AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಸಿಐ ಮೇಲೆ ವರ್ಣ ತಾರತಮ್ಯ ಆರೋಪ; ಕಾಮೆಂಟ್ರಿಗೆ ಶಿವರಾಮಕೃಷ್ಣನ್ ವಿದಾಯ

BCCI Racial Discrimination Row: ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐನ ಕಾಮೆಂಟರಿ ಪ್ಯಾನಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ 2026 ಆರಂಭಕ್ಕೆ ಮುನ್ನ ಈ ನಿರ್ಧಾರ ಪ್ರಕಟಿಸಿದ್ದು, ತಮ್ಮನ್ನು ವರ್ಣ ತಾರತಮ್ಯದ ಆಧಾರದಲ್ಲಿ ಕಡೆಗಣಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಂದ್ಯ ಪ್ರಸ್ತುತಿ ಮತ್ತು ಟಾಸ್ ವರದಿ ಮಾಡುವ ಅವಕಾಶ ನನಗೆ ನೀಡಲಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ಬಿಸಿಸಿಐ ಮೇಲೆ ವರ್ಣ ತಾರತಮ್ಯ ಆರೋಪ; ಕಾಮೆಂಟ್ರಿಗೆ ಶಿವರಾಮಕೃಷ್ಣನ್ ವಿದಾಯ
Laxman Sivaramakrishnan
ಪೃಥ್ವಿಶಂಕರ
|

Updated on:Mar 20, 2026 | 7:06 PM

Share

2026 ರ ಐಪಿಎಲ್ (IPL 2026) ಆರಂಭಕ್ಕೆ ಸರಿಯಾಗಿ 8 ದಿನಗಳು ಬಾಕಿ ಉಳಿದಿವೆ. ಈ ಲೀಗ್​ಗಾಗಿ ಬಿಸಿಸಿಐ (BCCI) ಕೂಡ ಸರ್ವ ತಯಾರಿ ಮಾಡಿಕೊಂಡಿದೆ. ಆದರೆ ಇದರ ನಡುವೆ ಬಿಸಿಸಿಐ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ ಮೇಲೆ ವರ್ಣ ತಾರತಮ್ಯದಂತಹ ಗಂಭೀರ ಆರೋಪವನ್ನು ಹೊರಿಸಿರುವ ಟೀಂ ಇಂಡಿಯಾದ ಲೆಜೆಂಡರಿ ಆಟಗಾರರೊಬ್ಬರು ಕಾಮೆಂಟರಿ ಪ್ಯಾನಲ್​ಗೆ ನಿವೃತ್ತಿ ಘೋಷಿಸಿದ್ದಾರೆ. 1983 ರಿಂದ 1987 ರ ನಡುವೆ ಟೀಂ ಇಂಡಿಯಾ ಪರ ಆಡಿದ್ದ ತಮಿಳುನಾಡು ಮೂಲದ ಲಕ್ಷ್ಮಣ್ ಶಿವರಾಮಕೃಷ್ಣನ್ (Laxman Sivaramakrishnan) ಇದೀಗ ಬಿಸಿಸಿಐ ವಿರುದ್ಧ ಈ ಗಂಭೀರ ಆರೋಪವನ್ನು ಹೊರಿಸಿದ್ದು, ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಶಿವರಾಮಕೃಷ್ಣನ್ ಆರೋಪದಲ್ಲಿರುವುದೇನು?

ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಬಳಿಕ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬಿಸಿಸಿಐ ವಿರುದ್ಧ ಗಂಭೀರ ಆರೋಪವನ್ನು ಹೊರಿಸಿ ಬರೆದುಕೊಂಡಿರುವ ಶಿವರಾಮಕೃಷ್ಣನ್, ‘ನಾನು ಬಿಸಿಸಿಐನ ಕಾಮೆಂಟರಿ ಪ್ಯಾನಲ್​ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಕಳೆದ 23 ವರ್ಷಗಳ ನನ್ನ ಕಾಮೆಂಟರಿ ವೃತ್ತಿಜೀವನದಲ್ಲಿ ನನ್ನನ್ನು ಎಂದಿಗೂ ಪಂದ್ಯ ಪ್ರಸ್ತುತಿಗಳಿಗೆ ಬಳಸಲಾಗಿಲ್ಲ. ಇನ್ನು ಈ ಕ್ಷೇತ್ರಕ್ಕೆ ನನಗಿಂತ ತಡವಾಗಿ ಬಂದವರಿಗೆ ಮತ್ತು ಯುವ ವೀಕ್ಷಕ ವಿವರಣೆಗಾರರಿಗೆ ಪಿಚ್ ವರದಿ ನೀಡುವುದಕ್ಕೆ ಮತ್ತು ಟಾಸ್ ಮತ್ತು ಪಂದ್ಯ ಪ್ರಸ್ತುತಿ ನಡೆಸಿಕೊಡುವುದಕ್ಕೆ ಅವಕಾಶ ನೀಡಲಾಯಿತು. ಆದರೆ ನನಗೆ ಆ ಅವಕಾಶ ಸಿಗಲಿಲ್ಲ. ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಆಗಿದ್ದಾಗಲೂ ಇದು ನಡೆಯುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.

ಶಿವರಾಮಕೃಷ್ಣನ್ ಅವರ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ಟೀಂ ಇಂಡಿಯಾ ಅಭಿಮಾನಿಗಳು ಮತ್ತು ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ಶಿವರಾಮಕೃಷ್ಣನ್ ಅವರ ಈ ಆರೋಪಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶಿವರಾಮಕೃಷ್ಣನ್ ಅವರ ಪೋಸ್ಟ್​ಗೆ ನೆಟ್ಟಿಗರೊಬ್ಬರು ‘ಬಹುಶಃ ನಿಮ್ಮ ಮೈಬಣ್ಣದ ಕಾರಣದಿಂದಾಗಿ ನಿಮ್ಮನ್ನು ಕಡೆಗಣಿಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶಿವರಾಮಕೃಷ್ಣನ್ ‘ಖಂಡಿತ’ ಎಂದು ಉತ್ತರಿಸಿರುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಶಿವರಾಮಕೃಷ್ಣನ್ ಅವರ ಈ ಕಾಮೆಂಟ್ ಅವರು ಬಿಸಿಸಿಐ ಮೇಲೆ ವರ್ಣ ತಾರತಮ್ಯದ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ತಿರುಗೇಟು ನೀಡಿದ ಆರ್​. ಅಶ್ವಿನ್

ಶಿವರಾಮಕೃಷ್ಣನ್ ಅವರ ನಿವೃತ್ತಿಯ ಪೋಸ್ಟ್​ಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ‘ನೀವು ಐಪಿಎಲ್‌ನಲ್ಲಿಯೂ ಕಾಮೆಂಟ್ ಮಾಡುವುದನ್ನು ಏಕೆ ಬಿಡಬಾರದು?’ ಎಂದು ಕಾಮೆಂಟ್ ಮಾಡಿದ್ದು, ಈ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದ್ದಾರೆ. ವಾಸ್ತವವಾಗಿ ಇವರಿಬ್ಬರ ನಡುವೆ ವೈಮನಸ್ಸು ಬಹಳ ಹಿಂದಿನಿಂದಲೂ ಇದೆ. ಈ ಹಿಂದೆ ಶಿವರಾಮಕೃಷ್ಣನ್, ಆರ್. ಅಶ್ವಿನ್ ಅವರನ್ನು ಕಳಪೆ ಬೌಲರ್ ಎಂದು ಜರಿದಿದ್ದರು. ಮಾತ್ರವಲ್ಲದೆ, ಭಾರತೀಯ ಪಿಚ್‌ಗಳಲ್ಲಿ ಮೂರ್ಖ ಕೂಡ ವಿಕೆಟ್ ಪಡೆಯಬಹುದು ಎಂದಿದ್ದರು. ಹಾಗೆಯೇ ಅಶ್ವಿನ್ 100ನೇ ಟೆಸ್ಟ್ ಪಂದ್ಯವನ್ನು ಆಡಿದಾಗ ನಾನು ಅವರನ್ನು ಅಭಿನಂದಿಸಲು ಸಾಕಷ್ಟು ಬಾರಿ ಫೋನ್ ಮಾಡಿದ್ದೆ. ಆದರೆ ಅಶ್ವಿನ್ ನನ್ನ ಫೋನ್​ಗೆ ಉತ್ತರಿಸುವ ಬದಲು ಕರೆಯನ್ನು ಕಟ್ ಮಾಡಿದ್ದರು ಎಂತಲೂ ಆರೋಪ ಮಾಡಿದ್ದರು.

ಶಿವರಾಮಕೃಷ್ಣನ್ ವೃತ್ತಿಜೀವನ

17 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಲ್. ಶಿವರಾಮಕೃಷ್ಣನ್​ಗೆ ಟೀಂ ಇಂಡಿಯಾ ಪರ ದೀರ್ಘ ಕಾಲ ಆಡಲು ಸಾಧ್ಯವಾಗಲಿಲ್ಲ. ಅವರ ಅಲ್ಪ ವೃತ್ತಿಜೀವನದಲ್ಲಿ ಅವರು ಕೇವಲ ಒಂಬತ್ತು ಟೆಸ್ಟ್ ಪಂದ್ಯಗಳು ಮತ್ತು 16 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಟೆಸ್ಟ್‌ನಲ್ಲಿ 26 ವಿಕೆಟ್ ಕಬಳಿಸಿರುವ ಎಲ್. ಶಿವರಾಮಕೃಷ್ಣನ್ ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ದಾರೆ. ಆದಾಗ್ಯೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 154 ವಿಕೆಟ್‌ಗಳನ್ನು ಕಬಳಿಸಿರುವ ಅವರು ಐದು ಶತಕಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 pm, Fri, 20 March 26

Follow Us