ಈ ಬಗ್ಗೆ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಬಳಿಕ ಮಾತನಾಡಿದ ಅವರು, ‘ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನವಿಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಈ ಬಾರಿ ಆ ಕನಸು ನನಸಾಗಿದೆ. ಚಿನ್ನದ ಪದಕವನ್ನು ನೋಡಿ (ಕತ್ತಿನಲ್ಲಿ ನೇತಾಡುತ್ತಿರುವ ಪದಕವನ್ನು ತೋರಿಸುತ್ತಾ). ಆದರೆ ನನ್ನ ಗುರಿಯನ್ನು ನನಗೆ ತಲುಪಲು ಸಾಧ್ಯವಾಗಲಿಲ್ಲ. ನಾನು 90 ಮೀಟರ್ ದೂರ ಜಾವೆಲಿನ್ ಎಸೆಯುವುದು ನನ್ನ ಗುರಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಕೂಡ ಅದಕ್ಕೆ ಪ್ರಯತ್ನಿಸಿದೆ. ಆದರೆ ಅದು ಆಗಿಲ್ಲ. ಸದ್ಯಕ್ಕೆ 90 ಮೀಟರ್‌ಗಿಂತ ಚಿನ್ನದ ಪದಕವೇ ಮುಖ್ಯ ಎನಿಸುತ್ತಿದೆ. ಮುಂದೆ ಸಾಕಷ್ಟು ಪೈಪೋಟಿ ಇದೆ, 90 ಮೀಟರ್ ಗುರಿ ದಾಟುತ್ತೇನೆ’ ಎಂದು ನೀರಜ್ ಹೇಳಿದರು.

ಈ ಸಾಧನೆ ಮಾಡಿದ ಮೂರನೇ ವ್ಯಕ್ತಿ

ನೀರಜ್ ಜಾವೆಲಿನ್ ಇತಿಹಾಸದಲ್ಲಿ ಸತತವಾಗಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಗಳನ್ನು ಗೆದ್ದ ಮೂರನೇ ವ್ಯಕ್ತಿ ಎನಿಸಿಕೊಂಡರು. ಇತಿಹಾಸದಲ್ಲಿ ಕೇವಲ ಇಬ್ಬರು ಕ್ರೀಡಾಪಟುಗಳು ಮಾತ್ರ ಈ ಸಾಧನೆ ಮಾಡಿದ್ದು, ನೀರಜ್​ಗೂ ಮೊದಲು ಜೆಕ್ ಗಣರಾಜ್ಯದ ಜಾನ್ ಝೆಲೆನಿ ಮತ್ತು ನಾರ್ವೆಯ ಆಂಡ್ರೆಸ್ ಥಾರ್ಕಿಲ್‌ಸನ್ ಈ ಸಾಧನೆ ಮಾಡಿದ್ದರು. 1992, 1996, 2000ರ ಒಲಿಂಪಿಕ್ಸ್‌ನಲ್ಲಿ ಝೆಲೆನಿ ಚಿನ್ನ ಗೆದ್ದಿದ್ದರು. ಇದರೊಂದಿಗೆ ಅವರು 1993, 1995 ಮತ್ತು 2001 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮತ್ತೊಂದೆಡೆ, 2008 ರ ಒಲಿಂಪಿಕ್ಸ್ ಮತ್ತು 2009 ರ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಥಾರ್ಕಿಲ್‌ಸನ್ ಚಿನ್ನ ಗೆದ್ದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 am, Mon, 28 August 23