ತಲೆಯಿಂದ ರಕ್ತ ಸುರಿಯುತ್ತಿದ್ದರೂ ಆಟ ಮುಂದುವರೆಸಿ ಗೆದ್ದ ಕುಸ್ತಿಪಟು ಬಜರಂಗ್ ಪುನಿಯಾ..! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Sep 17, 2022 | 8:24 PM

Bajrang Punia: ತಲೆಗಾದ ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಅಖಾಡಕ್ಕಿಳಿದ ಬಜರಂಗ್ ವಾಲ್ಡೆಸ್ ಅವರನ್ನು 5-4 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದರು.

ತಲೆಯಿಂದ ರಕ್ತ ಸುರಿಯುತ್ತಿದ್ದರೂ ಆಟ ಮುಂದುವರೆಸಿ ಗೆದ್ದ ಕುಸ್ತಿಪಟು ಬಜರಂಗ್ ಪುನಿಯಾ..! ವಿಡಿಯೋ ನೋಡಿ
Bajrang Punia
Follow us on

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವಕುಸ್ತಿ ಚಾಂಪಿಯನ್‌ಶಿಪ್ 2022 (World Wrestling Championship 2022)ರಲ್ಲಿ ಭಾರತೀಯ ಕುಸ್ತಿಪಟುಗಳು (Indian wrestlers) ಹೆಚ್ಚಿನ ಯಶಸ್ಸನ್ನು ಪಡೆದಿಲ್ಲ. ಭಾರತದ ಕುಸ್ತಿಪಟುಗಳು ಎಷ್ಟೇ ಕಠಿಣ ಹೋರಾಟ ನೀಡಿದರೂ ಗೆಲುವು ಸಿಗುತ್ತಿಲ್ಲ. ಇದೆಲ್ಲದರ ನಡುವೆ, ದೇಶದ ಅಗ್ರ ಪುರುಷ ಕುಸ್ತಿಪಟು ಬಜರಂಗ್ ಪುನಿಯಾ (Bajrang Punia) ಮಾತ್ರ ತನ್ನ ಕೆಚ್ಚೆದೆಯ ಆಟದಿಂದ ಇಡೀ ವಿಶ್ವವನ್ನು ನಿಬ್ಬೇರಗಾಗುವಂತೆ ಮಾಡಿದ್ದಾರೆ. ತಲೆಯಿಂದ ರಕ್ತ ಸುರಿಯುತ್ತಿದ್ದರೂ ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ತೋರಿದ ಪರಾಕ್ರಮ ಈಗ ಎಲ್ಲೆಡೆ ಚರ್ಚೆಯಾಗಿತ್ತಿದೆ. ತನ್ನ ಗಾಯವನ್ನು ಲೆಕ್ಕಿಸದ ಬಜರಂಗ್ ಎದುರಾಳಿಯನ್ನು ಮಣ್ಣುಮುಕ್ಕಿಸಿದ ನಂತರವೇ ಅಖಾಡದಿಂದ ಹೊರ ನಡೆದಿದ್ದಾರೆ.

ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಸೆಪ್ಟೆಂಬರ್ 17 ರ ಶನಿವಾರದಂದು ಪುರುಷರ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬಜರಂಗ್ 65 ಕೆಜಿ ತೂಕ ವಿಭಾಗದಲ್ಲಿ ಭಾರತದ ಸವಾಲನ್ನು ಪ್ರಸ್ತುತಪಡಿಸಿದರು. 2018ರಲ್ಲಿ ಇದೇ ವಿಭಾಗದಲ್ಲಿ ಬೆಳ್ಳಿ, 2019ರಲ್ಲಿ ಕಂಚು ಗೆದ್ದಿದ್ದ ಭಜರಂಗ್ ಈ ಬಾರಿ ಪದಕದ ಬಣ್ಣ ಬದಲಿಸಿ ಚಿನ್ನ ತರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.ಅದಕ್ಕೆ ತಕ್ಕಂತೆಯೇ ಬಜರಂಗ್ ಇದೇ ರೀತಿಯ ಆರಂಭವನ್ನು ಮಾಡಿ, ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ವಾಲ್ಡೆಸ್ ಅವರನ್ನು ಸೋಲಿಸಿ ಕ್ವಾರ್ಟರ್-ಫೈನಲ್ ತಲುಪಿದರು.

ತಲೆ ಒಡೆದು ರಕ್ತ ಹರಿದರೂ ಹಿಂಜರಿಯಲಿಲ್ಲ

ಆದರೆ, ಈ ಪಂದ್ಯದ ಮಧ್ಯದಲ್ಲಿ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವ ಶುರುವಾದ ಕಾರಣ ಬಜರಂಗ್‌ಗೆ ಈ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಈ ಅವಘಡದಿಂದ ಪಂದ್ಯವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಬಜರಂಗ್ ಕೂಡ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಪಂದ್ಯದಿಂದ ಹಿಂದೆ ಸರಿಯುವ ಆಯ್ಕೆಯನ್ನು ಹೊಂದಿದ್ದರು. ಆದರೆ ಭಾರತೀಯ ಕುಸ್ತಿಪಟು ತನ್ನ ಪಟ್ಟುಬಿಡದೆ ಆಟವನ್ನು ಮುಂದುವರೆಸಿದರು.

ತಲೆಗಾದ ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡು ಅಖಾಡಕ್ಕಿಳಿದ ಬಜರಂಗ್ ವಾಲ್ಡೆಸ್ ಅವರನ್ನು 5-4 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದರು.

ಕ್ವಾರ್ಟರ್ ಫೈನಲ್‌ನಲ್ಲಿ ಸೋಲು

ಆದಾಗ್ಯೂ, ಗಾಯದ ಪರಿಣಾಮ ಅಂತಿಮವಾಗಿ ಅವರ ಪ್ರದರ್ಶನದ ಮೇಲೆ ಗೋಚರಿಸಿತು. ಇಂಜುರಿ ಸಮಸ್ಯೆಯಿಂದಲೋ ಏನೋ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಬಜರಂಗ್ ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡಲು ಸಾಧ್ಯವಾಗಲಿಲ್ಲ. ಎರಡು ಬಾರಿ ಕೆಡೆಟ್ ವಿಶ್ವ ಚಾಂಪಿಯನ್ ಅಮೆರಿಕದ ಜಾನ್ ಡಯಾಕೊಮಿಹಾಲಿಸ್ ಅವರು 10-0 ಅಂಕಗಳೊಂದಿಗೆ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಸೋಲಿಸಿದರು. ಅಮೆರಿಕದ ಕುಸ್ತಿಪಟು ಫೈನಲ್ ತಲುಪಿದರೆ, ಬಜರಂಗ್ ರಿಪಿಚೇಜ್ ಮೂಲಕ ಕಂಚಿನ ಪದಕ ಪಡೆಯುವ ಅವಕಾಶ ಪಡೆದಿದ್ದಾರೆ.

ಭಾರತೀಯ ಕುಸ್ತಿಪಟುಗಳ ನಿರಾಶಾದಾಯಕ ಪ್ರದರ್ಶನ

ಪ್ರಸ್ತುತ ಚಾಂಪಿಯನ್‌ಶಿಪ್​ನಲ್ಲಿ ಭಾರತೀಯ ಕುಸ್ತಿಪಟುಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಭಾರತದ ದಿಗ್ಗಜ ಕುಸ್ತಿಪಟು, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಕುಸ್ತಿಪಟುಗಳು ಈ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ವಿನೇಶ್ ಫೋಗಟ್ ಮಾತ್ರ ದೇಶಕ್ಕಾಗಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷರಲ್ಲಿ, ಒಲಿಂಪಿಕ್ ಪದಕ ವಿಜೇತರಾದ ರವಿ ದಹಿಯಾ ಮತ್ತು ಬಜರಂಗ್ ಪುನಿಯಾರಿಂದ ಹೆಚ್ಚಿನ ಭರವಸೆ ಇತ್ತು, ಆದರೆ ಇಬ್ಬರಿಗೂ ಯಶಸ್ಸನ್ನು ತರಲು ಸಾಧ್ಯವಾಗಲಿಲ್ಲ.

Published On - 8:24 pm, Sat, 17 September 22