Neeraj Chopra: ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
Neeraj Chopra: 2021 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಅಂದು ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದರು.
ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದರು.
2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಸ್ವರ್ಣ ಪದಕಕ್ಕೆ ಕೊರೊಳ್ಳೊಡ್ಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
ಹೇಗಿತ್ತು 6 ಸುತ್ತಿನ ಫೈನಲ್ ಪೈಪೋಟಿ?
ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್ ಚೋಪ್ರಾ, 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು. ಇದೇ ವೇಳೆ ತನ್ನ ಎರಡನೇ ಎಸೆತದಲ್ಲಿ ಜರ್ಮನಿಯ ಜೂಲಿಯನ್ ವೆಬೆರ್ 85.79 ದೂರವನ್ನು ಕ್ರಮಿಸುವ ಮೂಲಕ ಭಾರತೀಯ ಆಟಗಾರನಿಗೆ ಪೈಪೋಟಿ ನೀಡುವ ಸೂಚನೆ ನೀಡಿದರು.
ಇನ್ನು 3ನೇ ಎಸೆತದಲ್ಲಿ ನೀರಜ್ ಚೋಪ್ರಾ 86.32 ಮೀಟರ್ ದೂರಕ್ಕೆ ಎಸೆದರೆ, ಪಾಕಿಸ್ತಾನದ ಅರ್ಷದ್ ನದೀಮ್ 87.82 ಮೀಟರ್ ಕ್ರಮಿಸುವ ಮೂಲಕ 2ನೇ ಸ್ಥಾನಕ್ಕೇರಿದರು. ಇದರೊಂದಿಗೆ ಪಂದ್ಯವು ರೋಚಕ ಪೈಪೋಟಿಯತ್ತ ಸಾಗಿತು. 4ನೇ ಸುತ್ತಿನಲ್ಲಿ ನದೀಮ್ 87.15 ಮೀಟರ್ ದೂರ ಎಸೆದರೆ, ಚೋಪ್ರಾ 84.64 ಮೀಟರ್ಗೆ ತೃಪ್ತಿಪಟ್ಟುಕೊಂಡರು.
5ನೇ ಸುತ್ತಿನಲ್ಲಿ ಜೆಕ್ ರಿಪಬ್ಲಿಕ್ನ ಜಾಕೂಬ್ ವಡ್ಲೆಜ್ 86.67 ಮೀಟರ್ ದೂರಕ್ಕೆ ಭರ್ಜಿ ತಲುಪಿಸಿದರು. ಈ ಮೂಲಕ 3ನೇ ಸ್ಥಾನಕ್ಕೇರಿದರು. ಇದೇ ಸುತ್ತಿನಲ್ಲಿ ಅರ್ಷದ್ ನದೀಮ್ ಫೌಲ್ ಮಾಡಿದರೆ, ನೀರಜ್ ಚೋಪ್ರಾ 87.73 ಮೀಟರ್ ದೂರ ಕ್ರಮಿಸುವಲ್ಲಿ ಯಶಸ್ವಿಯಾದರು.
ಇನ್ನು ಫೈನಲ್ ಸುತ್ತಿನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 81.86 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು. ಇತ್ತ ನೀರಜ್ ಚೋಪ್ರಾ 83.98 ಮೀಟರ್ ದೂರದೊಂದಿಗೆ ಫೈನಲ್ ರೌಂಡ್ ಅಂತ್ಯಗೊಳಿಸಿದರು. ಈ ಮೂಲಕ 2ನೇ ಸುತ್ತಿನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದಿದ್ದ ನೀರಜ್ ಚೋಪ್ರಾ ಅಗ್ರಸ್ಥಾನದೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
88.17 Meters for 🥇
Neeraj Chopra becomes 1st 🇮🇳 athlete to win a gold medal at the #WorldAthleticsChampionships 😍
Watch the best of #Budapest23 – FREE only on #JioCinema ✨#WAConJioCinema pic.twitter.com/le562o9zp2
— JioCinema (@JioCinema) August 27, 2023
ಜಾವೆಲಿನ್ ಥ್ರೋ ಫೈನಲ್ ರಿಸಲ್ಟ್:
- ಚಿನ್ನ- ನೀರಜ್ ಚೋಪ್ರಾ (ಭಾರತ)
- ಬೆಳ್ಳಿ- ಅರ್ಷದ್ ನದೀಮ್ (ಪಾಕಿಸ್ತಾನ್)
- ಕಂಚು- ಜಾಕೂಬ್ ವಡ್ಲೆಜ್ (ಜೆಕ್ ರಿಪಬ್ಲಿಕ್)
ಫೈನಲ್ನಲ್ಲಿ ಭಾರತೀಯರ ಪ್ರದರ್ಶನ:
ನೀರಜ್ ಚೋಪ್ರಾ:
- ಫೌಲ್
- 88.17 ಮೀ
- 86.32 ಮೀ
- 84.64 ಮೀ
- 87.73 ಮೀ
- 83.98 ಮೀ
ಡಿಪಿ ಮನು:
- 78.44 ಮೀ
- ಫೌಲ್
- 83.72 ಮೀ
- ಫೌಲ್
- 83.48 ಮೀ
- 84.14 ಮೀ
ಕಿಶೋರ್ ಜೆನಾ:
- 75.70ಮೀ
- 82.82ಮೀ
- ಫೌಲ್
- 80.19 ಮೀ
- 84.77 ಮೀ
- ಫೌಲ್
ಒಲಿಂಪಿಕ್ಸ್ಗೆ ನೇರ ಎಂಟ್ರಿ:
2024 ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್ಗೆ ನೀರಜ್ ಚೋಪ್ರಾ ಅರ್ಹತೆ ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್ ಅರ್ಹತೆಗಾಗಿ ಈಗಾಗಲೇ ವಿಂಡೋ ತೆರೆಯಲಾಗಿದ್ದು, ಇದಕ್ಕಾಗಿ 85.50 ಮೀಟರ್ ದೂರವನ್ನು ನಿಗದಿ ಮಾಡಲಾಗಿತ್ತು. ಅದರಂತೆ ಫೈನಲ್ನ ಅರ್ಹತಾ ಸುತ್ತಿನಲ್ಲಿ 88.77 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆದುಕೊಂಡಿದ್ದರು.
ಇದನ್ನೂ ಓದಿ:
ಚಿನ್ನದ ಹುಡುಗ ಚಿನ್ನದ ಬೇಟೆ:
2021 ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ನ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು. ಅಂದು ಬರೋಬ್ಬರಿ 87.58 ಮೀ. ದೂರ ಭರ್ಜಿ ಎಸೆಯುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆಯುವ ಮೂಲಕ ಮತ್ತೊಮ್ಮೆ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುವ ವಿಶ್ವಾಸ ಮೂಡಿಸಿದ್ದಾರೆ.
Published On - 12:57 am, Mon, 28 August 23