Gautam Gambhir: ಗೌತಮ್ ಗಂಭೀರ್ ಮುಂದಿದೆ 4 ಬಿಗ್ ಟಾಸ್ಕ್

|

Updated on: Jul 10, 2024 | 7:45 AM

Gautam Gambhir: ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಇಲ್ಲಿ ಗಂಭೀರ್ ಅವರ ಕಾರ್ಯಾವಧಿ 2024 ರಿಂದ 2027. ಈ ಅವಧಿಯಲ್ಲಿ ನಾಲ್ಕು ಐಸಿಸಿ ಟೂರ್ನಿಗಳು ನಡೆಯಲಿದೆ. ಈ ಟೂರ್ನಿಗಳೇ ಭಾರತ ತಂಡದ ನೂತನ ಕೋಚ್ ಮುಂದಿರುವ ದೊಡ್ಡ ಸವಾಲುಗಳು. ಈ ಸವಾಲುಗಳಲ್ಲಿ ವಿಫಲರಾದರೆ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಮುಂದುವರೆಯುವ ಸಾಧ್ಯತೆಯಿಲ್ಲ

Gautam Gambhir: ಗೌತಮ್ ಗಂಭೀರ್ ಮುಂದಿದೆ 4 ಬಿಗ್ ಟಾಸ್ಕ್
Gautam Gambhir
Follow us on

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತ ತಂಡ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗಿದ್ದಾರೆ. ಈ ಆಯ್ಕೆಯೊಂದಿಗೆ ನೂತನ ಕೋಚ್ ಗೆ ಬಿಸಿಸಿಐ ನಾಲ್ಕು ಬಿಗ್ ಟಾಸ್ಕ್ ಗಳನ್ನು ನೀಡಿದ್ದಾರೆ. ಆ ಟಾಸ್ಕ್ ಗಳೆಂದರೆ ಐಸಿಸಿ ಟ್ರೋಫಿಗಳು. ಅಂದರೆ ಗೌತಮ್ ಗಂಭೀರ್ ಅವರನ್ನು ಮುಂದಿನ ಮೂರು ವರ್ಷಗಳಿಗಾಗಿ ಆಯ್ಕೆ ಮಾಡಲಾಗಿದೆ. ಈ ಮೂರು ವರ್ಷಗಳಲ್ಲಿ ಭಾರತ ತಂಡವು 4 ಐಸಿಸಿ ಟೂರ್ನಿಗಳನ್ನು ಆಡಲಿದೆ. ಅದರಲ್ಲೂ ಮುಂದಿನ ವರ್ಷವೇ ಟೀಮ್ ಇಂಡಿಯಾ ಎರಡು ಐಸಿಸಿ ಟೂರ್ನಮೆಂಟ್ ನಲ್ಲಿ ಕಣಕ್ಕಿಳಿಯಲಿದೆ.

2025ರ ಫೆಬ್ರವರಿ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಕಣಕ್ಕಿಯಲಿವೆ. ಇದುವೇ ಗಂಭೀರ್ ಮುಂದಿರುವ ಮೊದಲ ದೊಡ್ಡ ಸವಾಲು. ಈಗಾಗಲೇ ಟಿ20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಏಕೆಂದರೆ 2013 ರ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಯಲ್ಲಿನ ಭಾರತ ತಂಡದ ಪ್ರದರ್ಶನ ಗೌತಮ್ ಗಂಭೀರ್ ಅವರ ಕೋಚಿಂಗ್ ಚಾಕಚಕ್ಯತೆಯನ್ನು ತೆರೆದಿಡಲಿದೆ. ಇದರ ಬೆನ್ನಲ್ಲೇ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಸ್ ಶಿಪ್ ಕೂಡ ನಡೆಯಲಿದೆ.

ಜೂನ್ 2025 ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ಸ್‌ನಲ್ಲಿ ಭಾರತ ತಂಡ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಅತ್ತ ಕಳೆದ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಿರುವ ಟೀಮ್ ಇಂಡಿಯಾಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಗಂಭೀರ್ ಮುಂದಾಳತ್ವದಲ್ಲಿ ಈ ಬರ ನೀಗಿಸಿಕೊಳ್ಳುವುದನ್ನು ಬಿಸಿಸಿಐ ಎದುರು ನೋಡುತ್ತಿದೆ.

ಇನ್ನು 2026 ರಲ್ಲಿ ಟಿ20 ವಿಶ್ವಕಪ್ ಕೂಡ ಜರುಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್ ಬಿಸಿಸಿಐ ಪಾಲಿಗೆ ಪ್ರತಿಷ್ಠತೆಯಾಗಿದೆ. ಏಕೆಂದರೆ ಭಾರತ ತಂಡವು ಈವರೆಗೆ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿಲ್ಲ. ಇದೀಗ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವನ್ನು ಚಾಂಪಿಯನ್ ಪಟ್ಟದಲ್ಲೇ ಉಳಿಸುವುದು ಗಂಭೀರ್ ಅವರ ಮುಂದಿರುವ ದೊಡ್ಡ ಸವಾಲು.

ಹಾಗೆಯೇ ಗೌತಮ್ ಗಂಭೀರ್ ಅವರಿಗೆ ನೀಡಲಾದ ಕೊನೆಯ ಟಾಸ್ಕ್ 2027ರ ಏಕದಿನ ವಿಶ್ವಕಪ್. ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಭಾರತ ತಂಡವು ಏಕದಿನ ವಿಶ್ವಕಪ್ ಗೆದ್ದು ಬರೋಬ್ಬರಿ 13 ವರ್ಷಗಳೇ ಕಳೆದಿವೆ. 2011 ರಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಳಿಕ ಟೀಮ್ ಇಂಡಿಯಾ ಪಾಲಿಗೆ ಏಕದಿನ ವಿಶ್ವಕಪ್ ಮರೀಚಿಕೆಯಾಗಿ ಉಳಿದಿದೆ.

ಹೀಗಾಗಿ 2027 ರಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವುದನ್ನು ಭಾರತ ತಂಡ ಎದುರು ನೋಡುತ್ತಿದೆ. ಈ ವಿಶ್ವಕಪ್​ನೊಂದಿಗೆ ಗಂಭೀರ್ ಅವರ ಕಾರ್ಯಾವಧಿ ಸಹ ಮುಗಿಯಲಿದೆ. ಅಂದರೆ ಗೌತಮ್ ಗಂಭೀರ್ ಅವರನ್ನು 3 ವರ್ಷಗಳ ಬಳಿಕ ಕೋಚ್ ಆಗಿ ಮುಂದುವರೆಸಬೇಕಿದ್ದರೆ ಈ ಮೂರು ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಒಂದರಲ್ಲಾದರೂ ಚಾಂಪಿಯನ್ ಪಟ್ಟ ಅಲಂಕರಿಸಬೇಕು.

ಇದನ್ನೂ ಓದಿ: ಮಳೆ ಬಂದರೂ ನೋ ಟೆನ್ಶನ್… ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ

ಅದರಲ್ಲೂ 2027ರ ಏಕದಿನ ವಿಶ್ವಕಪ್‌ನಲ್ಲಿನ ಭಾರತ ತಂಡ ಪ್ರದರ್ಶನದ ಬಳಿಕ ಗೌತಮ್ ಗಂಭೀರ್ ಅವರ ಕೋಚಿಂಗ್ ಭವಿಷ್ಯ ನಿರ್ಧಾರವಾಗಲಿದೆ. ಹೀಗಾಗಿ ಮುಂದಿನ ಮೂರು ವರ್ಷ ಭಾರತ ತಂಡದ ನೂತನ ಕೋಚ್ ಪಾಲಿಗೆ ಅಗ್ನಿ ಪರೀಕ್ಷೆ ಎಂದರೂ ತಪ್ಪಾಗಲಾರದು.

 

Published On - 7:42 am, Wed, 10 July 24