ನ್ಯೂಜಿಲೆಂಡ್ನಲ್ಲಿ 10 ಪಾಕ್ ಆಟಗಾರರು ಕೊವಿಡ್-19 ಪಾಸಿಟಿವ್, ತನಿಖೆ ಶುರುಮಾಡಿದ ಪಿಸಿಬಿ
ತನ್ನ ಹಲವಾರು ಆಟಗಾರರು ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರೂ, ಅವರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿದೆ. ಹಾಗೆ ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂಬ ಟೀಕೆಗಳು ಕೇಳಿಬಂದ ನಂತರ ಪಿಸಿಬಿ ತನಿಖೆಯನ್ನು ಶುರಮಾಡಿದೆ.
ಕೊವಿಡ್-19 ನಂಥ ಭಯಾನಕ ಸಾಂಕ್ರಾಮಿಕ ರೋಗವನ್ನು ಅಸಡ್ಡೆ ಮಾಡಿ ತನ್ನ ಹಲವಾರು ಆಟಗಾರರು, ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರೂ ನ್ಯೂಜಿಲೆಂಡ್ ಪ್ರವಾಸಕ್ಕೆ ಕಳಿಸಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವ್ಯಾಪಕ ಟೀಕೆಗೆ ಗುರಿಯಾಗಿದೆ. ನ್ಯೂಜಿಲೆಂಡ್ನಲ್ಲಿ ಲ್ಯಾಂಡ್ ಆಗಿರುವ ಪಾಕಿಸ್ತಾನದ ಆಟಗಾರರ ಪೈಕಿ 10 ಜನ ಸೋಂಕಿನಿಂದ ಬಳಲುತ್ತಿರುವುದು ದೃಢಪಟ್ಟಿದೆ. ಈ ಬೆಳವಣಿಗೆಯ ನಂತರ ಪಿಸಿಬಿ ತನಿಖೆ ಶರುವಿಟ್ಟುಕೊಂಡರೆ ಕ್ರೈಸ್ಟ್ಚರ್ಚ್ನ ಸ್ಥಳೀಯ ಅಧಿಕಾರಿಗಳು ಇಡೀ ಪಾಕಿಸ್ತಾನದ ಟೀಮನ್ನು ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.
ಪಿಸಿಬಿಯ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುವ ಕೈದ್-ಎ-ಆಜಮ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಒಂದು ನಿರ್ದಿಷ್ಟ ಪ್ರಾಂತ್ಯಕ್ಕೆ ಸೇರಿದ ಎರಡು ಟೀಮಿಗಳ ಕೆಲವು ಆಟಗಾರರು ನ್ಯೂಜಿಲೆಂಡ್ಗೆ ತೆರಳುವ ಮೊದಲು ಜ್ವರ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಅವರು ವೈರಲ್ ಸೋಂಕಿನಿಂದ ನರಳುತ್ತಿದ್ದಿದ್ದು ಗೊತ್ತಾಗಿತ್ತು. ಲಾಹೋರ್ನಲ್ಲಿ ಅವರನ್ನು ಕೊವಿಡ್-19 ಟೆಸ್ಟ್ಗೆ ಒಳಪಡಿಸಿದಾಗ ರಿಸಲ್ಟ್ ನೆಗೆಟಿವ್ ಬಂದಿತ್ತು. ಆದರೆ ಕ್ರೈಸ್ಟ್ಚರ್ಚ್ನಲ್ಲಿ ಅದೇ ಆಟಗಾರರ ಕೊರೊನಾ ಟೆಸ್ಟ್ಗಳ ಫಲಿತಾಂಶಗಳು ಪಾಸಿಟಿವ್ ಬಂದಿವೆ. ಅವರ ಕೊರೊನಾ ರಿಸಲ್ಟ್ಗಳು ದೊರೆತ ನಂತರವೇ ಪೂರ್ತಿ ಪಾಕಿಸ್ತಾನದ ಟೀಮನ್ನು ಒಂದ ಪ್ರತ್ಯೇಕವಾದ ಸ್ಥಳದಲ್ಲಿ ಕ್ವಾರೈಂಟೈನ್ ಮಾಡಲಾಗಿದೆಯೆಂದು ಮೂಲಗಳು ತಿಳಿಸಿವೆ.
ಇಲ್ಲಿ ಗಮನಿಸಬೇಕಿರುವ ಸಂಗತಿಯೇನೆಂದರೆ, ಆ ನಿರ್ದಿಷ್ಟ ಪ್ರಾಂತ್ಯದ ಎರಡು ತಂಡಗಳ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ನಲ್ಲೂ ಆಡಿದ್ದರು ಮತ್ತು ಅವರೆಲ್ಲ ಪಿಎಸ್ಎಲ್ನಲ್ಲಿ ಒಂದು ನಿರ್ದಿಷ್ಟವಾದ ಫ್ರಾಂಚೈಸಿಯ ಪರ ಆಡಿದ್ದರು! ಒಬ್ಬ ವಿದೇಶೀ ಮೂಲದ ಆಟಗಾರ ಸಹ ಇದೇ ಫ್ರಾಂಚೈಸಿಗೆ ಆಡಿದ್ದ ಮತ್ತು ಸ್ವದೇಶಕ್ಕೆ ಹಿಂತಿರುಗಿದ ನಂತರ ಅವನ ಕೊವಿಡ್-19 ಟೆಸ್ಟ್ ಮಾಡಿದಾಗ ಅದು ಪಾಸಿಟಿವ್ ಬಂದಿದೆ.
ಪಾಕಿಸ್ತಾನ ಟೀಮಿಗೆ ಆಯ್ಕೆಯಾಗದ ವೇಗದ ಬೌಲರ್ ಸೊಹೇಲ್ ತನ್ವೀರ್ ಸಹ ಪಿಎಸ್ಎಲ್ನಲ್ಲಿ ಆಡಿದ್ದರು. ಆಮೇಲೆ ಅವರು ಲಂಕಾ ಪ್ರಿಮೀಯರ್ ಲೀಗ್ನಲ್ಲಿ ಕ್ಯಾಂಡಿ ಪರ ಆಡಲು ಕೊಲೊಂಬೊ ತಲುಪಿದಾಗ ಅಲ್ಲಿ ನಡೆದ ಕೊವಿಡ್-19 ಪರೀಕ್ಷಣೆಯಲ್ಲಿ ಅವರ ರಿಸಲ್ಟ್ ಪಾಸಿಟಿವ್ ಬಂದಿದೆ. ಸೊಹೇಲ್ರನ್ನು ಆಡಿಸುವುದು ಅಪಾಯಕ್ಕೆ ಮೂಲ ಎಂದರಿತ ಕ್ಯಾಂಡಿ ಫ್ರಾಂಚೈಸಿ ಮತ್ತು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿತು.
ಪಾಕಿಸ್ತಾನದ ಕ್ರಿಕೆಟ್ ಆಟಗಾರರು, ಅಲ್ಲಿನ ಮಂಡಳಿ ಮತ್ತು ಜನ ಅಂತರರಾಷ್ಟ್ರೀಯ ಕ್ರಿಕೆಟ್ಗಾಗಿ ತವಕಿಸುತ್ತಿದ್ದಾರೆ. ಕ್ರಿಕೆಟಿಂಗ್ ದೇಶಗಳು ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನು ನಿಲ್ಲಿಸಿಬಿಟ್ಟಿವೆ. ಪಾಕಿಸ್ತಾನದ ಸ್ವದೇಶದ ಸರಣಿಗಳನ್ನು ಅಬು ಧಾಬಿ, ದುಬೈ ಮತ್ತು ಶಾರ್ಜಾದಲ್ಲಿ ಆಯೋಜಿಸಲಾಗುತ್ತಿದೆ. ಪಾಕಿಸ್ತಾನದ ಜನರಲ್ಲಿ ಲೈವ್ ಅಂತರರಾಷ್ಟ್ರೀಯ ಕ್ರಿಕೆಟ್ಗಾಗಿ ಇರುವ ತಹತಹಿಕೆ ಅರ್ಥಮಾಡಿಕೊಳ್ಳುವಂಥದ್ದು, ಅದನ್ನು ಅಂಗೀಕರಿಸಬಹುದು. ಹಾಗಂತ, ಕೊರೊನಾ ಪಾಸಿಟಿವ್ ಇರುವ ಅಥವಾ ಸೋಂಕಿನ ಲಕ್ಷಣಗಳನ್ನು ತೋರಿರುವ ಆಟಗಾರರನ್ನು ಬೇರೆ ದೇಶದ ಪ್ರವಾಸಕ್ಕೆ ಕಳಿಸಿರುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ.
ಪಿಸಿಬಿ ತನ್ನ ಸೀನಿಯರ್ ಟೀಮು ಮತ್ತು ಎ ಟೀಮಿನ 35 ಆಟಗಾರರು ಮತ್ತು 18 ಅಧಿಕಾರಿ ವರ್ಗದ ಸದಸ್ಯರನ್ನೊಳಗೊಂಡ ಒಂದು ದೊಡ್ಡ ದಂಡನ್ನೇ ನ್ಯೂಜಿಲೆಂಡ್ಗೆ ಕಳಿಸಿದೆ. ಸೀನಿಯರ್ ಟೀಮಿನ ಆರಂಭ ಆಟಗಾರ ಫಕರ್ ಜಮಾನ್ ಟೀಮ್ ಪ್ರವಾಸಕ್ಕೆ ತೆರಳುವ ಮುನ್ನ ಕೊವಿಡ್-19ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿದ್ದರಿಂದ ಅವರನ್ನು ಪಾಕಿಸ್ತಾನದಲ್ಲೇ ಉಳಿಸಿಕೊಳ್ಳಲಾಯಿತು. ಆದರೆ ಎರಡನೇ ಬಾರಿ ನಡೆದ ಪರೀಕ್ಷಣೆಯಲ್ಲಿ ರಿಪೋರ್ಟ್ ನೆಗೆಟಿವ್ ಬಂತು. ಅವರನ್ನು ನ್ಯೂಜಿಲೆಂಡ್ಗೆ ಕಳಿಸಬೇಕೋ ಅಥವಾ ಇಲ್ಲವೋ ಅಂತ ಪಿಸಿಬಿ ಇನ್ನೂ ನಿರ್ಧರಿಸಿಲ್ಲ.