CWG 2022: ಫೈನಲ್​ನಲ್ಲಿ ಹೀನಾಯ ಸೋಲು: ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಭಾರತ ಹಾಕಿ ತಂಡ

| Updated By: ಝಾಹಿರ್ ಯೂಸುಫ್

Updated on: Aug 08, 2022 | 7:10 PM

Commonwealth Games 2022: ವಿಶೇಷ ಎಂದರೆ ಈ 7 ಗೋಲುಗಳ ಜಯದೊಂದಿಗೆ ಆಸ್ಟ್ರೇಲಿಯಾ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 7ನೇ ಬಾರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

CWG 2022: ಫೈನಲ್​ನಲ್ಲಿ ಹೀನಾಯ ಸೋಲು: ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಭಾರತ ಹಾಕಿ ತಂಡ
ಭಾರತ ಹಾಕಿ ತಂಡ
Follow us on

ಕಾಮನ್​ವೆಲ್ತ್ ಗೇಮ್ಸ್​ನ (Commonwealth Games 2022) ಪುರುಷರ ಹಾಕಿ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ದ 7-0 ಅಂತರದಿಂದ ಹೀನಾಯ ಸೋಲನುಭವಿಸಿ ಭಾರತ (Indian Hockey Team) ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಒಲಿಂಪಿಕ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತ ತಂಡದ ಮೇಲೆ ಈ ಬಾರಿ ಭಾರೀ ನಿರೀಕ್ಷೆಗಳಿತ್ತು. ಆದರೆ ಅಂತಿಮ ಹಣಾಹಣಿಯನ್ನು ಆಸ್ಟ್ರೇಲಿಯಾ ಆಟಗಾರರು ಏಕಪಕ್ಷೀಯವಾಗಿಸಿದ್ದರು. ಈ ಮೂಲಕ ಭಾರತ ವಿರುದ್ದ ಬರೋಬ್ಬರಿ 7 ಗೋಲು ದಾಖಲಿಸಿದ್ದರು. ಸಾಂಘಿಕ ಪ್ರದರ್ಶನದ ಕೊರತೆಯಿಂದಾಗಿ ಟೀಮ್ ಇಂಡಿಯಾ ಏಕೈಕ ಗೋಲುಗಳಿಸಲು ಸಾಧ್ಯವಾಗದೇ ಹೀನಾಯವಾಗಿ ಸೋಲನುಭವಿಸಿತು. ಈ ಮೂಲಕ ಭಾರತ ತಂಡ 2ನೇ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.

ಆಕ್ರಮಣಕಾರಿ ಆಟ ಪ್ರದರ್ಶಿಸಿದ ಆಸ್ಟ್ರೇಲಿಯನ್ನರ ಮುಂದೆ ಭಾರತೀಯ ಆಟಗಾರರು ಯಾವುದೇ ಹಂತದಲ್ಲೂ ಸರಿಸಾಟಿಯಾದ ಪ್ರದರ್ಶನ ನೀಡಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಪರಿಣಾಮ ಆಸೀಸ್ ಪರ ಬ್ಲೇಕ್ ಗೋವರ್ಸ್, ನಾಥನ್ ಎಫ್ರಾಮ್ಸ್, ಜಾಕೋಬ್ ಆಂಡರ್ಸನ್, ಟಾಮ್ ವಿಕ್ಹ್ಯಾಮ್ ಮತ್ತು ಫಿನ್ ಒಗಿಲ್ವಿ ಗೋಲುಗಳಿಸಿದರು.

ಅತ್ತ ಭಾರತ ತಂಡದ ಮುನ್ಪಡೆ ಆಟಗಾರರು ಸಂಪೂರ್ಣವಾಗಿ ವಿಫಲರಾದರೆ, ಇತ್ತ ಕಡೆ ರಕ್ಷಣಾತ್ಮಕ ಆಟಗಾರರು ಆಟವನ್ನೇ ಮರೆತಂತೆ ಹಾಕಿಯನ್ನು ಬೀಸಿದ್ದರು. ಈ ವೈಫಲ್ಯದ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯನ್ನರು ಬ್ಯಾಕ್ ಟು ಬ್ಯಾಕ್ ಆಕ್ರಮಣ ಮಾಡಿ ಭಾರತೀಯ ಆಟಗಾರರ ಮೇಲೆ ಒತ್ತಡ ಹೇರಿದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಪರಿಣಾಮ ಆಸ್ಟ್ರೇಲಿಯವು ಮೊದಲ ಕ್ವಾರ್ಟರ್​ನಲ್ಲೇ ಮೊದಲ ಗೋಲು ಗಳಿಸಿತು. ಅಲ್ಲದೆ ಮೊದಲ ಕ್ವಾರ್ಟರ್‌ನ ಅಂತ್ಯಕ್ಕೆ ಆಸ್ಟ್ರೇಲಿಯಾ 2-0 ಮುನ್ನಡೆ ಕಾಯ್ದುಕೊಂಡಿತು. ಇದಾದ ಬಳಿಕ ಸಂಪೂರ್ಣ ಆಟದ ಮೇಲೆ ಪ್ರಾಬಲ್ಯ ಮುಂದುವರೆಸಿದ ಆಸೀಸ್ ಮುನ್ಪಡೆ ಆಟಗಾರರು ಐದು ಗೋಲುಗಳನ್ನು ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾಗೆ 7-0 ಅಂತರದಿಂದ ಸೋಲುಣಿಸಿದರು.

ವಿಶೇಷ ಎಂದರೆ ಈ 7 ಗೋಲುಗಳ ಜಯದೊಂದಿಗೆ ಆಸ್ಟ್ರೇಲಿಯಾ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 7ನೇ ಬಾರಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅತ್ತ ಬಂಗಾರದ ಬೇಟೆಯ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

 

Published On - 6:55 pm, Mon, 8 August 22