All England Championship: ಸೆಮಿಫೈನಲ್‌ನಲ್ಲಿ ಅಮೋಘ ಜಯ; ಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಲಕ್ಷ್ಯ ಸೇನ್‌!

| Updated By: ಪೃಥ್ವಿಶಂಕರ

Updated on: Mar 19, 2022 | 9:33 PM

All England Championship: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಜಯ ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

All England Championship: ಸೆಮಿಫೈನಲ್‌ನಲ್ಲಿ ಅಮೋಘ ಜಯ; ಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ ಲಕ್ಷ್ಯ ಸೇನ್‌!
ಲಕ್ಷ್ಯ ಸೇನ್
Follow us on

ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (Lakshya Sen) ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ (All England Championship)ನಲ್ಲಿ ಐತಿಹಾಸಿಕ ಜಯ ದಾಖಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 20ರ ಹರೆಯದ ಭಾರತದ ಯುವ ಷಟ್ಲರ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮೊದಲ ಬಾರಿಗೆ ಮೂರು ಗೇಮ್‌ಗಳ ಹೋರಾಟದಲ್ಲಿ ಹಾಲಿ ಚಾಂಪಿಯನ್ ಮಲೇಷ್ಯಾದ ಲೀ ಜಿ ಜಿಯಾ ಅವರನ್ನು 21-13, 12-21 21-19 ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ 2001 ರಲ್ಲಿ ಪ್ರಶಸ್ತಿ ಗೆದ್ದಿದ್ದ ದಂತಕಥೆ ಪುಲ್ಲೇಲ ಗೋಪಿಚಂದ್ ನಂತರ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಈ ಪಂದ್ಯಾವಳಿಯ ಫೈನಲ್‌ಗೆ ತಲುಪಿದ ಒಟ್ಟಾರೆ ನಾಲ್ಕನೇ ಭಾರತೀಯ ಪುರುಷ ಮತ್ತು ಐದನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಉತ್ತರಾಖಂಡದ ಅಲ್ಮೋರಾದ ಲಕ್ಷ್ಯ ಸೇನ್, ಈ ವರ್ಷ ಅನೇಕ ಅನುಭವಿಗಳನ್ನು ಸೋಲಿಸಿ ಇತಿಹಾಸ ಬರೆದಿದ್ದರು. ಜೊತೆಗೆ ಸೆಮಿಫೈನಲ್‌ನಲ್ಲಿಯೂ ತಮ್ಮ ಪ್ರಬಲ ಪ್ರದರ್ಶನವನ್ನು ಮುಂದುವರೆಸಿದರು. ಪಂದ್ಯಾವಳಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ. 3 ಡೆನ್ಮಾರ್ಕ್‌ನ ಆಂಡರ್ಸ್ ಆಂಟನ್ಸನ್ ಅವರನ್ನು ಸೋಲಿಸಿ, ಲಕ್ಷ್ಯ ಮೊದಲ ಬಾರಿಗೆ ಸೂಪರ್ 1000 ಪಂದ್ಯಾವಳಿಯ ಫೈನಲ್ ತಲುಪಿದರು. ನಂತರ ವಿಶ್ವದ ನಂ. ಆರನೇ ಶ್ರೇಯಾಂಕದ ಲಿ ಜಿಯಾ ಅವರನ್ನು ಜಿದ್ದಾಜಿದ್ದಿನ ಹೋರಾಟದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

ಸಮಬಲದ ಹೋರಾಟ
ಇಬ್ಬರು ಅತ್ಯುತ್ತಮ ಯುವ ಆಟಗಾರರ ನಡುವಿನ ಈ ಸ್ಪರ್ಧೆಯಲ್ಲಿ, ಪ್ರಚಂಡ ಹೋರಾಟ ನಡೆಯಿತು. ಪಂದ್ಯದ ಎಲ್ಲಾ ಮೂರು ಗೇಮ್​​ಗಳು ತೀವ್ರ ಪೈಪೋಟಿಯನ್ನು ಕಂಡವು. ಇದರ ಹೊರತಾಗಿಯೂ ಮೊದಲ ಮತ್ತು ಎರಡನೇ ಗೇಮ್‌ನಲ್ಲಿ ಇಬ್ಬರೂ ಆಟಗಾರರು ಏಕಪಕ್ಷೀಯ ಜಯ ದಾಖಲಿಸಿದರು. ಲಕ್ಷ್ಯ ಮೊದಲ ಗೇಮ್‌ನಲ್ಲಿ 11-7 ಮುನ್ನಡೆ ಸಾಧಿಸಿದರು. ಮಧ್ಯಂತರದ ನಂತರವೂ ತಮ್ಮ ಆಕ್ರಮಣಕಾರಿ ಶೈಲಿಯನ್ನು ಮುಂದುವರೆಸಿದರು, 21-13 ಅಂತರದಲ್ಲಿ ಗೆಲುವು ದಾಖಲಿಸಿದರು.

ಆರಂಭದಿಂದಲೇ ಎರಡನೇ ಗೇಮ್​ನಲ್ಲಿ ಹಾಲಿ ಚಾಂಪಿಯನ್ ಜಿ ಗುರಿ ಮುಟ್ಟಿ ಪ್ರಾಬಲ್ಯ ಮೆರೆದರು. ಜಿ ಅವರ ಪ್ರತಿ ದಾಳಿಗೆ ಲಕ್ಷ್ಯ ಉತ್ತಮವಾಗಿ ಪ್ರತಿಕ್ರಿಯಿಸಿದರು, ಆದರೆ 23 ವರ್ಷದ ಮಲೇಷಿಯಾದ ಆಟಗಾರನು ವಿರಾಮದ ವೇಳೆಗೆ 11-4 ಮುನ್ನಡೆ ಸಾಧಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಮುನ್ನಡೆ 16-6 ಆಯಿತು. ಇಲ್ಲಿ ಲಕ್ಷ್ಯ ಪುನರಾಗಮನ ಮಾಡಿದರು ಮತ್ತು 16-10 ಅಂತರದಲ್ಲಿ ವ್ಯತ್ಯಾ ಮಾಡಿದರು. ಆದರೆ, ಇಲ್ಲಿಂದ ಜಿ ಯಾವುದೇ ಅವಕಾಶ ನೀಡದೆ 22 ನಿಮಿಷದಲ್ಲಿ ಗೇಮ್ ಗೆದ್ದುಕೊಂಡರು.

ಮೂರನೇ ಗೇಮ್‌ನಲ್ಲಿ ಉಭಯ ಆಟಗಾರರ ಘರ್ಷಣೆ ಉತ್ತುಂಗಕ್ಕೇರಿತು. ಮತ್ತೆ, ಸುದೀರ್ಘ ಆಟದ ಜೊತೆಗೆ, ಅದ್ಭುತ ಡ್ರಾಪ್ ಶಾಟ್‌ಗಳು ನೆಟ್‌ಗಳ ಬಳಿ ಕಂಡುಬಂದವು. ವಿರಾಮದ ವೇಳೆಗೆ 11-9 ಜಿ ಮುನ್ನಡೆ ಸಾಧಿಸಿದರು. ಈ ಪಂದ್ಯದಲ್ಲಿ ಜಿ ಪರ 14-10 ಅಂತರದ ದೊಡ್ಡ ವ್ಯತ್ಯಾಸ ಮಾಡಿದರೂ ಭಾರತದ ಆಟಗಾರ ಛಲ ಬಿಡಲಿಲ್ಲ. ತಮ್ಮ ಹೋರಾಟದ ಆಟದಿಂದ ವಿಕ್ಟರ್ ಅಕ್ಸೆಲ್ಸೆನ್ ಮತ್ತು ಲೋಹ್ ಕೀನ್ ಯೂ ಅವರನ್ನು ಸೋಲಿಸಿದ ಲಕ್ಷ್ಯ ಅವರು ಪುನರಾಗಮನ ಮಾಡಿ ಅಂತಿಮವಾಗಿ 21–19 ಗೇಮ್‌ನೊಂದಿಗೆ ಪಂದ್ಯವನ್ನು ಗೆದ್ದರು.

ಪ್ರಕಾಶ್ ಪಡುಕೋಣೆ ದಾಖಲೆ ಪುನರಾವರ್ತನೆಗೆ ಅವಕಾಶ
ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಐದನೇ ಭಾರತೀಯ ಆಟಗಾರ ಲಕ್ಷ್ಯ. ಇದಕ್ಕೂ ಮೊದಲು ಪುರುಷರ ಸಿಂಗಲ್ಸ್‌ನಲ್ಲಿ ಪ್ರಕಾಶ್ ನಾಥ್ (1947), ಪ್ರಕಾಶ್ ಪಡುಕೋಣೆ (1980, 1981) ಮತ್ತು ಪುಲ್ಲೇಲ ಗೋಪಿಚಂದ್ (2001) ಫೈನಲ್‌ಗೆ ಪ್ರವೇಶಿಸಿದರು. ಅದೇ ಸಮಯದಲ್ಲಿ, ಮಹಿಳಾ ಸಿಂಗಲ್ಸ್‌ನಲ್ಲಿ, ಅನುಭವಿ ತಾರೆ ಸೈನಾ ನೆಹ್ವಾಲ್ (2015) ಮಾತ್ರ ಫೈನಲ್‌ವರೆಗೆ ಪ್ರಯಾಣಿಸಿದ್ದರು. ಈ ಪೈಕಿ 1980ರಲ್ಲಿ ಪಡುಕೋಣೆ ಹಾಗೂ 2001ರಲ್ಲಿ ಗೋಪಿಚಂದ್‌ ಪ್ರಶಸ್ತಿ ಗೆದ್ದುಕೊಂಡಿದ್ದರು. ಪ್ರಕಾಶ್‌ ಪಡುಕೋಣೆ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಲಕ್ಷ್ಯ ಅವರಿಗೆ ಈಗ ತಮ್ಮ ಗುರುವಿನ ಯಶಸ್ಸನ್ನು ಪುನರಾವರ್ತಿಸುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ:IPL 2022: ಆಟಗಾರರು ಈ ಕೆಲಸ ಮಾಡಿದರೆ ಪಂಜಾಬ್ ಕಿಂಗ್ಸ್ ಚಾಂಪಿಯನ್ ಆಗಲಿದೆ; ನಾಯಕ ಮಯಾಂಕ್

Published On - 9:00 pm, Sat, 19 March 22