ಶಾಹೀನ್ ಅಫ್ರಿದಿ ಎದುರಿಸಲು ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್
India vs Pakistan: ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 30 ರಿಂದ ಶುರುವಾಗಲಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿರುವುದು ಪಾಕಿಸ್ತಾನ್ ವಿರುದ್ಧ ಎಂಬುದು ವಿಶೇಷ. ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬ್ಯಾಟರ್ಗಳು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಬೆಂಗಳೂರಿನ ಆಲೂರಿನ ಕೆಎಸ್ಸಿಎ ಸ್ಟೇಡಿಯಂನಲ್ಲಿ ಭಾರತ ತಂಡದ ಅಭ್ಯಾಸ ನಡೆಯುತ್ತಿದ್ದು, ಈ ವೇಳೆ ಎಡಗೈ ವೇಗಿಗಳನ್ನು ಎದುರಿಸಲು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶೇಷ ತಂತ್ರಗಳನ್ನು ರೂಪಿಸುತ್ತಿರುವುದು ಕಂಡು ಬಂದಿದೆ.
ಏಕೆಂದರೆ ಪ್ರಮುಖ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಡಗೈ ಬೌಲರ್ಗಳು ಕಂಟಕವಾಗಿ ಪರಿಣಮಿಸಿದ್ದಾರೆ. ಇದಕ್ಕೆ ಸಾಕ್ಷಿ 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಹಮ್ಮದ್ ಅಮೀರ್, 2019 ರಲ್ಲಿ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟ್ರೆಂಟ್ ಬೌಲ್ಟ್ ಮತ್ತು 2021ರ ಟಿ20 ವಿಶ್ವಕಪ್‌ನಲ್ಲಿ ಶಾಹೀನ್ ಅಫ್ರಿದಿ ಅವರ ಮಾರಕ ದಾಳಿ. ಈ ಮೂರು ಟೂರ್ನಿಗಳಲ್ಲೂ ಎಡಗೈ ವೇಗದ ಬೌಲರ್ಗಳಿಗೆ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮಂಡಿಯೂರಿದ್ದರು.
ಅದರಲ್ಲೂ ಮುಖ್ಯವಾಗಿ 2021ರ ಟಿ20 ವಿಶ್ವಕಪ್‌ನಲ್ಲಿ ಶಾಹೀನ್ ಎಸೆತದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಕೆಎಲ್ ರಾಹುಲ್ ಕ್ರೀಸ್ ಕಚ್ಚಿ ನಿಲ್ಲುವ ಮುನ್ನವೇ ವಿಕೆಟ್ ಒಪ್ಪಿಸಿದ್ದರು. ಹಾಗೆಯೇ ವಿರಾಟ್ ಕೊಹ್ಲಿ ಕೂಡ ಶಾಹೀನ್ ಎಸೆತದಲ್ಲೇ ಕೊನೆಗೆ ಔಟಾಗಿದ್ದರು.
ಇದೀಗ ಏಷ್ಯಾಕಪ್ಗಾಗಿ ಅಭ್ಯಾಸ ನಡೆಸುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ಗಳು ಶಾಹೀನ್ ತಂತ್ರಗಳಿಗೆ ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಎತ್ತರದ ಎಡಗೈ ಬೌಲರ್ ಅನಿಕೇತ್ ಚೌಧರಿ ಅವರನ್ನು ಕರೆಸಿಕೊಳ್ಳಲಾಗಿದೆ.
ಶಾಹೀನ್ ಅಫ್ರಿದಿ ಶೈಲಿಯಲ್ಲೇ ಬೌಲಿಂಗ್ ಮಾಡುವ 33 ವರ್ಷದ ಅನಿಕೇತ್ ಅವರು ಇದೀಗ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮೂರನೇ ದಿನದ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನಿಕೇತ್ ಅವರ ಎಸೆತಗಳನ್ನು ಎದುರಿಸಿ ಅಭ್ಯಾಸ ನಡೆಸಿದ್ದಾರೆ.
ಈ ಮೂಲಕ ಶಾಹೀನ್ ಅಫ್ರಿದಿ ಅವರ ಇನ್ಸ್ವಿಂಗ್ ಹಾಗೂ ಯಾರ್ಕರ್ ಎಸೆತಗಳನ್ನು ಎದುರಿಸಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಏಷ್ಯಾಕಪ್ನಲ್ಲಿ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿಯ ಅಬ್ಬರದ ಮುಂದೆ ಪಾಕ್ ವೇಗಿ ಲಯ ತಪ್ಪಿದರೆ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಶ್ರೀಲಂಕಾದಲ್ಲಿ ಇಂಡೊ-ಪಾಕ್ ಕದನ:
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 7:12 pm, Sun, 27 August 23