ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ (Rishabh Pant) ಕಾರು ಅಪಘಾತವಾಗಿದೆ. ದೆಹಲಿಯಲ್ಲಿ ಮನೆಗೆ ನಿರ್ಗಮಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಪಂತ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿಯಾದ ರಭಸಕ್ಕೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. ಅವರು ಪ್ರಸ್ತುತ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ದಯದಿಂದ ಪಂತ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಟೀಂ ಇಂಡಿಯಾದ (Team India) ಈ ಯುವ ಕ್ರಿಕೆಟಿಗ ಬೇಗ ಗುಣಮುಖರಾಗಲಿ ಎಂದು ಇಡೀ ವಿಶ್ವ ಕ್ರಿಕೆಟ್ ಟ್ವೀಟ್ ಮಾಡಿ ಹಾರೈಸುತ್ತಿದೆ. ಇದೀಗ ಪಂತ್ ಅಪಘಾತಕ್ಕೀಡಾದ ಕೆಲವೇ ಗಂಟೆಗಳ ನಂತರ, ನಟಿ ಊರ್ವಶಿ ರೌಟೇಲಾ (Urvashi Rautela) ಅವರು ‘ಪ್ರಾರ್ಥಿಸುತ್ತಿದ್ದೇನೆ’ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ, ಎಲ್ಲಿಯೂ ರಿಷಬ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ನೆಟ್ಟಿಗರು, ಇದು ರಿಷಬ್ಗಾಗಿಯೇ ಹಾಕಿರುವ ಪೋಸ್ಟ್ ಎಂದು ಬಿಂಬಿಸುತ್ತಿದ್ದಾರೆ.
ರಿಷಬ್ ಪಂತ್ ಅವರ ಕಾರು ಮುಂಜಾನೆ 5:30 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ರೂರ್ಕಿ ಬಳಿಯ ಮೊಹಮ್ಮದ್‌ಪುರ ಜಟ್‌ನಲ್ಲಿ ಈ ಘಟನೆ ನಡೆದಿದೆ. ‘‘ಕಾರನ್ನು ಡ್ರೈವ್ ಮಾಡುವಾಗ ನಿದ್ರೆಗೆ ಜಾರಿದೆ. ಇದರ ಪರಿಣಾಮವಾಗಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ’’ ಎಂದು ಸ್ವತಃ ಪಂತ್ ಅವರೇ ಹೇಳಿಕೆ ನೀಡಿದ್ದಾರೆ. ಕೂಡಲೇ ಪಂತ್ ಅವರನ್ನು ರೂರ್ಕಿ ಆಸ್ಪತ್ರೆಗೆ ಕರೆದುಯ್ಯಲಾಗಿದ್ದು, ಅಲ್ಲಿಂದ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನೋವಿನಲ್ಲಿ ನರಳುತ್ತಿದ್ದ ರಿಷಬ್ ಪಂತ್ ನೆರವಿಗೆ ಬಾರದೆ ಬ್ಯಾಗ್ನಲ್ಲಿದ ಹಣ ಕದ್ದು ಪರಾರಿಯಾದ ಕ್ರೂರಿಗಳು..!
ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಫೋಟೋವನ್ನು ಶೇರ್ ಮಾಡಿರುವ ನಟಿ ಊರ್ವಶಿ ರೌಟೇಲಾ ಅದಕ್ಕೆ ‘ಪ್ರೇಯಿಂಗ್’ (ಪ್ರಾರ್ಥಿಸುತ್ತಿದ್ದೇನೆ) ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ಆದರೆ ಊರ್ವಶಿ ಯಾರಿಗಾಗಿ ಈ ರೀತಿಯ ಪೋಸ್ಟ್ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಇದು ಪಂತ್ಗಾಗಿಯೇ ಹಾಕಿರುವ ಪೋಸ್ಟ್ ಎಂಬುದು ಎಲ್ಲರಿಂದ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ. ಊರ್ವಶಿ ಪೋಸ್ಟ್ಗೆ ಕಮೆಂಟ್ ಮಾಡಿರುವ ನೆಟ್ಟಿಗರು ಕೂಡ ಪಂತ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಊರ್ವಶಿ ಅವರ ಈ ಪೋಸ್ಟ್ ಇಷ್ಟು ಸದ್ದು ಮಾಡಲು ಕಾರಣವೂ ಇದೆ. ವಾಸ್ತವವಾಗಿ ಈ ಇಬ್ಬರ ನಡುವೆ ಕಳೆದ ಕೆಲವು ತಿಂಗಳುಗಳಿಂದ ಮುಸುಕಿನ ಗುದ್ದಾಟ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ವಾಕ್ಸಮರಕ್ಕೆ ಪ್ರಮುಖ ಕಾರಣವೆನೆಂದರೆ, ಊರ್ವಶಿ ನೀಡಿದ್ದ ಅದೊಂದು ಸಂದರ್ಶನ. ಕೆಲವು ತಿಂಗಳುಗಳ ಹಿಂದೆ ನಟಿ ಊರ್ವಶಿ ಅವರು ಸಂದರ್ಶನವೊಂದರಲ್ಲಿ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ (ಇಲ್ಲಿ ರಿಷಭ್ ಪಂತ್ ಹೆಸರನ್ನು ನೆರವಾಗಿ ತೆಗೆದುಕೊಳ್ಳದೆ ಕೇವಲ ಆರ್‌ಪಿ ಎಂಬ ಪದವನ್ನು ಬಳಸಿದ್ದರು) ತನಗಾಗಿ ಕಾಯುತ್ತಿದ್ದರು. ನಾನು ಸತತ 10 ಗಂಟೆ ಶೂಟಿಂಗ್ ಮುಗಿಸಿ ದೆಹಲಿಗೆ ಬರುವಷ್ಟರಲ್ಲಿ ತುಂಬಾ ದಣಿದಿದ್ದೆ. ಹಾಗಾಗಿ ಧಣಿವಾರಿಸಿಕೊಳ್ಳಲು ಹೋಟೆಲ್ ರೂಂ ಗೆ ಹೋಗಿ ಮಲಗಿದ್ದೆ. ಆದರೆ ಆರ್‌ಪಿ, ನಾನು ತಂಗಿದ್ದ ಹೋಟೆಲ್ನ ಲಾಬಿಯಲ್ಲಿ ನನಗಾಗಿ ಕಾದು ಕುಳಿತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.
ಅಂದಿನಿಂದ ಜನರು ಊರ್ವಶಿ ರಿಷಬ್ ಪಂತ್ ಬಗ್ಗೆಯೇ ಮಾತನಾಡುತ್ತಿದ್ದಾರೆ ಅಂದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪಂತ್ರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ್ದ ಪಂತ್ ಸುಳ್ಳು ಹೇಳುವುದಕ್ಕೂ ಮಿತಿ ಇದೆ ಎಂದು ಪೋಸ್ಟ್ ಹಾಕುವ ಮೂಲಕ ಈ ಇಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ವಾರ್ಗೆ ನಾಂದಿ ಹಾಡಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Fri, 30 December 22