ಉತ್ತರಾಖಂಡ್ ಕ್ರಿಕೆಟ್ ಟೀಮಿನ ಕೋಚ್ ಸ್ಥಾನಕ್ಕೆ ಭಾರತದ ಮಾಜಿ ಆರಂಭ ಆಟಗಾರ ವಾಸಿಮ್ ಜಾಫರ್ ರಾಜೀನಾಮೆ ಸಲ್ಲಿಸಿ ಹೊರಬಂದಿರುವುದು ಕ್ರಿಕೆಟ್ ವಲಯಗಳಲ್ಲಿ ಎಂದೂ ಕೇಳರಿಯದ ಕೆಟ್ಟ ಸನ್ನಿವೇಶವನ್ನು ಸೃಷ್ಟಿಸಿದೆ. ಅನರ್ಹ ಮತ್ತು ಉತ್ತರಾಖಂಡ ತಂಡದಲ್ಲಿ ಸ್ಥಾನ ಗಿಟ್ಟಿಸಲು ಅಯೋಗ್ಯರಾಗಿರುವ ಆಟಗಾರರನ್ನು ಅಯ್ಕೆ ಸಮಿತಿ ಸದಸ್ಯರು ಮತ್ತು ಉತ್ತರಾಖಂಡ್ ಕ್ರಿಕೆಟ್ ಸಂಸ್ಥೆಯ (ಸಿಎಯು) ಕೆಲ ಪದಾಧಿಕಾರಿಗಳು ರಾಜ್ಯ ತಂಡಕ್ಕೆ ಸೇರಿಸಿದ್ದರಿಂದ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಜಾಫರ್ ಹೇಳಿದ್ದಾರೆ. ಆದರೆ, ಸಂಸ್ಥೆಯ ಕಾರ್ಯದರ್ಶಿಯಾಗಿರುವ ಮಾಹಿಮ್ ವರ್ಮ, ಮುಸ್ಲಿಂ ಆಟಗಾರರಿಗೆ ಪ್ರಾಧಾನ್ಯತೆ ನೀಡುವ ಮೂಲಕ ಜಾಫರ್ ಡ್ರೆಸಿಂಗ್ ರೂಮಿನ ವಾತಾವರಣವನ್ನು ಕೆಡಿಸಿಬಿಟ್ಟಿದ್ದರು ಎಂದು ಆರೋಪಿಸಿದ್ದಾರೆ.
ವರ್ಮ ಅವರ ಆಪಾದನೆಗೆ ನಿನ್ನೆ (ಬುಧವಾರ) ಸಾಯಂಕಾಲ ವರ್ಚ್ಯುಯಲ್ ಸುದ್ದಿಗೋಷ್ಟಿಯೊಂದರಲ್ಲಿ ಉತ್ತರಿಸಿರುವ ಜಾಫರ್, ಅವರು ಮಾಡಿರುವ ಆರೋಪ ಮನಸ್ಸಿಗೆ ತೀವ್ರ ಘಾಸಿಯನ್ನುಂಟು ಮಾಡಿದೆ ಎಂದಿದ್ದಾರೆ.
‘ಇದಕ್ಕಿಂತ ಕೀಳುಮಟ್ಟವನ್ನು ಯಾರೂ ಮುಟ್ಟಲಾಗದು, ನಾನು ಮತೀಯ ಎಂದು ಹೇಳಿ ಪ್ರಕರಣಕ್ಕೆ ಕೋಮುವಾದದ ಲೇಪ ನೀಡಿರುವುದು ದುಖಃಕರ ಮತ್ತು ಆಘಾತಕಾರಿ,’ ಅಂತ ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಜಾಫರ್ ವಿಷಾದದಿಂದ ಹೇಳಿದರು.
ಇದಕ್ಕೆ ಮೊದಲು ಮಾಧ್ಯಮವೊಂದರ ಜೊತೆ ಮಾತಾಡಿದ ವರ್ಮ, ಮೌಲ್ವಿಯೊಬ್ಬರನ್ನು ಜಾಫರ್ ಮೈದಾನಕ್ಕೆ ಕರೆಸಿದ್ದರು ಮತ್ತು ಆಟಗಾರರು ಜಪಿಸುತ್ತಿದ್ದ ಹನಮಾನ್ ಮಂತ್ರವನ್ನು ಬದಲಿಸಿದರು ಅಂತ ಉತ್ತರಾಖಂಡದ ಆಟಗಾರರು ತಮಗೆ ದೂರಿದ್ದರು ಅಂತ ಹೇಳಿದ್ದ್ದಾರೆ.
‘ಮಂಗಳವಾರದಂದು ಕೆಲ ಆಟಗಾರರು ನನ್ನಲ್ಲಿಗೆ ಬಂದು ಜಾಫರ್ ಬಗ್ಗೆ ಹೇಳಿದ್ದು ಕೇಳಿ ನಿಜಕ್ಕೂ ಆಘಾತವಾಯಿತು. ಜಾಫರ್ ಮುಸ್ಲಿಂ ಆಟಗಾರರಿಗೆ ಆದ್ಯತೆ ನೀಡಿ ಟೀಮಿನ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅವರು ನನಗೆ ತಿಳಿಸಿದರು. ಆಟಗಾರರು ರಾಮ್ ಭಕ್ತ್ ಕಿ ಹನುಮಾನ್ ಕಿ ಜೈ ಅಂತ ಹೇಳುವುದನ್ನು ಜಾಫರ್ ತಡೆದು ಬೇರೆ ಏನನ್ನೋ ಪಠಿಸುವಂತೆ ಪ್ರಚೋದಿಸಿದರಂತೆ. ಹಾಗೆಯೇ, ಆಟಗಾರರು ಡೆಹ್ರಾಡೂನ್ನಲ್ಲಿ ಬಯೊ-ಬಬಲ್ನಲ್ಲಿದ್ದುಕೊಂಡು ಆಭ್ಯಾಸ ಮಾಡುತ್ತಿದ್ದಾಗ ಒಬ್ಬ ಮೌಲ್ವಿಯನ್ನು ಅಲ್ಲಿಗೆ ಕರೆಸಿ ನಮಾಜ್ ಮಾಡಸಿದರಂತೆ. ಅದ್ಹೇಗೆ ಅವರು ಒಬ್ಬ ಮೌಲ್ವಿಯನ್ನು ಜೈವಿಕ ಸುರಕ್ಷಾ ಕವಚದೊಳಗೆ ಆಹ್ವಾನಿಸುತ್ತಾರೆ ಎನ್ನುವುದು ನನಗರ್ಥವಾಗುತ್ತಿಲ್ಲ. ಈ ವಿಷಯವನ್ನು ನನಗೆ ಮೊದಲೇ ಹೇಳಿದ್ದರೆ ಜಾಫರ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೆ ಅಂತ ನಾನು ಆಟಗಾರರಿಗೆ ಹೇಳಿದೆ,’ ಎಂದು ವರ್ಮ ಹೇಳಿದ್ದಾರೆ.
ವರ್ಮ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಜಾಫರ್, ‘ಒಬ್ಬ ಮೌಲ್ವಿಯನ್ನು ಮೈದಾನಕ್ಕೆ ಕರೆಸಿ ನಮಾಜ್ ಮಾಡಿಸಿದೆನೆಂದು ಅವರು ಹೇಳಿದ್ದಾರೆ. ಎಲ್ಲಕ್ಕಿಂತ ಮುಂಚೆ ನಾನು ಸ್ಪಷ್ಟಪಡಿಸುವುದೇನೆಂದರೆ, ಮೌಲ್ವಿಯನ್ನು ನಾನು ಕರೆಸಿರಲಿಲ್ಲ. ಆವರನ್ನು ಕರೆಸಿದ್ದು ಇಕ್ಬಾಲ್ ಅಬ್ದುಲ್ಲಾ ಹೆಸರಿನ ಆಟಗಾರ. ಶುಕ್ರವಾರದಂದ ನಮಾಜ್ ಮಾಡಲು ನಮಗೊಬ್ಬ ಮೌಲ್ವಿ ಬೇಕಾಗಿತ್ತು; ಆಗ ಇಕ್ಬಾಲ್ ಮೌಲ್ವಿಯನ್ನು ಕರೆಸಲೇ ಅಂತ ಕೇಳಿದ್ದಕ್ಕೆ ನಾನು ಸರಿ ಅಂತ ಹೇಳಿದೆ. ನಾವು ನಮಾಜ್ ಮಾಡಿದ್ದು ಡ್ರೆಸ್ಸಿಂಗ್ ರೂಮಿನಲ್ಲಿ, ಮೈದಾನದಲ್ಲಿ ಅಲ್ಲ. ಇದು ಒಮ್ಮೆಯಲ್ಲ ಎರಡು-ಮೂರು ಬಾರಿ ಆಗಿದೆ. ಆಗ ಬಯೊ-ಬಬಲ್ ಇನ್ನೂ ಸೃಷ್ಟಿಸಿರಲಿಲ್ಲ,’ ಎಂದಿದ್ದಾರೆ.
‘ಆಟಗಾರರು ಜೈ ಹನುಮಾನ್ ಹೇಳದಂತೆ ನಾನು ತಡೆದೆ ಅಂತ ವರ್ಮ ಅರೋಪಿಸದ್ದಾರೆ. ಅಸಲು ವಿಷಯವೇನೆಂದರೆ, ಆಟಗಾರರು ಯಾವುದೇ ಮಂತ್ರವನ್ನು ಪಠಿಸುತ್ತಿರಲಿಲ್ಲ. ತಂಡದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಕೆಲ ಆಟಗಾರರಿದ್ದಾರೆ. ಅವರು, ‘ರಾಣಿ ಮಾತಾ ಸಾಚೆ ದರ್ಬಾರ್ ಕಿ ಜೈ’ ಎಂದು ಹೇಳುತ್ತಿದ್ದರು. ಒಮ್ಮೆ ನಾನು ಅವರಿಗೆ ‘ಗೋ ಉತ್ತರಾಖಂಡ್,’ ‘ಕಮಾನ್ ಉತ್ತರಾಖಂಡ್’ ಅಂತ ಹೇಳುವುದು ಚೆನ್ನಾಗಿರುತ್ತದೆ ಎಂದು ಹೇಳಿದ್ದೆ. ನಾನು ವಿದರ್ಭದ ಕೋಚ್ ಆಗಿದ್ದಾಗ ಕಮಾನ್ ವಿದರ್ಭ ಅನ್ನೋದು ಟೀಮಿನ ಸ್ಲೋಗನ್ ಆಗಿತ್ತು. ಅಂದಹಾಗೆ ಸ್ಲೋಗನ್ಗಳನ್ನು ಆಯ್ಕೆ ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ನಾನು ಮತೀಯನಾಗಿದ್ದರೆ, ‘ಅಲ್ಲಾಹು ಅಕ್ಬರ್ ಎನ್ನಿ’ ಅಂತ ಆವರಿಗೆ ಹೇಳುತ್ತಿದ್ದೆ. ಮಧ್ಯಾಹ್ನ ನನಗೆ ನಮಾಜ್ಗೆ ಹೋಗಲು ಅನುಕೂಲವಾಗಲೆಂದು ನಾನು ಆಟಗಾರರಿಗೆ ಅಭ್ಯಾಸದ ಸಮಯವನ್ನು ಮುಂಜಾನೆ ಸಮಯಕ್ಕೆ ನಿಗದಿಪಡಿಸುತ್ತಿದ್ದೆ,’ ಎಂದು ಜಾಫರ್ ಹೇಳಿದ್ದಾರೆ.
ಒಂದು ವರ್ಷದ ಅವಧಿಗೆ ಉತ್ತರಾಖಂಡ ಕೋಚ್ ಆಗಿ ಕರಾರೊಂದಕ್ಕೆ ಕಳೆದ ವರ್ಷ ಸಹಿ ಹಾಕಿದ ಜಾಫರ್, ತಾವು ಜವಾಬ್ದಾರಿಯನ್ನು ಕೈಗೆತ್ತಿಕೊಂಡ ನಂತರ ಹೊರಗಿನಿಂದ ಮೂವರು ವೃತ್ತಿಪರ ಆಟಗಾರರನ್ನು- ಜಯ್ ಬಿಸ್ತಾ, ಇಕ್ಬಾಲ್ ಅಬ್ದುಲ್ಲಾ ಮತ್ತು ಸಮದ್ ಫಲ್ಲಾ ಟೀಮಿಗೆ ಕರೆತಂದರು. ಮೊದಲು ಮುಂಬೈ ಪರ ಆಡುತ್ತಿದ್ದ ಇಕ್ಬಾಲ್ ಅವರನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಉತ್ತರಾಖಂಡ್ ಟೀಮಿನ ನಾಯಕನಾಗಿ ಘೋಷಿಸಲಾಗಿತ್ತು.
ಜಾಫರ್ ಟೀಮಿನ ಆಯ್ಕೆ ವಿಷಯದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ವರ್ಮ ಹೇಳಿದ್ದಾರೆ.
‘ಜಾಫರ್ ಅವರ ವರ್ತನೆಯೇ ನನಗೆ ಮತ್ತು ಆಯ್ಕೆ ಸಮಿತಿಗೆ ದೊಡ್ಡ ಸಮಸ್ಯೆಯಾಗಿತ್ತು. ಟೀಮಿನ ಆಯ್ಕೆಯಲ್ಲಿ ಅವರು ಅತಿ ಎನಿಸಿವಷ್ಟು ಮೂಗು ತೂರಿಸುತ್ತಿದ್ದರು. ಅಂಥ ಒಂದು ಸಭೆಯಲ್ಲಿ ಅವರ ನನಗೆ, ‘ನಿಮಗೆ ಕ್ರಿಕೆಟ್ ಬಗ್ಗೆ ಜಾಸ್ತಿ ಜ್ಞಾನವಿಲ್ಲ’ ಅಂತ ಹೇಳಿದ್ದರು. ಅವರಿಗೆ ನಾವು ಮುಕ್ತ ಹಸ್ತವನ್ನು ಕಲ್ಪಿಸಿದ್ದೆವು, ಅದರೆ ಅವರು ಇಡೀ ಸಂಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶವಿಟ್ಟುಕೊಂಡಿದ್ದರು. ಇದು ನಮಗೆ ಅಂಗೀಕೃತವಾಗಿರಲಿಲ್ಲ,’ ಎಂದು ವರ್ಮ ಹೇಳಿದರು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 20,000 ಕ್ಕಿಂತ ಹೆಚ್ಚು ರನ್ ಗಳಿಸಿರುವ ಜಾಫರ್, ಉತ್ತರಾಖಂಡ ಆಟಗಾರರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
‘ಅವರಲ್ಲಿ ಸಾಕಷ್ಟು ಪ್ರತಿಭೆಯಿದೆ ಮತ್ತು ನನ್ನಿಂದ ಅವರು ಮತ್ತಷ್ಟನ್ನು ಕಲಿಯಬಹುದಿತ್ತು, ಆದರೆ ಅವರನ್ನು ಅಂಥ ಅವಕಾಶದಿಂದ ವಂಚಿಸಲಾಗಿದೆ. ಆಯ್ಕೆ ಸಮಿತಿ ಸದಸ್ಯರು ಮತ್ತು ಸಂಸ್ಥೆಯ ಕಾರ್ಯದರ್ಶಿಯ ಪಕ್ಷಪಾತ ಧೋರಣೆ ಮತ್ತು ಅನಾವಶ್ಯಕ ಹಸ್ತಕ್ಷೇಪದಿಂದ ಪ್ರತಿಭಾವಂತರು ಮೂಲೆಗುಂಪಾಗಿ ಅಯೋಗ್ಯರು ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ,’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಜಾಫರ್ ಬರೆದಿದ್ದಾರೆ.
‘ನಾನು ಮತೀಯನಾಗಿದ್ದರೆ, ತಂಡದ ಆಯ್ಕೆಯಲ್ಲಿ ಮೂಗು ತೋರಿಸುತ್ತಿದ್ದರೆ ಅವರ ನನ್ನನ್ನು ಆಗಲೇ ವಜಾ ಮಾಡಬಹುದಿತ್ತಲ್ಲ? ನಾನು ರಾಜೀನಾಮೆ ನೀಡಿದ ನಂತರ ಯಾಕೆ ಇಂಥದ್ದನ್ನೆಲ್ಲ ಮಾತಾಡುತ್ತಿದ್ದಾರೆ. ನಾನಾಗಿಯೇ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ,’ ಎಂದು ಸುದ್ದಿಗೋಷ್ಟಿಯಲ್ಲಿ ಜಾಫರ್ ಹೇಳಿದರು.
ಏತನ್ಮಧ್ಯೆ, ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ಜಾಫರ್ಗೆ ಬೆಂಬಲ ವ್ಯಕ್ತಪಡಿಸಿ, ‘ಜಾಫರ್ ನಾನು ನಿಮ್ಮೊಂದಿಗಿದ್ದೇನೆ. ನೀವು ಮಾಡಿದ್ದು ಸರಿಯಾಗಿದೆ. ದುರದೃಷ್ಟವಶಾತ್ ಆಟಗಾರರು ನಿಮ್ಮ ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ,’ ಅಂತ ಹೇಳಿದ್ದಾರೆ.
With you Wasim. Did the right thing. Unfortunately it’s the players who’ll miss your mentor ship.
— Anil Kumble (@anilkumble1074) February 11, 2021
Published On - 8:30 pm, Thu, 11 February 21