Olympian Harassed: ದೆಹಲಿಯಲ್ಲಿ ಖ್ಯಾತ ಶೂಟರ್ ಮನು ಭಾಕರ್ ವಿಮಾನ ಹತ್ತದಂತೆ ತಡೆದು ಉದ್ಧಟತನ ಮೆರೆದ ಏರ್ ಇಂಡಿಯಾ ಅಧಿಕಾರಿಗಳು

|

Updated on: Feb 20, 2021 | 11:27 PM

ಆರ್ ಇಂಡಿಯಾ ಅಧಿಕಾರಿ ಮನೋಜ್ ಗುಪ್ತಾ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ತಮ್ಮನ್ನು ಒಬ್ಬ ಕ್ರಿಮಿನಲ್ ಥರ ನಡೆಸಿಕೊಂಡರು, ಜನರರೊಂದಿಗೆ ಹೇಗೆ ವರ್ತಿಸಬೇಕೆಂಬ ತರಬೇತಿ ಅವರಿಗೆ ನೀಡುವ ಅವಶ್ಯಕತೆಯಿದೆ ಮನು ಭಾಕರ್ ಹೇಳಿದ್ದಾರೆ.

Olympian Harassed: ದೆಹಲಿಯಲ್ಲಿ ಖ್ಯಾತ ಶೂಟರ್ ಮನು ಭಾಕರ್ ವಿಮಾನ ಹತ್ತದಂತೆ ತಡೆದು ಉದ್ಧಟತನ ಮೆರೆದ ಏರ್ ಇಂಡಿಯಾ ಅಧಿಕಾರಿಗಳು
ಶೂಟರ್ ಮನು ಭಾಕರ್
Follow us on

ನವದೆಹಲಿ: ಒಲಂಪಿಯನ್ ಮತ್ತು ದೇಶದ ಅಗ್ರಮಾನ್ಯ ಶೂಟರ್​ಗಳಲ್ಲಿ ಒಬ್ಬರಾಗಿರುವ ಮನು ಭಾಕರ್ ತರಬೇತಿಗೋಸ್ಕರ ತಾವು ಬಳಸುವ ಆಯುಧ (ಪಿಸ್ತೂಲ್​, ಗನ್) ಮತ್ತು ಮುದ್ದುಗುಂಡುಗಳನ್ನು ಕೊಂಡೊಯ್ಯುತ್ತಿದ್ದುದ್ದರಿಂದ ವಿಮಾನ ಹತ್ತದಂತೆ ತಡೆದಿರುವ ಪ್ರಸಂಗ ನವದೆಹಲಿಯಲ್ಲಿ ಶುಕ್ರವಾರದಂದು ನಡೆದಿದೆ. ಭಾಕರ್ ಹೇಳಿಕೆಯ ಪ್ರಕಾರ ಹೆಚ್ಚುವರಿ ರೂ 10,200 ತೆತ್ತರೆ ಅನುಮತಿ ನೀಡುವುದಾಗಿ ವಿಮಾನದ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ. ಅಂತಿಮವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಮಧ್ಯಸ್ಥಿಕೆ ನಂತರವೇ ಆಕೆ ದೆಹಲಿಯಲ್ಲಿ ವಿಮಾನ ಹತ್ತಿ ಮಧ್ಯಪ್ರದೇಶದ ಭೋಪಾಲ್​ಗೆ ಬರಲು ಸಾಧ್ಯವಾಗಿದ್ದು.

ಅದೇ ದಿನ ತಮ್ಮ ಟ್ವಿಟ್ಟರ್ ಹ್ಯಾಂಡಲ್​ ಮೂಲಕ ಭಾಕರ್ ತಾವು ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಭವಿಸಿದ ಯಾತನೆಯನ್ನು ಹೇಳಿಕೊಂಡು ಆಗಿನ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ.

‘ತರಬೇತಿಗಾಗಿ ನಾನು ಭೋಪಾಲ್​ಗೆ ಹೋಗುತ್ತಿರುವುದರಿಂದ ನನ್ನ ಆಯುಧ ಮತ್ತು ಮದ್ದುಗುಂಡುಗಳನ್ನು ಕ್ಯಾರಿ ಮಾಡುವುದು ಅವಶ್ಯಕವಾಗಿದೆ. ಇಲ್ಲಿರುವ ಅಧಿಕಾರಿಗಳು ಜನರಿಗೆ ಗೌರವದಿಂದ ಮಾತಾಡಲಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ಪ್ರತಿಬಾರಿ ಅವರಿಂದ ಕ್ರೀಡಾಪಟುಗಳಿಗೆ ಅವಮಾನ ಆಗುತ್ತಿದೆ. ನನ್ನಲ್ಲಿ ಪರ್ಮಿಟ್ ಇದೆ, ನನಗೆ ಹಣ ಕೇಳುವಂತಿಲ್ಲ,’ ಎಂದು ಟ್ವೀಟ್​ ಮಾಡಿರುವ ಭಾಕರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಪುರಿ , ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಅವರು, ‘ಸಂಬಂಧಪಟ್ಟ ಎಲ್ಲ ದಾಖಲೆ ಮತ್ತು ಡಿಜಿಸಿಎ ಪರ್ಮಿಟ್​ ಹೊಂದಿದಾಗ್ಯೂ ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಎಐ 437 ವಿಮಾನವನ್ನು ಹತ್ತದಂತೆ ನನ್ನನ್ನು ತಡೆದು ರೂ.10,200 ಕೊಡುವಂತೆ ಒತ್ತಾಯಿಸಲಾಯಿತು. ಅದಕ್ಕೂ ಮಿಗಿಲಾಗಿ ಏರ್ ಇಂಡಿಯಾ ಉಸ್ತುವಾರಿ ಡಿಜಿಸಿಎಯನ್ನು ಮಾನ್ಯ ಮಾಡಲಿಲ್ಲ. ನಾನು ಇವರಿಗೆ ಲಂಚ ಕೊಡಬೇಕೇ?’ ಅಂಥ ಟ್ವೀಟ್ ಮಾಡಿ ಅದೇ ಗಣ್ಯರನ್ನು ಟ್ಯಾಗ್ ಮಾಡಿದ್ದಾರೆ.

ಆರ್ ಇಂಡಿಯಾ ಅಧಿಕಾರಿ ಮನೋಜ್ ಗುಪ್ತಾ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ತಮ್ಮನ್ನು ಒಬ್ಬ ಕ್ರಿಮಿನಲ್ ಥರ ನಡೆಸಿಕೊಂಡರು. ಜನರರೊಂದಿಗೆ ಹೇಗೆ ವರ್ತಿಸಬೇಕೆಂಬ ತರಬೇತಿ ಅವರಿಗೆ ನೀಡುವ ಅವಶ್ಯಕತೆಯಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈ ಆಂಶವನ್ನು ಶೀಘ್ರದಲೇ ಅರ್ಥ ಮಾಡಿಕೊಳ್ಳಲಿದೆ ಎಂದು ಹೇಳಿರುವ ಭಾಕರ್ ತಾನು ಕಿರುಕುಳಕ್ಕೊಳಗಾದೆ ಅಂತ ಹೇಳಿದ್ದಾರೆ.

ಅಂತಿಮವಾಗಿ ಭಾಕರ್ ಅವರು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಖಾತೆಯ ಸಚಿವ ಕಿರಣ್ ರಿಜಿಜು ಅವರ ಮಧ್ಯಸ್ಥಿಕೆಯ ನಂತರವೇ ಭೋಪಾಲ್​ಗೆ ಹೊರಡುವ ವಿಮಾವನ್ನು ಹತ್ತುವುದು ಸಾಧ್ಯವಾಯಿತು. ಸಚಿವರ ಸಹಾಯಕ್ಕೆ ಭಾಕರ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ ಸಚಿವರು, ‘ನೀವು ನಮ್ಮ ದೇಶದ ಹೆಮ್ಮೆಯಾಗಿದ್ದೀರಿ,’ ಎಂದು ಟ್ವೀಟ್ ಮಾಡಿದ್ದಾರೆ.

ನಂತರ ಏರ್ ಇಂಡಿಯಾ ಸಂಸ್ಥೆಗೆ ಫೋನಾಯಿಸಿರುವ ಭಾಕರ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಮನೋಜ್ ಗುಪ್ತಾ ಮತ್ತು ಭದ್ರತಾ ಮುಖ್ಯಸ್ಥನಾಗಿರುವ ವ್ಯಕ್ತಿಗಳಂಥವರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಅವರು ತನ್ನ ಮೊಬೈಲ್ ಫೋನನ್ನು ಕಿತ್ತುಕೊಂಡು ತನ್ನ ತಾಯಿ ಅಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾಗೆ ಸೆರೆ ಹಿಡಿದಿದ್ದ ದೃಶ್ಯವನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿದರು ಎಂದು ದೂರಿದ್ದಾರೆ.

ಇದನ್ನೂ ಓದಿ: Jaffer Controversy: ಉತ್ತರಾಖಂಡ ಕೋಚ್​ ಹುದ್ದೆಗೆ ಜಾಫರ್ ರಾಜೀನಾಮೆ ಸಲ್ಲಿಸಿದ ನಂತರ ಉಂಟಾಗಿರುವ ಸನ್ನಿವೇಶ ಸಭ್ಯರ ಕ್ರೀಡೆಗೆ ಹೊಸದು

 

Published On - 9:11 pm, Sat, 20 February 21