ಮಿಂಚಿದ ಚಹಲ್ ಮತ್ತು ನಟರಾಜನ್, ಈ ಶುಭಾರಂಭವನ್ನು ಭಾರತ ಕಾಯ್ದುಕೊಳ್ಳಬೇಕಿದೆ!

|

Updated on: Dec 04, 2020 | 7:46 PM

ಭಾರತದ ಬೌಲರ್​ಗಳು ಮೊದಲ ಟಿ20ಐ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಟೀಮಿನ ಪ್ರಮುಖ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ವಿಫಲರಾಗಿದ್ದು ಕಳವಳಕಾರಿ ವಿಷಯವಾಗಿದೆ. ಮುಂದಿನ ಪಂದ್ಯದಲ್ಲಾದರೂ ಅವರಿಂದ ಉತ್ತಮ ಪ್ರದರ್ಶನ ಬರಲಿದೆಯೆಂಬ ನಿರೀಕ್ಷೆಯನ್ನು ಭಾರತೀಯರು ಇಟ್ಟುಕೊಂಡಿದ್ದಾರೆ.

ಮಿಂಚಿದ ಚಹಲ್ ಮತ್ತು ನಟರಾಜನ್, ಈ ಶುಭಾರಂಭವನ್ನು ಭಾರತ ಕಾಯ್ದುಕೊಳ್ಳಬೇಕಿದೆ!
Follow us on

ಟಿ ನಟರಾಜನ್

ಟಿ20 ಕ್ರಿಕೆಟ್​ನಲ್ಲಿ ಭಾರತ ವಿಶ್ವದ ಅಗ್ರಮಾನ್ಯ ಟೀಮಿಗಳಲ್ಲೊಂದು, ಅದನ್ನು ಸೋಲಿಸುವುದು ಸುಲಭವಲ್ಲ ಅಂತ ಕ್ರಿಕೆಟ್ ಪರಿಣಿತರು, ಹೇಳಿದ ಮಾತು ಸತ್ಯವಾಗಿದೆ. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು 1-2 ಅಂತರದಿಂದ ಸೋತ ಭಾರತ ಟಿ20ಐ ಕ್ರಿಕೆಟ್​ ಪಂದ್ಯಗಳ ಸರಣಿಯಲ್ಲಿ ತಜ್ಞರು ಹೇಳಿದ ಮಾತನ್ನು ಭಾರತ ಸಾಬೀತು ಮಾಡಿದೆ. ಕ್ಯಾನ್ ಬೆರಾದ ಮನೌಕ ಓವಲ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿಗರು ಅತಿಥೇಯರನ್ನು 11 ರನ್​ಗಳಿಂದ ಸೋಲಿಸಿ ಅತ್ಯಂತ ಕಿರು ಆವೃತ್ತಿ ಪಂದ್ಯಗಳ ಸರಣಿಯನ್ನು ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

ಗೆಲ್ಲಲು 163 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ ಮಾತ್ರ ಸ್ಕೋರ್ ಮಾಡಿತು. ಭಾರತದ ಪರ ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಕನ್ಕಶನ್ ಸಬ್​ಸ್ಟಿಟ್ಯೂಟ್ ಆಗಿ ಆಡಲು ಬಂದ ಯುಜ್ವೇಂದ್ರ ಚಹಲ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ತಮ್ಮ 4 ಓವರ್​ಗಳಲ್ಲಿ ಅವರು ಕೇವಲ 25 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಅವರಷ್ಟೇ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮತ್ತು ಇದೇ ಮೊದಲ ಬಾರಿಗೆ ಟಿ20ಐ ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಟಿ ನಟರಾಜನ್ 30 ರನ್ ನೀಡಿ 3 ವಿಕೆಟ್ ಪಡೆದರು.

ಓದುಗರಿಗೆ ಗೊತ್ತಿರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕನ್ಕಶನ್ ಸಬ್​ಸ್ಟಿಟ್ಯೂಟ್ ಅಥವಾ ಕನ್ಕಶನ್ ರಿಪ್ಲೇಸ್ಮೆಂಟ್ಸ್ (concussion replacements) ನಿಯಮವನ್ನು ಆಗಸ್ಟ್ 1, 2019ರಿಂದ ಜಾರಿಗೆ ತಂದಿತು. ತಂಡದ ಯಾವುದೇ ಒಬ್ಬ ಆಟಗಾರ ಆಟ ನಡೆಯುವ ಸಂದರ್ಭದಲ್ಲಿ ಗಾಯಗೊಂಡು ಪುನಃ ಮೈದಾನಕ್ಕೆ ಬಾರದಂಥ ಪರಿಸ್ಥಿತಿ ಎದುರಾದರೆ, ಅವನ ಬದಲಿಗೆ, ಅವನಂತಿರುವ ಅಂದರೆ ಬ್ಯಾಟ್ಸ್​ಮನ್​ ಅಗಿದ್ದಲ್ಲಿ ಬ್ಯಾಟ್ಸ್​ಮನ್, ಬೌಲರ್​ ಆಗಿದ್ದರೆ ಬೌಲರ್, ಇಲ್ಲವೇ ಆಲ್​ರೌಂಡರ್ ಆಗಿದ್ದರೆ ಆಲ್​ರೌಂಡರ್-ಹೀಗೆ ಬದಲೀ ಆಟಗಾರ ಫೀಲ್ಡಿಗೆ ಬಂದು ಗಾಯಗೊಂಡಿರುವ ಆಟಗಾರನ ಪಾತ್ರವನ್ನು ನಿರ್ವಹಿಸಬಹುದು. ಈ ನಿಯಮದನ್ವಯ, ಕನ್ಕಶನ್ ಬದಲೀ ಆಟಗಾರನ ಪಾತ್ರ ನಿರ್ವಹಿದ ಮೊಟ್ಟಮೊದಲ ಆಟಗಾರನೆಂದರೆ, ಮಾರ್ನಸ್ ಲಬುಶೇನ್

ಕೆಎಲ್ ರಾಹುಲ್

ಕಳೆದ ವರ್ಷ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವೆ ಲಾರ್ಡ್ಸ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಅವರು ಜೊಫ್ರಾ ಆರ್ಚರ್ ಬೌಲಿಂಗ್​ನಲ್ಲಿ ತಲೆಗೆ ಪೆಟ್ಟು ತಿಂದು ಪೆವಿಲಿಯನ್​ಗೆ ಮರಳಿದಾಗ ಆವರ ಸ್ಥಾನದಲ್ಲಿ ಅಂದರೆ ಅವರ ಬದಲೀ ಆಟಗಾರನಾಗಿ ಬ್ಯಾಟ್ ಮಾಡಲು ಹೋದ ಲಬುಶೇನ್ 92ರನ್ ಬಾರಿಸಿದ್ದರು.

ರವೀಂದ್ರ ಜಡೇಜಾ

ಓಕೆ, ಇವತ್ತಿನ ಪಂದ್ಯಕ್ಕೆ ವಾಪಸ್ಸು ಬರುವ. ಭಾರತ ಪಂದ್ಯ ಗೆದ್ದಿದ್ದು ನಿಜ ಆದರೆ, ಅದರ ಪ್ರಮುಖ ಬ್ಯಾಟ್ಸ್​ಮನ್​ಗಳು ವಿಫಲರಾದರು. ನಾಯಕ ಕೊಹ್ಲಿ, ಶಿಖರ್ ಧವನ್, ಮನೀಶ್ ಪಾಂಡೆ ಮೊದಲಾದವರೆಲ್ಲ ಟೀಮಿಗೆ ದೊಡ್ಡ ಕಾಂಟ್ರಿಬ್ಯೂಷನ್ ನೀಡಲಿಲ್ಲ. ಭಾರತಕ್ಕೆ ಆಸರೆಯಾಗಿದ್ದು ಆರಂಭ ಆಟಗಾರ ಕೆ ಎಲ್ ರಾಹುಲ್ ಮತ್ತು ಆಲ್​ರೌಂಡರ್ ಜಡೇಜ. 1 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ ಭರವಸೆ ಮೂಡಿಸಿದ್ದ ಸಂಜು ಸ್ಯಾಮ್ಸನ್ 23 ರನ್ ಗಳಿಸಿ ಔಟಾದರು. ಜಡೇಜ ಮತ್ತು ಸುಂದರ್ 38ರನ್​ಗಳ ಜೊತೆಗಾರಿಕೆ ಅಂತಿಮವಾಗಿ ಬಹಳ ಉಪಯುಕ್ತವೆನಿಸಿತು. ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ (5X4 1X6) ಬಾರಿಸಿದ ಜಡೇಜ ತಮ್ಮ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಮತ್ತೊಂದು ಸ್ಟೇಟ್​ಮೆಂಟ್​ ನೀಡಿದರು.

ಬುಧವಾರದಂದು ಒಂದು ದಿನದ ಪಂದ್ಯಳಿಗೆ ಮತ್ತು ಇಂದು ಟಿ20ಐ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ನಟರಾಜನ್ ಟೀಮ್ ಇಂಡಿಯಾಗೆ ಭರವಸೆಯ ಬೌಲರ್ ಆಗಿ ದೊರಕಿದ್ದಾರೆಂದರೆ ಅತಿಶಯೋಕ್ತಿ ಎನಿಸದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚೆಚ್ಚು ಪಂದ್ಯಗಳನ್ನು ಆಡುವ ಅವಕಾಶ ದೊರೆತರೆ ಮುಂಬರುವ ದಿನಗಳಲ್ಲಿ ಅವರ ಬೌಲಿಂಗ್ ಮತ್ತಷ್ಟು ಉತ್ತಮಗೊಳ್ಳಲಿದೆ.

ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಅವರ ಅಲಭ್ಯತೆ ಕಾಡಲಾರಂಭಿಸಿದೆ. ಆವರ ಸ್ಥಾನದಲ್ಲಿ ಆಡಿದ ಡಿ ಆರ್ಕಿ ಶಾರ್ಟ್ 34 ರನ್ ಗಳಿಸಿದರಾದರೂ ವಾರ್ನರ್ ಅವರಂತೆ ಅಧಿಕಾರಯುತ ಆಟವಾಡಲಿಲ್ಲ. ಫಿಂಚ್ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಹೆನ್ರಿಕೆ ಕೂಡ ಉಪಯುಕ್ತ 30ರನ್ ಗಳಿಸಿದರು. ಅವರ ಬೌಲಿಂಗ್​ನಲ್ಲೂ ಮಿಂಚಿ 3 ವಿಕೆಟ್​ ಪಡೆದಿದ್ದು ಟೀಮ್ ಮ್ಯಾನೇಜ್ಮೆಂಟ್ ಖುಷಿ ನೀಡಿರುತ್ತದೆ.
ಮೊದಲ ಪಂದ್ಯ ಗೆದ್ದಾಗಿದೆ, ಈ ಮುಮೆಂಟಮನ್ನು ಭಾರತೀಯರು ಕಾಯ್ದುಕೊಳ್ಳಬೇಕಿದೆ.