ಭಾರತೀಯ ಹಾಕಿ ತಂಡದಿಂದ ಕೊಡಗಿನ ಕಲಿಗಳ ಕಣ್ಮರೆ..!

Indian Hockey Team: 1997 ರಿಂದ ಪ್ರತಿ ವರ್ಷ ನಡೆಯುವ ಕೊಡವ ಹಾಕಿ ಉತ್ಸವದಲ್ಲಿ ಸುಮಾರು 300 ತಂಡಗಳು ಭಾಗವಹಿಸುತ್ತವೆ. ಇದು ಕೂಡ ಒಂದು ದಾಖಲೆ.

ಭಾರತೀಯ ಹಾಕಿ ತಂಡದಿಂದ ಕೊಡಗಿನ ಕಲಿಗಳ ಕಣ್ಮರೆ..!
Indian Hockey Team
TV9kannada Web Team

| Edited By: Zahir PY

Jul 26, 2022 | 5:55 PM

ಅದೊಂದು ಕಾಲವಿತ್ತು…ಭಾರತೀಯ ಹಾಕಿ ತಂಡ ಘೋಷಣೆಯಾದರೆ ಅದರಲ್ಲಿ ಒಂದಿಬ್ಬರು ಕನ್ನಡಿಗರು ಇರುತ್ತಿದ್ದರು. ಅದರಲ್ಲೂ ಕೊಡಗಿನಿಂದ ಒಬ್ಬ ಆಟಗಾರನಿಗೆ ಭಾರತದಲ್ಲಿ ತಂಡದಲ್ಲಿ ಸ್ಥಾನ ಖಾಯಂ ಎಂಬ ಮಾತಿತ್ತು. ಆದರೆ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಾಗ ಒಬ್ಬರೇ ಒಬ್ಬರು ಕನ್ನಡಿಗರು ತಂಡದಲ್ಲಿ ಇರಲಿಲ್ಲ. ರಾಷ್ಟ್ರೀಯ ಹಾಕಿ ತಂಡದ ಖಾಯಂ ಸದಸ್ಯರೆನಿಸಿಕೊಂಡಿದ್ದ ಕೊಡಗಿನ ಕಲಿಗಳು ಕೂಡ ಕಾಣಿಸಿಕೊಂಡಿರಲಿಲ್ಲ. ಅಂದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿನ ಐತಿಹಾಸಿಕ ಗೆಲುವನ್ನು ಸ್ಮರಣೀಯವಾಗಿಸಲು ತಂಡದಲ್ಲಿ ಕರ್ನಾಟಕದ ಒಬ್ಬ ಆಟಗಾರನೂ ಇಲ್ಲದಿರುವುದು ಕ್ರೀಡಾಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು.

ಇದೀಗ ಭಾರತ ಹಾಕಿ ತಂಡವು ಪದಕದ ನಿರೀಕ್ಷೆಗಳೊಂದಿಗೆ ಕಾಮನ್​ವೆಲ್ತ್ ಕ್ರೀಡಾಕೂಟಕ್ಕೆ ತೆರಳಿದೆ. ಅಚ್ಚರಿ ಎಂದರೆ ಈ ಬಾರಿ ಕೂಡ ತಂಡದಲ್ಲಿ ಕರ್ನಾಟಕದಿಂದ ಯಾವೊಬ್ಬ ಆಟಗಾರನು ಕೂಡ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿಲ್ಲ. ಅದರಲ್ಲೂ ಕೊಡಗಿನಿಂದ ಯಾವುದೇ ಆಟಗಾರರು ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿರುವುದು ಚರ್ಚೆಗೆ ಕಾರಣವಾಗಿದೆ.

ಏಕೆಂದರೆ ಕೊಡಗು ಜಿಲ್ಲೆಯಿಂದ ಹಲವು ಆಟಗಾರರು ವಿಶ್ವಕಪ್ ಮತ್ತು ಒಲಿಂಪಿಕ್ಸ್‌ನಲ್ಲಿ ಆಡಿದ್ದರು. ಅವರಲ್ಲಿ ಎಂಪಿ ಗಣೇಶ್, ಬಿಪಿ ಗೋವಿಂದ, ಅರ್ಜುನ್ ಹಾಲಪ್ಪ, ಎಬಿ ಸುಬ್ಬಯ್ಯ, ಎಂಎಂ ಸೋಮಯ್ಯ ಮತ್ತು ಲೆನ್ ಅಯ್ಯಪ್ಪ ಸೇರಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ಸ್ ಹಾಗೂ ಕಾಮನ್​ವೆಲ್ತ್ ಕ್ರೀಡಾಕೂಟದಲ್ಲಿ ಕೂರ್ಗ್​ ಅನ್ನು ಪ್ರತಿನಿಧಿಸುವ ಯಾವುದೇ ಆಟಗಾರ ತಂಡದಲ್ಲಿಲ್ಲ. ಹೀಗಾಗಿಯೇ ಕೊಡಗಿನಿಂದ ರಾಷ್ಟ್ರೀಯ ತಂಡಕ್ಕೆ ಕಾಲಿಡುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವಕಪ್, ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಮಾಜಿ ಹಾಕಿ ಆಟಗಾರ ಗಣೇಶ್ ಅವರು ತಮ್ಮದೇ ಅಭಿಪ್ರಾಯ ಮುಂದಿಟ್ಟಿದ್ದಾರೆ.  ಕ್ರೀಡೆ ಮತ್ತು ಶೈಕ್ಷಣಿಕ ಎರಡೂ ಪರಸ್ಪರ ಪ್ರತ್ಯೇಕವಾಗಿಲ್ಲದಿದ್ದರೂ, ಕ್ರೀಡೆಯಿಂದ ಶೈಕ್ಷಣಿಕ ಕ್ಷೇತ್ರದತ್ತ ಗಮನವು ಈ ಕುಸಿತಕ್ಕೆ ಒಂದು ಕಾರಣ ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಕರ್ನಾಟಕ ಮತ್ತು ಕೊಡಗಿನ ಕ್ರೀಡಾ ಪಟುಗಳು ಜೂನಿಯರ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ನಿರ್ದಿಷ್ಟ ವಯಸ್ಸಿಗೆ ಮೀರಿದ ಕ್ರೀಡೆಗಳಲ್ಲಿ ಮುಂದುವರೆಯಲು ಪೋಷಕರು ಮಕ್ಕಳನ್ನು ಅನುಮತಿಸುವುದಿಲ್ಲ. ಕ್ರೀಡಾ ಕೋಟಾದ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಮಕ್ಕಳನ್ನು ಸೇರಿಸುವುದು ಅವರ ಉದ್ದೇಶವಾಗಿದೆ. ಹೀಗಾಗಿ ಉತ್ತಮ ಆಟಗಾರರ ಗುರಿ ಅರ್ಧದಲ್ಲೇ ಅಂತ್ಯಗೊಳ್ಳುತ್ತಿದೆ ಎಂದು ಗಣೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯವು ಕ್ರೀಡಾಪಟುಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ 91 ಸೀಟುಗಳನ್ನು ಕಾಯ್ದಿರಿಸಿದೆ. ಆದರೆ ಒಮ್ಮೆ ಅವರು ಪ್ರವೇಶ ಪಡೆದ ನಂತರ, ನಾವು ಅವರನ್ನು ರಾಷ್ಟ್ರೀಯ ಶಿಬಿರಗಳಲ್ಲಿ ನೋಡುವುದಿಲ್ಲ. ಏಕೆಂದರೆ ಅವರು ಶೈಕ್ಷಣಿಕ ವಿಷಯಗಳತ್ತ ಹೆಚ್ಚಿನ ಗಮನ ಹರಿಸಿರುತ್ತಾರೆ ಎಂದು ಮಾಜಿ ಒಲಿಂಪಿಕ್ ಆಟಗಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಇವೆಲ್ಲದರ ಜೊತೆಗೆ ಹೊಸ ತಲೆಮಾರಿನ ಕೊಡವರಲ್ಲಿ ಹೆಚ್ಚಿನವರು ಶ್ರಮದಾನಕ್ಕೆ ಮುಂದಾಗುತ್ತಿಲ್ಲ ಎಂಬುದನ್ನು ಕೂಡ ಒಪ್ಪಿಕೊಳ್ಳಬೇಕು. ಇದರಿಂದ ಕ್ರೀಡೆಯಲ್ಲಿ ಸಾಧನೆ ಮಾಡುವ ಹುಮ್ಮಸ್ಸು ಸ್ವಲ್ಪ ಮಟ್ಟಿಗೆ ಕ್ಷೀಣಿಸಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಗಣೇಶ್ ಅವರು ಹೇಳಿದ್ದಾರೆ.

ನಮ್ಮ ಕಾಲದಲ್ಲಿ, ನಮ್ಮ ಶಾಲೆಗಳನ್ನು ತಲುಪಲು ನಾವು ಪ್ರತಿದಿನ 5 ರಿಂದ 6 ಕಿಮೀ ನಡೆಯಬೇಕಾಗಿತ್ತು. ಇದರಿಂದ ದೈಹಿಕ ಸಾಮರ್ಥ್ಯವು ನೈಸರ್ಗಿಕವಾಗಿ ಹೆಚ್ಚುತ್ತಿತ್ತು. ಆದರೆ ಈಗಿನ ಪೀಳಿಗೆಯಲ್ಲಿ ಅದೆಲ್ಲವೂ ಕಾಣಸಿಗಲ್ಲ ಎಂದು ಇದೇ ವೇಳೆ ಗಣೇಶ್ ಅವರು ಮೆಲುಕು ಹಾಕಿದರು.

ಹಾಕಿ ಹಬ್ಬ ನಡೆದರೂ ಉತ್ತಮ ಆಟಗಾರರ ಕೊರತೆ:

1997 ರಿಂದ ಪ್ರತಿ ವರ್ಷ ನಡೆಯುವ ಕೊಡವ ಹಾಕಿ ಉತ್ಸವದಲ್ಲಿ ಸುಮಾರು 300 ತಂಡಗಳು ಭಾಗವಹಿಸುತ್ತವೆ. ಇದು ಕೂಡ ಒಂದು ದಾಖಲೆ. ಆದರೆ ಇಷ್ಟೊಂದು ಆಟಗಾರರು ಭಾಗವಹಿಸಿದರೂ ಅದರಿಂದ ಒಬ್ಬ ಆಟಗಾರ ಕೂಡ ಈಗ ಭಾರತವನ್ನು ಪ್ರತಿನಿಧಿಸುತ್ತಿಲ್ಲ ಎಂಬುದೇ ಖೇದಕರ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕೊಡಗಿನಲ್ಲಿ ಈಗಲೂ ಹಾಕಿ ಕ್ರೇಜ್ ಇದ್ದೇ ಇದೆ. ಇದಕ್ಕೆ ಸಾಕ್ಷಿಯೇ ಪ್ರತಿ ವರ್ಷ ನಡೆಯುವ ಕೊಡವ ಹಾಕಿ ನಮ್ಮೆಯಲ್ಲಿ 300 ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುತ್ತಿರುವುದು. ಆದರೆ ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸುವಷ್ಟು ಸ್ಪರ್ಧಾತ್ಮಕವಾಗಿಲ್ಲ ಎಂಬುದೇ ಸತ್ಯ ಎನ್ನುತ್ತಾರೆ ಜೂನಿಯರ್ ಹಾಕಿ ತಂಡದ ಕೋಚ್ ಬಿಜೆ ಕಾರ್ಯಪ್ಪ.

ಇದಕ್ಕಾಗಿ ಯುವ ಆಟಗಾರರು ಹೆಚ್ಚು ಶ್ರಮಿಸಬೇಕು. ಅದರ ಜೊತೆಗೆ ಉತ್ತಮ ತರಬೇತಿ ಪಡೆಯಬೇಕಾಗುತ್ತದೆ. ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯು ಹೆಚ್ಚು ಕಠಿಣವಾಗಿರುವ ಕಾರಣ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಿಗೆ ಒಡ್ಡಿಕೊಳ್ಳಬೇಕು ಎಂದು ಕಾರ್ಯಪ್ಪ ಹೇಳಿದರು.

ಇದೇ ವೇಳೆ ರಾಜ್ಯದ ಆಟಗಾರರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಎಡವುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ಕಾರ್ಯಪ್ಪ, ಕಾಲಕ್ಕೆ ಅಗತ್ಯವಾಗಿದ್ದ ಹೆಚ್ಚುವರಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸಬೇಕಿದೆ. ಇದರಲ್ಲಿ ಅಧಿಕಾರಿಗಳು ಮತ್ತು ತರಬೇತುದಾರರಲ್ಲಿ ಹೊಣೆಗಾರಿಕೆಯ ಕೊರತೆಯಿದೆ ಎಂದು ಅಭಿಪ್ರಾಯಪಟ್ಟರು.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಭಾರತೀಯ ಹಾಕಿ ತಂಡದಲ್ಲಿ ಮಿಂಚುತ್ತಿದ್ದ ಕರ್ನಾಟಕದ ಹೆಸರು ಇದೀಗ ಮರೆಯಾಗಿದೆ. ಇದಾಗ್ಯೂ ಕರ್ನಾಟಕದ ಹಾಗೂ ಕೊಡಗಿನ ಒಂದಷ್ಟು ಯುವ ಆಟಗಾರರು ಹಾಕಿಯನ್ನು ಹೊಸ ಸವಾಲಾಗಿ ಸ್ವೀಕರಿಸಿದ್ದಾರೆ. ಈ ಸವಾಲನ್ನು ಮೀರಿ ನಮ್ಮೂರ ಹುಡುಗರು ಭಾರತ ಹಾಕಿ ತಂಡದಲ್ಲಿ ಮಿಂಚಲಿ ಎಂದು ಆಶಿಸೋಣ.

ಭಾರತ ಹಾಕಿ ತಂಡ ಹೀಗಿದೆ:

ಇದನ್ನೂ ಓದಿ

  • ಗೋಲ್ ಕೀಪರ್ಸ್​: ಪಿಆರ್‌ ಶ್ರೀಜೇಶ್‌, ಕೃಷನ್‌ ಬಹದ್ದೂರ್‌ ಪಾಠಕ್‌
  •  ಡಿಫೆಂಡರ್ಸ್​: ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಹರ್ಮನ್‌ ಪ್ರೀತ್‌ ಸಿಂಗ್‌ (ಉಪನಾಯಕ), ಅಮಿತ್‌ ರೋಹಿದಾಸ್‌, ಜುಗರಾಜ್‌ ಸಿಂಗ್‌, ಜರ್ಮನ್‌ ಪ್ರೀತ್‌ ಸಿಂಗ್ಮಿ
  • ಮಿಡ್​ ಫೀಲ್ಡರ್ಸ್​: ಮನ್‌ ಪ್ರೀತ್‌ ಸಿಂಗ್‌ (ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಶಂಶೇರ್‌ ಸಿಂಗ್‌, ಆಕಾಶ್‌ ದೀಪ್‌ ಸಿಂಗ್‌, ನೀಲಕಂಠ ಶರ್ಮ
  • ಫಾವರ್ಡ್ಸ್​: ಮಂದೀಪ್‌ ಸಿಂಗ್‌, ಗುಜರಾತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಅಭಿಷೇಕ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada