ಜುಲೈ 28 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಶುರುವಾಗಲಿರುವ ಕಾಮನ್ವೆಲ್ತ್ ಗೇಮ್ಸ್ನಿಂದ (CWG 2022) ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಹೊರಬಿದ್ದಿದ್ದಾರೆ. ಕ್ರೀಡಾಕೂಟದ ಪ್ರಾರಂಭಕ್ಕೂ ಮುನ್ನ ಪ್ರಮುಖ ಜಾವೆಲಿನ್ ಸ್ಪರ್ಧಿ ಹೊರಬೀಳುವ ಮೂಲಕ ಭಾರತ ತಂಡವು ದೊಡ್ಡ ಹಿನ್ನಡೆ ಅನುಭವಿಸಿದೆ. ಕೆಲ ದಿನಗಳ ಹಿಂದೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಗಾಯಗೊಂಡಿದ್ದು, ಹೀಗಾಗಿ ಕಾಮನ್ವೆಲ್ತ್ ಗೇಮ್ಸ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗಾಯದ ಹೊರತಾಗಿಯೂ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ವಿಶ್ವ ಅಥ್ಲೆಟಿಕ್ಸ್ನಲ್ಲಿ 88.13 ಮೀಟರ್ ಎಸೆಯುವ ವೇಳೆ ಕಾಲಿಗೆ ಗಾಯವಾಗಿತ್ತು. ಹೀಗಾಗಿ ಮುಂಬರುವ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಕಮರಿದ ಚಿನ್ನದ ನಿರೀಕ್ಷೆ:
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಫೌಲ್‌ನೊಂದಿಗೆ ಆರಂಭಿಸಿದರು. ಇದರ ನಂತರ ಅದ್ಭುತವಾಗಿ ಕಂಬ್ಯಾಕ್ ಮಾಡಿದ್ದ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ನಾಲ್ಕನೇ ಎಸೆತದ ನಂತರವೇ ಅವರ ತೊಡೆ ಭಾಗದಲ್ಲಿ ಗಾಯವಾಗಿದ್ದು, ಹೀಗಾಗಿ ಕಾಮನ್ವೆಲ್ತ್ ಗೇಮ್ಸ್ ಭಾಗವಹಿಸುವುದು ಸೂಕ್ತವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವಿಶೇಷ ಎಂದರೆ ವಿಶ್ವ ಅಥ್ಲೆಟಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಅಲ್ಲದೆ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಬರ್ಮಿಂಗ್ಹ್ಯಾಮ್ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಬಳಿಕ ಈ ಬಗ್ಗೆ ಮಾತನಾಡಿದ್ದ ನೀರಜ್ ಚೋಪ್ರಾ, ಕಾಮನ್‌ವೆಲ್ತ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಗಾಯದ ಕಾರಣ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಜಾವೆಲಿನ್ ಎಸೆತದಲ್ಲಿ ಭಾರತದ ಚಿನ್ನದ ಕನಸು ಕೂಡ ಬಹುತೇಕ ಕಮರಿದೆ.
ಇದರೊಂದಿಗೆ ಆಗಸ್ಟ್ 7 ರಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆಯಲಿರುವ ಜಾವೆಲಿನ್ ಸ್ಪರ್ಧೆಯು ಏಕಪಕ್ಷೀಯವಾಗಲಿದೆ. ಏಕೆಂದರೆ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ಗೆ ನೀರಜ್ ಚೋಪ್ರಾ ಒಬ್ಬರೇ ಉತ್ತಮ ಪೈಪೋಟಿ ನೀಡುತ್ತಿದ್ದರು. ಹೀಗಾಗಿ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಇಬ್ಬರಿಂದ ರೋಚಕ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೀಗ ನೀರಜ್ ಚೋಪ್ರಾ ಹೊರಬಿದ್ದಿದ್ದು, ಹೀಗಾಗಿ ಭಾರತದ ಉಳಿದ ಸ್ಪರ್ಧಿಗಳಿಂದ ಚಿನ್ನವನ್ನು ನಿರೀಕ್ಷಿಸಬೇಕಿದೆ.
ನೀರಜ್ ಚೋಪ್ರಾಗೆ ಒಂದು ತಿಂಗಳ ವಿಶ್ರಾಂತಿ:
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ನಂತರ, ನೀರಜ್ ಚೋಪ್ರಾಗೆ ಎಂಆರ್ಐ ಸ್ಕ್ಯಾನ್ ಮಾಡಲಾಗಿತ್ತು. ಅದರಲ್ಲಿ ಅವರ ತೊಡೆಸಂದು ಭಾಗಕ್ಕೆ ಗಂಭೀರ ಗಾಯವಾಗಿರುವುದು ಕಂಡು ಬಂದಿದೆ. ಹೀಗಾಗಿ ನೀರಜ್‌ಗೆ ಒಂದು ತಿಂಗಳ ಕಾಲ ವಿಶ್ರಾಂತಿ ನೀಡುವಂತೆ ವೈದ್ಯರು ಸೂಚಿಸಿದ್ದಾರೆ. ಗಾಯದ ಕಾರಣ ನೀರಜ್ 2019 ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಚಿನ್ನ ಗೆದ್ದಿದ್ದು ಈಗ ಇತಿಹಾಸ.
22ನೇ ಕಾಮನ್ವೆಲ್ತ್ ಗೇಮ್ಸ್:
ಜುಲೈ 28 ರಿಂದ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನ ಕ್ರೀಡಾಂಗಣದಲ್ಲಿ 22ನೇ ಕಾಮನ್ವೆಲ್ತ್ ಗೇಮ್ಸ್ಗೆ ಚಾಲನೆ ಸಿಗಲಿದೆ. ಈ ಕ್ರೀಡಾಕೂಟದಲ್ಲಿ 72 ರಾಷ್ಟ್ರಗಳು ಭಾಗವಹಿಸುತ್ತಿದ್ದು, ಭಾರತದಿಂದ ಒಟ್ಟು 215 ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ. ಗುರುವಾರದಿಂದ ಶುರುವಾಗಲಿರುವ ಕಾಮನ್ವೆಲ್ತ್ ಗೇಮ್ಸ್ಗೆ ಆಗಸ್ಟ್ 8 ರಂದು ತೆರೆಬೀಳಲಿದೆ. 2018 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತವು ಒಟ್ಟು 66 ಪದಕ ಗೆದ್ದಿತ್ತು. ಅಲ್ಲದೆ ಕಳೆದ ಕೆಲ ವರ್ಷಗಳಿಂದ ಭಾರತವು ಪದಕ ಪಟ್ಟಿಯಲ್ಲಿ ಟಾಪ್ – 5 ನಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ಬಾರಿ ಕೂಡ ಭಾರತದ ಸ್ಪರ್ಧಾಳುಗಳಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಬಹುದು.
Published On - 12:47 pm, Tue, 26 July 22