ಕಾಮನ್‌ವೆಲ್ತ್ ಗೇಮ್ಸ್ 2022ಕ್ಕೆ (Commonwealth Games 2022 ) ಗುರುವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಭಾರತ ಇಂದಿನಿಂದ ತನ್ನ ಅಭಿಯಾನ ಆರಂಭಿಸಲಿದ್ದು, ಕ್ರಿಕೆಟ್ ಪಂದ್ಯದಲ್ಲಿ ಕೂಡ ಕಣಕ್ಕಿಳಿಯಲಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ (India Women vs Australia Women) ತಂಡವು ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಬಹಳ ಸಮಯದ ನಂತರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟಕ್ಕೆ ಅವಕಾಶ ಸಿಕ್ಕಿದ್ದು ಚಿನ್ನ ಗೆಲ್ಲುವ ನೆಚ್ಚಿನ ತಂಡದಲ್ಲಿ ಭಾರತ ಕೂಡ ಇದೆ. ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕ್ರಿಕೆಟ್ ಪಂದ್ಯವನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತದೆ. ಹೀಗಾಗಿ ಬಿಸಿಸಿಐ (BCCI) ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ.
ಹರ್ಮನ್ಪ್ರೀತ್ ಕೌರ್ ಭಾರತ ಮಹಿಳಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರ ಜೊತೆಗೆ ಶಫಾಲಿ ವರ್ಮಾ, ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯ, ಜಮಿಯಾ ರೋಡ್ರಿಗಸ್, ರಿಚ್ಚಾ ಘೋಷ್, ದೀಪ್ತಿ ಶರ್ಮಾ, ಸ್ನೇಹ್ ರಾಣ, ರಾಜೇಶ್ವರ್ ಗಾಯಕ್ವಾಡ್, ಪೂನಮ್ ಯಾದವ್, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ಹರ್ಲೀನ್ ಡ್ಯೂಲ್, ಮೆಘನಾ ಸಿಂಗ್, ರಾಧಾ ಯಾದವ್, ತನಿಯಾ ಭಾಟಿಯ ಇದ್ದಾರೆ.
ಇತ್ತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಭಾರತಕ್ಕಿಂತ ಬಲಿಷ್ಠವಾಗಿದೆ ಎಂದರೆ ತಪ್ಪಾಗಲಾರದು. ಆದರೆ, ಟೀಮ್ ಇಂಡಿಯಾವನ್ನು ಕಡೆಗಣಿಸುವಂತಿಲ್ಲ. ಮಂದಾನ, ಕೌರ್, ಶಫಾಲಿ ಆರ್ಭಟಿಸಿದರೆ ತಂಡದ ಮೊತ್ತ 200ರ ಗಡಿ ದಾಟುವುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಮೆಗ್ ಲ್ಯಾನ್ನಿಂಗ್ ಮುನ್ನಡೆಸುತ್ತಿದ್ದಾರೆ. ಅಲಿಸ್ಸಾ ಹೇಲೆ, ಬೆಥ್ ಮೂನೆ, ಥಿಲಾ ಮೆಕ್ಗ್ರಾಥ್, ರಿಚೆಲ್ ಹೇನ್ಸ್ ಸ್ಟಾರ್ ಬ್ಯಾಟರ್ಗಳಾಗಿದ್ದಾರೆ. ಮೆಘನ್ ಸ್ಕಾಟ್, ಗ್ರೇಸ್ ಹ್ಯಾರಿಸ್, ಅಲೆನ್ ಕಿಂಗ್ರಂತಹ ಅಪಾಯಕಾರಿ ಬೌಲರ್ಗಳಿಂದ ಕೂಡಿದೆ.
ಗ್ರೂಪ್ ಹಂತದ ಪಂದ್ಯಗಳಲ್ಲಿ ಮೂರು ತಂಡದ ವಿರುದ್ಧ ಭಾರತ ತಲಾ ಒಂದೊಂದು ಪಂದ್ಯವನ್ನು ಆಡಲಿದೆ. ಇಲ್ಲಿ ಕನಿಷ್ಠ ಎರಡು ಪಂದ್ಯವನ್ನು ಹರ್ಮನ್ ಪಡೆ ಗೆದ್ದರೆ ಸಮಿಫೈನಲ್ ಹಂತಕ್ಕೇರಲಿದೆ. ಆಡಿದ ಮೂರೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಕ್ವಾಲಿಫೈ ಆಗಲಿದೆ. ಆಸ್ಟ್ರೇಲಿಯಾ, ಬಾರ್ಬಡೋಸ್ ಮತ್ತು ಪಾಕಿಸ್ತಾನದೊಂದಿಗೆ ಭಾರತ ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಬಿ ಗುಂಪಿನಲ್ಲಿವೆ. ಎರಡು ಪೂಲ್ಗಳಿಂದ ಎರಡು ಅಗ್ರ ತಂಡಗಳು ಸೆಮಿಫೈನಲ್ಗೆ ಲಗ್ಗೆ ಹಾಕಲಿದ್ದು, ಇಲ್ಲಿ ಗೆಲ್ಲುವ ತಂಡಗಳು ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿವೆ.
ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಣ ಕಾಮನ್‌ವೆಲ್ತ್ ಕ್ರೀಡಾಕೂಟದ ಲೀಗ್ ಸುತ್ತಿನ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30 ಶುರುವಾಗಲಿದೆ. ನೇರ ಪ್ರಸಾರ ಸೋನಿ ನೆಟ್‌ವರ್ಕ್‌ನ ಚಾನೆಲ್‌ನಲ್ಲಿರಲಿದೆ. ಆನ್ಲೈನ್ನಲ್ಲಾದರೆ ಸೋನಿ ಲಿವ್‌ನಲ್ಲಿ ಲೈವ್ಸ್ಟ್ರೀಮ್ ವೀಕ್ಷಿಸಬಹುದು.
ಭಾರತ ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್ XI:
ಶಫಾಲಿ ವರ್ಮಾ, ಸ್ಮೃತಿ ಮಂದಾನ, ಯಸ್ತಿಕಾ ಭಾಟಿಯ, ಜಮಿಯಾ ರೋಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚ್ಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸ್ನೇಹ್ ರಾಣ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ರೇಣುಕಾ ಸಿಂಗ್.