India vs Pakistan: ಭಾರತ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು..!
India vs Pakistan: ಈ ಬಾರಿ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಏಕದಿನ ಕ್ರಿಕೆಟ್ನಲ್ಲಿ ಭಾರತದ ಎದುರು ಪಾಕಿಸ್ತಾನ್ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು. ಉಭಯ ತಂಡಗಳು ಇದುವರೆಗೆ 132 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಪಾಕಿಸ್ತಾನ್ 73 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಏಷ್ಯಾಕಪ್ಗೆ ಕೌಂಟ್ ಶುರುವಾಗಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯನ್ ಕ್ರಿಕೆಟ್ ಕದನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿರುವುದು ಸೆಪ್ಟೆಂಬರ್ 2 ರಂದು. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಎಂಬುದು ವಿಶೇಷ. ಅಂದರೆ ಭಾರತ ತಂಡವು ಪಾಕ್ ವಿರುದ್ಧದ ಪಂದ್ಯದ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಈ ಹೈವೋಲ್ಟೆಜ್ ಪಂದ್ಯಕ್ಕಾಗಿ ಪಾಕಿಸ್ತಾನ್ ತಂಡವು ಅತ್ತ ಮುಲ್ತಾನ್ನಲ್ಲಿ ಭರ್ಜರಿ ತಯಾರಿಯಲ್ಲಿದ್ದರೆ, ಇತ್ತ ಟೀಮ್ ಇಂಡಿಯಾ ಬೆಂಗಳೂರಿನಲ್ಲಿ ಕಸರತ್ತು ನಡೆಸುತ್ತಿದೆ. ಇಲ್ಲಿ ವಿಶೇಷ ಎಂದರೆ ಉಭಯ ತಂಡಗಳು 3 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿರುವುದು.
ಅಂದರೆ ಕೊನೆಯ ಬಾರಿ ಭಾರತ-ಪಾಕ್ ಏಕದಿನ ಪಂದ್ಯವಾಡಿರುವುದು 2019 ರಲ್ಲಿ. ಕಳೆದ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಎದುರು 89 ರನ್ಗಳ ಸೋಲುಂಡ ಬಳಿಕ ಪಾಕಿಸ್ತಾನ್ ತಂಡ 50 ಓವರ್ಗಳ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಿಲ್ಲ. ಇದೀಗ ಮೂರು ವರ್ಷಗಳ ಉಭಯ ತಂಡಗಳ ಮುಖಾಮುಖಿಗೆ ಆತಿಥ್ಯವಹಿಸಲು ಶ್ರೀಲಂಕಾದ ಪಲ್ಲೆಕೆಲ್ಲೆ ಸ್ಟೇಡಿಯಂ ಅಣಿಯಾಗಿದೆ.
ಟೀಮ್ ಇಂಡಿಯಾ ಸೋತಿದ್ದೇ ಹೆಚ್ಚು🏏
ಈ ಬಾರಿ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಏಕದಿನ ಕ್ರಿಕೆಟ್ನಲ್ಲಿ ಭಾರತದ ಎದುರು ಪಾಕಿಸ್ತಾನ್ ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಉಭಯ ತಂಡಗಳು ಇದುವರೆಗೆ 132 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಪಾಕಿಸ್ತಾನ್ 73 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಭಾರತ ಗೆದ್ದಿರುವುದು ಕೇವಲ 55 ಪಂದ್ಯಗಳಲ್ಲಿ. ಇನ್ನು ನಾಲ್ಕು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿತ್ತು.
ಅಂದರೆ ಇಲ್ಲಿ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡವು ಟೀಮ್ ಇಂಡಿಯಾ ವಿರುದ್ಧ ಮೇಲುಗೈ ಹೊಂದಿರುವುದು ಸ್ಪಷ್ಟ. ಅದರಲ್ಲೂ ತಟಸ್ಥ ಮೈದಾನದಲ್ಲಿ ಭಾರತದ ವಿರುದ್ಧ ಪಾಕ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ.
ಉಭಯ ತಂಡಗಳು ತಟಸ್ಥ ಮೈದಾನಗಳಲ್ಲಿ ಒಟ್ಟು 73 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಪಾಕಿಸ್ತಾನ್ 40 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದರೆ, ಟೀಮ್ ಇಂಡಿಯಾ 33 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇದೀಗ ಏಷ್ಯಾಕಪ್ನಲ್ಲೂ ಭಾರತ-ಪಾಕಿಸ್ತಾನ್ ತಟಸ್ಥ ಮೈದಾನದಲ್ಲಿ (ಶ್ರೀಲಂಕಾ) ಪಂದ್ಯವಾಡಲಿದೆ. ಹೀಗಾಗಿಯೇ ಈ ಪಂದ್ಯದಲ್ಲೂ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ನ್ಯೂ ಇಂಡಿಯಾ ಪಾರುಪತ್ಯ 👍
ಇಲ್ಲಿ ಒಟ್ಟಾರೆ ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡ ಮೇಲುಗೈ ಹೊಂದಿದ್ದರೂ, ಕಳೆದ ಒಂದು ದಶಕದಿಂದ ಟೀಮ್ ಇಂಡಿಯಾ ಪಾಕ್ ತಂಡವನ್ನು ಬಗ್ಗು ಬಡಿಯುತ್ತಿರುವುದು ಸ್ಪಷ್ಟ. ಏಕೆಂದರೆ ಉಭಯ ತಂಡಗಳ ಕೊನೆಯ 10 ಏಕದಿನ ಪಂದ್ಯಗಳ ಫಲಿತಾಂಶಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ, ಇಲ್ಲಿ ಪಾಕಿಸ್ತಾನ್ ತಂಡ ಗೆದ್ದಿರುವುದು ಕೇವಲ 3 ಬಾರಿ ಮಾತ್ರ. ಅಂದರೆ ಉಳಿದ 7 ಪಂದ್ಯಗಳಲ್ಲಿ ಪಾಕ್ ತಂಡವನ್ನು ಭಾರತ ಬಗ್ಗು ಬಡಿದಿದೆ.
ಹಾಗೆಯೇ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ್ ಕೊನೆಯ ಬಾರಿ ಏಕದಿನ ಪಂದ್ಯ ಗೆದ್ದಿರುವುದು 2017 ರಲ್ಲಿ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ತಂಡವನ್ನು 180 ರನ್ಗಳಿಂದ ಸೋಲಿಸಿ ಪಾಕಿಸ್ತಾನ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಮೂರು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ 3 ಪಂದ್ಯಗಳಲ್ಲೂ ಭಾರತ ತಂಡ ಗೆದ್ದಿದೆ. ಹೀಗಾಗಿ ಈ ಗೆಲುವಿನ ನಾಗಾಲೋಟ ಈ ಬಾರಿ ಕೂಡ ನಿರೀಕ್ಷಿಸಬಹುದು.
ಏಷ್ಯಾಕಪ್ಗೆ ಉಭಯ ತಂಡಗಳು ಹೀಗಿವೆ 🏆
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
Published On - 8:51 pm, Sun, 27 August 23