Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​​ಗೆ ಬಿಜೆಪಿ ಶಾಸಕಿ ಆಯ್ಕೆ..!

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2024 | 2:25 PM

Paris Olympics 2024: ಶ್ರೇಯಸಿ ಸಿಂಗ್ 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಬಲ್ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಾಗೆಯೇ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಡಬಲ್ ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​​ಗೆ ಬಿಜೆಪಿ ಶಾಸಕಿ ಆಯ್ಕೆ..!
Shreyasi Singh
Follow us on

Paris Olympics 2024:  ಜುಲೈ 26 ರಿಂದ ಪ್ಯಾರಿಸ್‌ನಲ್ಲಿ ಶುರುವಾಗಲಿರುವ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ (Shreyasi Singh) ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್​ ಶೂಟಿಂಗ್​ನಲ್ಲಿ ಪದಕ ಗೆದ್ದಿದ್ದ ಶ್ರೇಯಸಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಹಿಂದೆ ಒಲಿಂಪಿಕ್ಸ್​ಗೆ ಆಯ್ಕೆ ಮಾಡಲಾದ ಶೂಟರ್​ಗಳ ಪಟ್ಟಿಯಲ್ಲಿ ಶ್ರೇಯಸಿ ಸಿಂಗ್ ಅವರ ಹೆಸರು ಇರಲಿಲ್ಲ. ಅಲ್ಲದೆ ಪಿಸ್ತೂಲ್ ಶೂಟರ್ ವಿಭಾಗದಲ್ಲಿ ಪಾಲಕ್ ಅವರು ಅರ್ಹತೆ ಪಡೆದುಕೊಂಡಿದ್ದರು.

ಮತ್ತೊಂದೆಡೆ ಮನು ಪ್ರಭಾಕರ್ ಏರ್ ಪಿಸ್ತೂಲ್ ಮತ್ತು ಸ್ಪೋರ್ಟ್ಸ್ ಪಿಸ್ತೂಲ್ ಎರಡರಲ್ಲೂ ಅಗ್ರಸ್ಥಾನ ಗಳಿಸಿದ್ದರು. ಎರಡು ವಿಭಾಗಗಳಲ್ಲೂ ಆಯ್ಕೆಯಾಗಿದ್ದ ಮನು ಪ್ರಭಾಕರ್​, ಒಂದೇ ಕೋಟಾದಲ್ಲಿ ಎರಡು ಈವೆಂಟ್‌ಗಳಲ್ಲಿ ಸ್ಪರ್ಧಿಸಬಹುದಾಗಿದೆ. ಹೀಗಾಗಿ ಮನು ಬಳಿಯಿದ್ದ ಒಂದು ಕೋಟಾವನ್ನು ಮಹಿಳಾ ಟ್ರ್ಯಾಪ್ ಶೂಟರ್‌ಗಾಗಿ ಬದಲಿಸಲಾಗಿದೆ.

ಈ ಬದಲಾವಣೆಗಾಗಿ ನ್ಯಾಷನಲ್ ರೈಫಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ( ಎನ್‌ಆರ್‌ಎಐ ) ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ISSF) ಗೆ ಮನವಿ ಸಲ್ಲಿಸಿತ್ತು. ಇದೀಗ ಈ ಮನವಿಯನ್ನು ಪುರಸ್ಕರಿಸಲಾಗಿದ್ದು, ಅದರಂತೆ ಶ್ರೇಯಸಿ ಸಿಂಗ್​ಗೆ ಮಹಿಳಾ ವಿಭಾಗದ ಶೂಟಿಂಗ್​ ಸ್ಪರ್ಧೆಯಲ್ಲಿ ಅವಕಾಶ ಲಭಿಸಿದೆ.

ಯಾರು ಈ ಶ್ರೇಯಸಿ ಸಿಂಗ್?

ಶ್ರೇಯಸಿ ಸಿಂಗ್, ದಿವಂಗತ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಅವರ ಪುತ್ರಿ. ಅಲ್ಲದೆ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ. ಇದೀಗ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಮೂಲಕ ಬಿಹಾರದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದು ನನ್ನ ತಂದೆಯ ದೊಡ್ಡ ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ. ಒಲಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ. ಜುಲೈ 30 ಮತ್ತು 31 ರಂದು ನಡೆಯಲಿರುವ ಸ್ಪರ್ಧೆಯಲ್ಲಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆಲ್ಲುವಂತೆ ಪ್ರಾರ್ಥಿಸಲು ಜಮುಯಿ ಜನತೆಗೆ ಶ್ರೇಯಸಿ ಸಿಂಗ್ ಮನವಿ ಮಾಡಿದ್ದಾರೆ.

ಪದಕ ವಿಜೇತೆ ಶ್ರೇಯಸಿ:

ಶ್ರೇಯಸಿ ಸಿಂಗ್ 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಬಲ್ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಾಗೆಯೇ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಡಬಲ್ ಟ್ರ್ಯಾಪ್ ಟೀಮ್ ಈವೆಂಟ್‌ನಲ್ಲಿ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: Mitchell Starc: ಸ್ಟಾರ್ಕ್​ ಸ್ಪಾರ್ಕ್​: ಹೊಸ ವಿಶ್ವ ದಾಖಲೆ ಸೃಷ್ಟಿ

ಇನ್ನು 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ದೇಶಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೇಶಕ್ಕೆ ಮತ್ತು ಬಿಹಾರಕ್ಕೆ ಕೀರ್ತಿ ತಂದಿದ್ದರು. ಇದೀಗ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರುವ ಶ್ರೇಯಸಿ ಸಿಂಗ್ ಟ್ರ್ಯಾಪ್ ಶೂಟಿಂಗ್​ನಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸುವ ವಿಶ್ವಾಸದಲ್ಲಿದ್ದಾರೆ.

 

Published On - 12:58 pm, Sat, 22 June 24