ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

Cristiano Ronaldo: 6 ವಿಶ್ವಕಪ್‌ಗಳ ಸುದೀರ್ಘ ಹೋರಾಟ, ಎರಡು ದಶಕಗಳ ಕಾಲ ಜಗತ್ತನ್ನೇ ಆಳಿದ ಫುಟ್‌ಬಾಲ್ ಚಕ್ರವರ್ತಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವ ಚಾಂಪಿಯನ್ ಕನಸು ಒಂದು ಅಪೂರ್ಣ ಕಾವ್ಯವಾಗಿಯೇ ಉಳಿದಿರಬಹುದು. ಕ್ರಾಫ್ಟ್ಸ್ ರೋಡ್‌ನ ಆ ಪುಟ್ಟ ಬಾಲಕ ಜಗತ್ತಿನ ಮಹಾನ್ ಲೆಜೆಂಡ್ ಆಗಿ ಬೆಳೆದು ನಿಂತ ಕಥೆ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಏಕೆಂದರೆ ತಂದೆಯ ಅರ್ಧಕ್ಕೇ ನಿಂತ ಆ ವಿಶ್ವಕಪ್ ಕನಸನ್ನು ನನಸು ಮಾಡಲು ಮತ್ತೊಬ್ಬ ಕ್ರಿಸ್ಟಿಯಾನೊ ರೊನಾಲ್ಡೊ ಸಜ್ಜಾಗುತ್ತಿದ್ದಾನೆ!

ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!
Cristiano Jr
Image Credit source: x.com

Updated on: Jul 07, 2026 | 12:09 PM

6 ವಿಶ್ವಕಪ್, 2 ದಶಕಗಳ ಸಾಮ್ರಾಜ್ಯ, 1 ಅಪೂರ್ಣ ಕನಸು… ಹೌದು, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬಹುದೊಡ್ಡ ಕನಸು ಕನಸಾಗಿಯೇ ಉಳಿದಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸುವ ಕನಸಿನೊಂದಿಗೆ ಕಣಕ್ಕಿಳಿದಿದ್ದ ರೊನಾಲ್ಡೊ ಇದೀಗ ಆಘಾತಕಾರಿ ಸೋಲಿನೊಂದಿಗೆ ವರ್ಲ್ಡ್​ಕಪ್​ಗೆ ವಿದಾಯ ಹೇಳಿದ್ದಾರೆ.  ಆದರೆ, ಕ್ರಾಫ್ಟ್ಸ್ ರೋಡ್‌ನಿಂದ ಆರಂಭವಾದ ರೊನಾಲ್ಡೊ ಎಂಬ ಮಹಾ ಸಾಮ್ರಾಜ್ಯ ಇಲ್ಲಿಗೇ ಮುಗಿಯುವುದಿಲ್ಲ ಎಂಬುದೇ ಸತ್ಯ. ಏಕೆಂದರೆ ತಂದೆಯ ಕನಸು ಈಡೇರಿಸಲು ಮತ್ತೊಬ್ಬ ಕ್ರಿಸ್ಟಿಯಾನೊ ರೆಡಿಯಾಗುತ್ತಿದ್ದಾರೆ.

ಎಸ್, ಅದುವೇ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್. ತಂದೆಯ ಹಾದಿಯಲ್ಲೇ ಸಾಗಿರುವ ಕ್ರಿಸ್ಟಿಯಾನೊ ಜೂನಿಯರ್ ಈಗಾಗಲೇ ಫುಟ್‌ಬಾಲ್ ಅಂಗಳದಲ್ಲಿ ತನ್ನ ಅದ್ಭುತ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ತಂದೆ ಮ್ಯಾಂಚೆಸ್ಟರ್ ಯುನೈಟೆಡ್, ಯುವೆಂಟಸ್ ಮತ್ತು ರಿಯಲ್ ಮ್ಯಾಡ್ರಿಡ್ ಕ್ಲಬ್‌ಗಳ ಪರ ಆಡುವಾಗ ಆಯಾ ಕ್ಲಬ್‌ಗಳ ಯೂತ್ ಅಕಾಡೆಮಿಗಳಲ್ಲಿ ತರಬೇತಿ ಪಡೆದು ಗೋಲುಗಳ ಸುರಿಮಳೆಗೈದಿದ್ದ ಕ್ರಿಸ್ಟಿಯಾನೊ ಜೂನಿಯರ್, ಸದ್ಯ ಅಲ್-ನಾಸ್ರ್ ಅಂಡರ್-17 ತಂಡದ ಪ್ರಮುಖ ಆಟಗಾರ.

ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಪೋರ್ಚುಗಲ್‌ನ ಅಂಡರ್-16 ರಾಷ್ಟ್ರೀಯ ತಂಡಕ್ಕೂ ಆಯ್ಕೆಯಾಗುವ ಮೂಲಕ ತಂದೆಯ ಭವ್ಯ ಪರಂಪರೆಯನ್ನು ಮುಂದುವರಿಸುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಂದೆಯಂತೆಯೇ ಜೆರ್ಸಿ ನಂಬರ್ 7 ಧರಿಸಿ, ಅದೇ ವೇಗ, ಅದೇ ಫ್ರೀ-ಕಿಕ್ ಶೈಲಿ ಮತ್ತು ಅದೇ ಭೋರ್ಗರೆಯುವ ‘Siuuu’ ಸೆಲೆಬ್ರೇಷನ್ ಮೂಲಕ ಅಭಿಮಾನಿಗಳಿಗೆ ಕಿಚ್ಚು ಹಚ್ಚಿದ್ದಾರೆ.

ತಂದೆ-ಮಗನ ಜಂಟಿ ಕನಸು!

2030ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಮಾಂಚಕ ಪಂದ್ಯಾವಳಿಯಾಗಲಿದೆ. ಏಕೆಂದರೆ ಇದರ ಜಂಟಿ ಆತಿಥ್ಯವನ್ನು ಪೋರ್ಚುಗಲ್, ಸ್ಪೇನ್ ಮತ್ತು ಮೊರಾಕೊ ವಹಿಸಿಕೊಂಡಿವೆ. ಈ ವಿಶ್ವಕಪ್ ರೊನಾಲ್ಡೊ ಕುಟುಂಬಕ್ಕೆ ಒಂದು ಭಾವುಕ ಮತ್ತು ಐತಿಹಾಸಿಕ ವೇದಿಕೆಯಾಗಲಿದೆ.

  • ಮ್ಯಾನೇಜರ್ ರೂಪದಲ್ಲಿ ರೊನಾಲ್ಡೊ: 2030ರ ವೇಳೆಗೆ ರೊನಾಲ್ಡೊಗೆ 45 ವರ್ಷ ತುಂಬಿರುತ್ತದೆ. ಅವರು ಪೋರ್ಚುಗಲ್ ರಾಷ್ಟ್ರೀಯ ತಂಡದ ಹೆಡ್ ಕೋಚ್ ಅಥವಾ ಡೈರೆಕ್ಟರ್ ಆಗಿ ಮೈದಾನದ ಬದಿಯಲ್ಲಿ ನಿಲ್ಲುವ ಸಾಧ್ಯತೆಗಳು ದಟ್ಟವಾಗಿವೆ.
  • ಮೈದಾನದಲ್ಲಿ ಜೂನಿಯರ್: ಆ ಸಮಯದಲ್ಲಿ 20 ವರ್ಷದ ಯಂಗ್ ಬ್ಲಡ್ ಕ್ರಿಸ್ಟಿಯಾನೊ ಜೂನಿಯರ್, ಪೋರ್ಚುಗಲ್ ತಂಡದ ಪ್ರಮುಖ ಸ್ಟ್ರೈಕರ್ ಆಗಿ ಮುಂಚೂಣಿಯಲ್ಲಿ ನಿಲ್ಲುವ ಸಾಧ್ಯತೆಯಿದೆ.

ಏಕೆಂದರೆ ಕ್ರಿಸ್ಟಿಯಾನೊ ಜೂನಿಯರ್ ಈಗಾಗಲೇ ಗೋಲುಗಳ ಸುರಿಮಳೆ ಸುರಿಸುತ್ತಿದ್ದಾರೆ. 16ನೇ ವಯಸ್ಸಿನಲ್ಲೇ 100 ಕ್ಕೂ ಹೆಚ್ಚು ಗೋಲು ಬಾರಿಸಿ ಸಂಚಲನವನ್ನೂ ಸೃಷ್ಟಿಸಿದ್ದಾರೆ.

  • ಯುವೆಂಟಸ್ ಅಕಾಡೆಮಿ (ಇಟಲಿ): ಯುವೆಂಟಸ್ ಯೂತ್ ತಂಡದಲ್ಲಿದ್ದಾಗ 28 ಪಂದ್ಯಗಳಲ್ಲಿ ಕ್ರಿಸ್ಟಿಯಾನೊ ಜೂನಿಯರ್ 58 ಗೋಲುಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ 18 ಅಸಿಸ್ಟ್‌ಗಳನ್ನು ಸಹ ಮಾಡಿದ್ದರು. ಅಲ್ಲದೆ ಮಡೈರಾದಲ್ಲಿ ನಡೆದ ಟೂರ್ನಿಯೊಂದರಲ್ಲಿ ಕೇವಲ 8 ಪಂದ್ಯಗಳಿಂದ 25 ಗೋಲುಗಳನ್ನು ಬಾರಿಸಿ ಎಲ್ಲರನ್ನು ಚಕಿತಗೊಳಿಸಿದ್ದರು.
  • ಅಲ್-ನಾಸ್ರ್ ಅಕಾಡೆಮಿ (ಸೌದಿ ಅರೇಬಿಯಾ): ಸದ್ಯ ಅಲ್-ನಾಸ್ರ್ ಯೂತ್ ತಂಡಗಳ (U17) ಪರ ಆಡುತ್ತಿರುವ ಜೂನಿಯರ್ ರೊನಾಲ್ಡೊ, ಲಭ್ಯವಿರುವ ವರದಿಗಳ ಪ್ರಕಾರ 36 ಪಂದ್ಯಗಳಲ್ಲಿ 62ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ಅಲ್-ಇತ್ತಿಹಾದ್ ವಿರುದ್ಧದ ಪಂದ್ಯವೊಂದರಲ್ಲೇ ಅವರು ಬರೋಬ್ಬರಿ 5 ಗೋಲುಗಳನ್ನು ಬಾರಿಸಿ ಸುದ್ದಿಯಾಗಿದ್ದರು.
  • ಪೋರ್ಚುಗಲ್ ಪರ ಮಿಂಚಿಂಗ್: ಪೋರ್ಚುಗಲ್‌ನ ಅಂಡರ್-15 ಮತ್ತು ಅಂಡರ್-16 ಯೂತ್ ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ ಕ್ರಿಸ್ಟಿಯಾನೊ ಜೂನಿಯರ್, ಇದುವರೆಗೆ ಆಡಿರುವ 13  ಪಂದ್ಯಗಳಿಂದ 5 ಗೋಲುಗಳನ್ನು ಗಳಿಸಿದ್ದಾರೆ. 2025ರ ವ್ಲಾಟ್ಕೊ ಮಾರ್ಕೊವಿಚ್ ಅಂತರರಾಷ್ಟ್ರೀಯ ಟೂರ್ನಿಯ ಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧ 2 ನಿರ್ಣಾಯಕ ಗೋಲುಗಳನ್ನು ಹೊಡೆದು ಪೋರ್ಚುಗಲ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು.

ಈ ಪ್ರದರ್ಶನಗಳನ್ನು ಗಮನಿಸಿದರೆ ಕ್ರಿಸ್ಟಿಯಾನೊ ಜೂನಿಯರ್ 2030 ರವರೆಗೆ ಪೋರ್ಚುಗಲ್ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಈಡೇರಲಿದೆಯೇ ರೊನಾಲ್ಡೊ ಕನಸು?

“ಅಪ್ಪಾ, ಇನ್ನೂ ಕೆಲವು ವರ್ಷ ಆಟ ನಿಲ್ಲಿಸಬೇಡ… ನಾನು ನಿನ್ನ ಜೊತೆ ಮೈದಾನ ಹಂಚಿಕೊಳ್ಳಬೇಕು ಅಂತ ನನ್ನ ಮಗ ಕೇಳುತ್ತಿರುತ್ತಾನೆ. ಆದರೆ ಅದು ಕಷ್ಟ ಅನಿಸಿದರೂ, ನಾನು ನಿಲ್ಲಿಸಿದ ಜಾಗದಿಂದ ಅವನು ಮುಂದುವರಿಯುತ್ತಾನೆ” ಎಂದು ಈ ಹಿಂದೊಮ್ಮೆ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದರು.

ಈ ಮಾತುಗಳು ಕೇವಲ ಒಬ್ಬ ತಂದೆಯ ಹೆಮ್ಮೆಯಷ್ಟೇ ಅಲ್ಲ, ಫುಟ್‌ಬಾಲ್ ಸಾಮ್ರಾಜ್ಯದ ಮುಂದಿನ ಭವಿಷ್ಯದ ಮುನ್ನುಡಿಯಾಗಿತ್ತು. ವಯಸ್ಸು 41 ದಾಟಿದರೂ ರೊನಾಲ್ಡೊ ಮೈದಾನದಲ್ಲಿ ತೋರುತ್ತಿರುವ ಅದಮ್ಯ ಚೇತನಕ್ಕೆ ಮಗನ ಈ ಆಸೆಯೇ ಬಹುದೊಡ್ಡ ಇಂಧನ. ತಂದೆ-ಮಗ ಒಂದೇ ಜೆರ್ಸಿಯಲ್ಲಿ, ಒಂದೇ ಮೈದಾನದಲ್ಲಿ ಒಟ್ಟಿಗೆ ಕಣಕ್ಕಿಳಿಯುವ ಆ ಅಪರೂಪದ ಕ್ಷಣಕ್ಕಾಗಿ ಇಡೀ ಕ್ರೀಡಾಲೋಕವೇ ಕಾತರದಿಂದ ಕಾಯುತ್ತಿದೆ.

ಅದಕ್ಕೊಂದು ವೇದಿಕೆ ಒದಗಿಸಲು ಈಗಾಗಲೇ ಅಲ್​-ನಾಸ್ರ್ ಕ್ಲಬ್ ರೆಡಿಯಾಗಿದೆ. ತಂದೆ-ಮಗನ ಈ ಅಪರೂಪದ ಜುಗಲ್ಬಂದಿಯನ್ನು ಕಣ್ತುಂಬಿಕೊಳ್ಳಲು ಸೌದಿ ಅರೇಬಿಯಾದ ಈ ದೈತ್ಯ ಕ್ಲಬ್ ಈಗಾಗಲೇ ತೆರೆಮರೆಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.

ಸೀನಿಯರ್ ರೊನಾಲ್ಡೊ ಅಲ್-ನಾಸ್ರ್ ಹಿರಿಯರ ತಂಡದ ನಾಯಕನಾಗಿದ್ದರೆ, ಜೂನಿಯರ್ ರೊನಾಲ್ಡೊ ಅಕಾಡೆಮಿ ಮಟ್ಟದಲ್ಲಿ ಅಬ್ಬರಿಸುತ್ತಿದ್ದಾರೆ. ರೊನಾಲ್ಡೊ ಅವರ ನಿವೃತ್ತಿಗೂ ಮುನ್ನವೇ ಜೂನಿಯರ್‌ನನ್ನು ಹಿರಿಯರ ತಂಡಕ್ಕೆ ಪ್ರಮೋಟ್ ಮಾಡಿ, ಇಬ್ಬರನ್ನೂ ಒಟ್ಟಿಗೆ ಅಧಿಕೃತ ಪಂದ್ಯವೊಂದರಲ್ಲಿ ಮೈದಾನಕ್ಕಿಳಿಸುವುದು ಕ್ಲಬ್‌ನ ಬಹುದೊಡ್ಡ ಗುರಿಯಾಗಿದೆ.

ಇದು ಕೇವಲ ಒಂದು ಪಂದ್ಯವಾಗದೆ, ಫುಟ್‌ಬಾಲ್ ಇತಿಹಾಸದ ಅತ್ಯಂತ ಅಪರೂಪದ ಮತ್ತು ಭಾವುಕ ಕ್ಷಣವಾಗಿ ದಾಖಲಾಗಲಿದೆ. ಅಲ್-ನಾಸ್ರ್ ಒದಗಿಸಲಿರುವ ಈ ಐತಿಹಾಸಿಕ ವೇದಿಕೆಯಲ್ಲಿ ಸೀನಿಯರ್ ರೊನಾಲ್ಡೊ ತನ್ನ ರಾಜದಂಡವನ್ನು ಜೂನಿಯರ್ ಕೈಗೆ ಹಸ್ತಾಂತರಿಸುವ ದಿನಗಳು ದೂರವಿಲ್ಲ!

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಹಾಗಾಗಿ, ಕ್ರಿಸ್ಟಿಯಾನೊ ಜೂನಿಯರ್ ತಂದೆಯ ಅಪೂರ್ಣ ಕನಸನ್ನು ಮುಂದುವರೆಸುವುದು ಖಚಿತ ಎನ್ನಬಹುದು. ಈ ಕನಸಿನೊಂದಿಗೆ 2030ರ ಫಿಫಾ ವಿಶ್ವಕಪ್​ ಕನಸನ್ನು ಈಡೇರಿಸಿಕೊಡಲಿದ್ದಾರಾ?. ತಂದೆ ಆರು ವಿಶ್ವಕಪ್ ಆಡಿದರೂ ಮುಟ್ಟಲಾಗದ ಆ ಸುವರ್ಣ ಟ್ರೋಫಿಯನ್ನು, ಮಗ ತನ್ನ 20ನೇ ವಯಸ್ಸಿನಲ್ಲಿ ಪೋರ್ಚುಗಲ್ ದೇಶದ ಮಣ್ಣಿನಲ್ಲೇ ಎತ್ತಿ ಹಿಡಿಯಲಿದ್ದಾರಾ? ಈ ಮೂಲಕ ತಂದೆಯ ಬಹುದೊಡ್ಡ ಕನಸನ್ನು ಈಡೇರಿಸಲಿದ್ದಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.

Follow Us