Chess World Cup 2023 Final: ಮೊದಲ ಗೇಮ್​ ಡ್ರಾನಲ್ಲಿ ಅಂತ್ಯ: ನಾಳೆ ಪಂದ್ಯ ಮುಂದುವರಿಕೆ

| Updated By: ಝಾಹಿರ್ ಯೂಸುಫ್

Updated on: Aug 22, 2023 | 11:00 PM

Chess World Cup 2023 Final: ಚೆಸ್ ವಿಶ್ವಕಪ್​ನ ಫೈನಲ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ  ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2000 ಮತ್ತು 2002 ರಲ್ಲಿ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು.

Chess World Cup 2023 Final: ಮೊದಲ ಗೇಮ್​ ಡ್ರಾನಲ್ಲಿ ಅಂತ್ಯ: ನಾಳೆ ಪಂದ್ಯ ಮುಂದುವರಿಕೆ
Magnus Carlsen - Praggnanandhaa
Follow us on

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನ  ಫೈನಲ್ ಪಂದ್ಯದ ಮೊದಲ ಗೇಮ್​ ಡ್ರಾನಲ್ಲಿ ಅಂತ್ಯಗೊಂಡಿದೆ.​ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಹಾಗೂ ಭಾರತದ ಆರ್​. ಪ್ರಜ್ಞಾನಂದ (R Praggnanandhaa) ನಡುವಣ ಈ ಪಂದ್ಯದ 2ನೇ ಕ್ಲಾಸಿಕ್ ಗೇಮ್​ ನಾಳೆ ನಡೆಯಲಿದ್ದು, ಇದರಲ್ಲಿ ಗೆದ್ದವರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.

ಇನ್ನು  90 ನಿಮಿಷಗಳ ಮೊದಲ ಸುತ್ತಿನಲ್ಲಿ  ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ  ಪ್ರಜ್ಞಾನಂದ ಒತ್ತಡಕ್ಕೆ ಸಿಲುಕಿಸಿದ್ದರು.  ಅತ್ತ ಕಾರ್ಲ್​ಸೆನ್ ಚೆಕ್​ ನೀಡುವತ್ತ ಹೆಚ್ಚಿನ ಗಮನಹರಿಸಿದ್ದರು. ಆದರೆ ಒಂದು ಹಂತ ದಾಟುತ್ತಿದ್ದಂತೆ ಭಾರತೀಯ ಆಟಗಾರನ ಜಾಣ ನಡೆಗಳನ್ನು ಅರಿತ ಬಳಿಕ ರಕ್ಷಾಣತ್ಮಕ ಆಟಕ್ಕೆ ಒತ್ತು ನೀಡಿದರು.

ಈ ಮೂಲಕ ಮೊದಲ ಸುತ್ತಿನ ಅಂತಿಮ ಹಂತದಲ್ಲಿ ಜಾಣ ನಡೆ ಪ್ರದರ್ಶಿಸಿದ ಕಾರ್ಲ್​ಸೆನ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.

ಪಂದ್ಯ ನಾಳೆ ಮುಂದುವರಿಕೆ:

ಈ ಪಂದ್ಯದ  ಎರಡನೇ ಕ್ಲಾಸಿಕಲ್ ಗೇಮ್​ ನಾಳೆ ಮುಂದುವರೆಯಲಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಗಳೊಂದಿಗೆ ಸ್ಪರ್ಧಿಸಿದ್ದ ಪ್ರಜ್ಞಾನಂದ ನಾಳೆ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಮಾಡಲಿದ್ದಾರೆ.

ಫೈನಲ್​ನಲ್ಲಿ 2 ಗೇಮ್ಸ್:

ಚೆಸ್ ವಿಶ್ವಕಪ್ ಫೈನಲ್ ಎರಡು ಕ್ಲಾಸಿಕ್ ಗೇಮ್​ಗಳನ್ನು ಒಳಗೊಂಡಿರುತ್ತದೆ. ಮೊದಲ 40 ಚಲನೆಗಳಿಗೆ ಇಬ್ಬರು ಆಟಗಾರರು 90 ನಿಮಿಷಗಳನ್ನು ಪಡೆಯುತ್ತಾರೆ. ಪ್ರತಿ ಚಲನೆಗೆ 30 ಸೆಕೆಂಡುಗಳ ಹೆಚ್ಚಳದೊಂದಿಗೆ ಉಳಿದ ಆಟಕ್ಕೆ 30 ನಿಮಿಷಗಳನ್ನು ನೀಡಲಾಗುತ್ತದೆ.

ಇನ್ನು ಎರಡು ಕ್ಲಾಸಿಕ್ ಗೇಮ್​ಗಳಲ್ಲೂ ಫಲಿತಾಂಶ ಹೊರಬರದಿದ್ದರೆ, 10-10 ನಿಮಿಷಗಳ ರ್ಯಾಪಿಡ್ ಗೇಮ್​ಗಳನ್ನು ಆಡಲಾಗುತ್ತದೆ. ಇದರಲ್ಲೂ ವಿಜೇತ ಯಾರೆಂದು ನಿರ್ಧಾರವಾಗದಿದ್ದರೆ 5 ನಿಮಿಷಗಳ ಎರಡು ರ್ಯಾಪಿಡ್​ ಗೇಮ್​ಗಳ ಅವಕಾಶ ನೀಡಲಾಗುತ್ತದೆ.

ಇನ್ನು ರ್ಯಾಪಿಡ್​ ಗೇಮ್​ಗಳು ಕೂಡ ಡ್ರಾಗೊಂಡರೆ ಸಡನ್ ಡೆತ್ ಮೋಡ್‌ನಲ್ಲಿ ಒಂದೇ ಬ್ಲಿಟ್ಝ್ ಗೇಮ್​ ಆಡಲಾಗುತ್ತದೆ. ಇದರಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ. ಇದೀಗ ಮೊದಲ ಗೇಮ್​ ಡ್ರಾನಲ್ಲಿ ಅಂತ್ಯಗೊಂಡಿದ್ದು, ಪ್ರಜ್ಞಾನಂದರ ವಿಶ್ವಕಪ್ ಗೆಲ್ಲುವ ಕನಸು ಜೀವಂತವಾಗಿದೆ. ಇನ್ನು ಬುಧವಾರ ನಡೆಯಲಿರುವ 2ನೇ ಗೇಮ್​​ನಲ್ಲೇ ಫಲಿತಾಂಶ ಹೊರಬರಲಿದೆಯಾ ಅಥವಾ ಭರ್ಜರಿ ಪೈಪೋಟಿ ಮುಂದುವರೆಯಲಿದೆಯಾ ಕಾದು ನೋಡಬೇಕಿದೆ.

ಟೈಬ್ರೇಕರ್ ಜಯ:

ಇದಕ್ಕೂ ಮುನ್ನ ವಿಶ್ವದ ನಂಬರ್-3 ಚೆಸ್ ತಾರೆ ಫ್ಯಾಬಿಯಾನೊ ಕರುವಾನಾ ಹಾಗೂ ಪ್ರಜ್ಞಾನಂದ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಿದ್ದರು. ರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲೆರಡು ಗೇಮ್​ಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಹೀಗಾಗಿ ಟೈಬ್ರೇಕರ್​ನಲ್ಲಿ ಪಂದ್ಯವನ್ನು ಮುಂದುವರೆಸಲಾಯಿತು.

ಈ ಹಂತದಲ್ಲಿ ಜಾಣ್ಮೆಯ ನಡೆಗಳೊಂದಿಗೆ  3.5-2.5 ಅಂತರದಿಂದ ಫ್ಯಾಬಿಯಾನೊ ಕರುವಾನಾಗೆ ಸೋಲುಣಿಸಿ  ಪ್ರಜ್ಞಾನಂದ ಫೈನಲ್​ಗೆ ಪ್ರವೇಶಿಸಿದ್ದರು.

ಇದನ್ನೂ ಓದಿ: ಹಣೆಯಲ್ಲಿ ಸದಾ ವಿಭೂತಿ ಧರಿಸಿಕೊಳ್ಳುವ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಯಾರು ಗೊತ್ತೇ?

ಹೊಸ ಇತಿಹಾಸ ನಿರ್ಮಿಸಿದ  ಪ್ರಜ್ಞಾನಂದ:

ಚೆಸ್ ವಿಶ್ವಕಪ್​ನ ಫೈನಲ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ  ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2000 ಮತ್ತು 2002 ರಲ್ಲಿ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಈ ಸಾಧನೆ ಮಾಡಿದ್ದರು. ಇದೀಗ ತಮ್ಮ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.​

 

 

Published On - 7:55 pm, Tue, 22 August 23