Mirabai Chanu: ಚಿನ್ನ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಭಾರತದ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಮೀರಾಬಾಯಿ ತಾಯಿ

| Updated By: Vinay Bhat

Updated on: Aug 01, 2022 | 11:16 AM

CWG 2022: ಮೀರಾಬಾಯಿ ಚಾನು ಚಿನ್ನ ಗೆಲ್ಲುತ್ತಿದ್ದಂತೆ ಅತ್ತ ಅವರ ಮನೆಯವರು ಸಂಭ್ರಮದಲ್ಲಿ ತೇಲಾಡಿದರು. ಈ ಬಗ್ಗೆ ಸ್ವತಃ ಮೀರಾಬಾಯಿ ಚಾನು ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

Mirabai Chanu: ಚಿನ್ನ ಗೆಲ್ಲುತ್ತಿದ್ದಂತೆ ಮನೆಯಲ್ಲಿ ಭಾರತದ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ ಮೀರಾಬಾಯಿ ತಾಯಿ
Mirabai Chanu
Follow us on

ಬರ್ಮಿಂಗ್ ​​ಹ್ಯಾಮ್​ ನಲ್ಲಿ ನಡೆಯುತ್ತಿರುವ ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಭರ್ಜರಿ ಪ್ರದರ್ಶನ ತೋರುತ್ತಿದೆ. ಇದುವರೆಗೆ ಭಾರತ ಮೂರು ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಗೆದ್ದಿದೆ. ಪದಕಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದು ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು (Mirabai Chanu). 49 ಕೆಜಿ ತೂಕ ವಿಭಾಗದಲ್ಲಿ ಮೀರಾ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಎತ್ತುವ ಮೂಲಕ ಪ್ರಶಸ್ತಿ ಗೆದ್ದು ದಾಖಲೆ ಮಾಡಿದರು. ಇತ್ತ ಮೀರಾ ಚಿನ್ನ ಗೆಲ್ಲುತ್ತಿದ್ದಂತೆ ಅತ್ತ ಅವರ ಮನೆಯವರು ಸಂಭ್ರಮದಲ್ಲಿ ತೇಲಾಡಿದರು.

ಈ ಬಗ್ಗೆ ಸ್ವತಃ ಮೀರಾಬಾಯಿ ಚಾನು ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, “ನನ್ನ ತಾಯಿ ಹಾಗೂ ಸಂಬಂಧಿಕರು ನನ್ನ ಗೆಲುವನ್ನು ಸಂಭ್ರಮಿಸುತ್ತಿರುವುದು,” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಭಾರತದ ಧ್ವಜ ಹಿಡಿದುಕೊಂಡು ಮೀರಾಬಾಯಿ ತಾಯಿ ಜೊತೆ ಸಂಬಂಧಿಕರು ಕೈ ಕೈ ಹಿಡಿದುಕೊಂಡು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿವೆ.

 

ಸಿಂಗಾಪೂರ ವೇಟ್‌ಲಿಫ್ಟಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಮೀರಾಬಾಯಿ ಚಾನು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಮೊದಲ ಬಾರಿ 55 ಕೆ.ಜಿ. ವಿಭಾಗದದಲ್ಲಿ ಸ್ಪರ್ಧಿಸಿದ ಅವರು ಒಟ್ಟು 191 ಕೆ.ಜಿ. ಭಾರ ಎತ್ತಿದರು. 27 ವರ್ಷದ ಚಾನು ಕಾಮನ್‌ವೆಲ್ತ್‌ ರ್ಯಾಂಕಿಂಗ್‌ ಆಧಾರದಲ್ಲಿ ಗೇಮ್ಸ್‌ನ 49 ಕೆ.ಜಿ. ವಿಭಾಗದಲ್ಲೂ ಅರ್ಹತೆ ಪಡೆದುಕೊಂಡಿದ್ದರು. ಈ ಹಿಂದೆ 2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿಯೂ ಮೀರಾಬಾಯಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಇದೀಗ ಸತತ ಎರಡನೇ ಬಾರಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ 2020 ರಲ್ಲೂ ಇವರು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದರು.

ಮೀರಾಬಾಯಿ ಈ ಮಟ್ಟದಲ್ಲಿ ಸಾಧನೆ ಮಾಡಲು ಅವರು ನಡೆದ ಬಂದ ಹಾದಿ ಸುಗಮವಾಗಿರಲಿಲ್ಲ. 12ನೇ ವಯಸ್ಸಿನಲ್ಲಿ ಅಣ್ಣನಿಗಿಂತ ಹೆಚ್ಚು ಕಟ್ಟಿಗೆ ಹೊತ್ತು ಸಾಗುತ್ತ ತನ್ನ ಶಕ್ತಿ ಪ್ರದರ್ಶಿಸಿದ ಮೀರಾಬಾಯಿ ಚಾನು ಇಂದು ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿರುವುದು ಅವರ ಕ್ರೀಡಾ ಬದುಕಿನ ಇನ್ನೊಂದು ಮುಖ. ಒಂದು ಕಾಲದಲ್ಲಿ ಉರುವಲಿಗಾಗಿ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಿದ್ದ ಮೀರಾಬಾಯಿ ಚಾನು ಮುಂದೊಂದು ದಿನ ಇದು ವೇಟ್ಲಿಫ್ಟಿಂಗ್​ಗೆ ನೆರವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮಣಿಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಮೀರಾಬಾಯಿ ಇಂದು ಭಾರತವೇ ಹೆಮ್ಮ ಪಡುವಂತೆ ಮಾಡಿದ್ದಾರೆ.