ಕೋಟ್ಯಾಂತರು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ (ODI World Cup 2023) ಶೀಘ್ರದಲ್ಲೇ ಆರಂಭವಾಗಲಿದೆ. ಅಕ್ಟೋಬರ್ 5 ರಿಂದ ಈ ವಿಶ್ವಕಪ್ ಟೂರ್ನಿ ಭಾರತದಲ್ಲಿ ಆರಂಭವಾಗಲಿದ್ದು, ಲೀಗ್ನ ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ (England vs New Zealand) ನಡುವೆ ನಡೆಯಲಿದೆ. ಫೈನಲ್ ಅಂದರೆ ಪ್ರಶಸ್ತಿ ಸುತ್ತಿನ ಪಂದ್ಯ ನವೆಂಬರ್ 19 ರಂದು ನಡೆಯಲಿದೆ. ಅದಾಗ್ಯೂ ಈ ಬಾರಿಯ ವಿಶ್ವಕಪ್ ಕೆಲವು ನಿಯಮಗಳ ಬದಲಾವಣೆಗಳ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದೆ. ಹಿಂದೆಂದೂ ನಡೆಯದ ಕೆಲವು ಘಟನೆಗಳು ಈ ಬಾರಿಯ ವಿಶ್ವಕಪ್ನಲ್ಲಿ ನಡೆಯಲಿವೆ. ಅಂತಹ ಕೆಲವು ಸಂಗತಿಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೆ. ಆದರೆ ಈ ಆತಿಥ್ಯದ ವಿಶೇಷತೆ ಏನೆಂದರೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಭಾರಿಗೆ ಭಾರತ ಏಕಾಂಗಿಯಾಗಿ ಈ ಮೆಗಾ ಈವೆಂಟ್ ಅನ್ನು ಆಯೋಜಿಸುತ್ತಿದೆ. ಇದಕ್ಕೂ ಮೊದಲು ಭಾರತ 1987, 1996 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸಿತ್ತು.
ತಿರುವನಂತಪುರಂನಲ್ಲಿ 94% ಮಳೆ; ಟೀಂ ಇಂಡಿಯಾದ 2ನೇ ಅಭ್ಯಾಸ ಪಂದ್ಯವೂ ರದ್ದಾಗುವ ಸಾಧ್ಯತೆ..!
ಏಕದಿನ ವಿಶ್ವಕಪ್ ಆರಂಭವಾದಾಗಿನಿಂದ ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯ ಖಾಯಂ ತಂಡವಾಗಿರುತ್ತಿತ್ತು. ಆದರೆ ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆರಿಬಿಯನ್ ತಂಡ ಈ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. 1975 ಮತ್ತು 1979 ರ ವಿಶ್ವಕಪ್‌ಗಳಲ್ಲಿ ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಈ ಬಾರಿ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.
ಈ ಹಿಂದೆ ನಡೆದ ವಿಶ್ವಕಪ್ನಲ್ಲಿ ಅಂದರೆ 2019 ರಲ್ಲಿ ನಡೆದ ವಿಶ್ವಕಪ್ನಲ್ಲಿ ಬೌಂಡರಿ ಎಣಿಕೆ ನಿಯಮವು ಬಹಳ ಪ್ರಮುಖ ಪಾತ್ರ ವಹಿಸಿತ್ತು. ಅಂದರೆ ಪಂದ್ಯ ಟೈ ಆದರೆ ಆ ಪಂದ್ಯದಲ್ಲಿ ಹೆಚ್ಚು ಬೌಂಡರಿಗಳನ್ನು ಕೆಲ ಹಾಕಿದ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತಿತ್ತು. ಈ ನಿಯಮದಿಂದಾಗಿ ನ್ಯೂಜಿಲೆಂಡ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ವಾಸ್ತವವಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಕಳೆದ ವಿಶ್ವಕಪ್‌ನ ಫೈನಲ್ ಪಂದ್ಯ ಟೈ ಆಗಿತ್ತು. ಇದಾದ ಬಳಿಕ ಸೂಪರ್ ಓವರ್ ಆಡಲಾಯಿತು. ಆಗಲೂ ಪಂದ್ಯ ಟೈ ಆಯಿತು. ನಂತರ ಯಾವ ತಂಡ ಹೆಚ್ಚು ಬೌಂಡರಿ ಕಲೆಹಾಕಿತ್ತೋ ಆ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಹೀಗಾಗಿ ಫೈನಲ್ ಪಂದ್ಯದಲ್ಲಿ ಹೆಚ್ಚು ಬೌಂಡರಿಗಳನ್ನು ಕಲೆಹಾಕಿದ್ದ ಕಾರಣ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಇದು ಅನೇಕ ಮಾಜಿ ಕ್ರಿಕೆಟಿಗರ ಹಾಗೂ ಪರಿಣಿತರ ಕೆಂಗಣಿಗೆ ಗುರಿಯಾಗಿತ್ತು. ಈ ನಿಯಮದ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದರು. ಇದಾದ ನಂತರ ಐಸಿಸಿ ಈ ನಿಯಮವನ್ನು ಬದಲಾಯಿಸಿತು. ಈಗ ಹೊಸ ನಿಯಮದ ಪ್ರಕಾರ ಪಂದ್ಯ ಟೈ ಆದರೆ ನಂತರ ಸೂಪರ್ ಓವರ್ ಪಂದ್ಯವನ್ನು ಆಡಿಸಲಾಗುತ್ತದೆ. ಅದು ಕೂಡ ಟೈ ಆದರೆ ಫಲಿತಾಂಶ ಬರುವವರೆಗೆ ನಿರಂತರವಾಗಿ ಸೂಪರ್ ಓವರ್ ನಡೆಸಲಾಗುವುದು.
ಈ ಬಾರಿ ವಿಶ್ವಕಪ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಲವು ಮೈದಾನಗಳ ಪಿಚ್ ಕ್ಯುರೇಟರ್‌ಗಳಿಗೆ ‘ಪ್ರೊಟೊಕಾಲ್’ ಹೊರಡಿಸಿದೆ. ಅದರ ಪ್ರಕಾರ ವಿಶ್ವಕಪ್ ನಡೆಯುವ ಮೈದಾನಗಳಲ್ಲಿ ಹುಲ್ಲು ಮಿಶ್ರಿತ ಪಿಚ್‌ಗಳನ್ನು ಸಿದ್ದಪಡಿಸುವಂತೆ ಸೂಚನೆ ನೀಡಿದೆ. ಅಲ್ಲದೆ ಬೌಂಡರಿಯ ದೂರ 70 ಮೀಟರ್ ಗಿಂತ ಕಡಿಮೆ ಇರಬಾರದು ಎಂಬ ನಿಯಮ ಹೊರಡಿಸಿದೆ. ಈ ಹಿಂದೆ ನಡೆದ ವಿಶ್ವಕಪ್ನಲ್ಲಿ ಈ ರೀತಿಯ ಬೌಂಡರಿ ಗೆರೆಯ ಅಂತರದ ನಿಯಮವಿರಲಿಲ್ಲ.
ಐಸಿಸಿ ಈ ವರ್ಷದ ಜೂನ್‌ನಿಂದ ಸಾಫ್ಟ್ ಸಿಗ್ನಲ್ ನಿಯಮವನ್ನು ರದ್ದುಗೊಳಿಸಿದೆ. ಅಂದರೆ ಈ ಸಾಫ್ಟ್ ಸಿಗ್ನಲ್ ನಿಯಮ ಈ ಬಾರಿಯ ವಿಶ್ವಕಪ್ನಲ್ಲಿ ಕಾಣಿಸುವುದಿಲ್ಲ. ಸಾಫ್ಟ್ ಸಿಗ್ನಲ್ ನಿಯಮದ ಪ್ರಕಾರ, ಒಬ್ಬ ಬ್ಯಾಟರ್ ಔಟ್ ಅಥವಾ ನಾಟೌಟ್ ಎಂಬುದನ್ನು ಆನ್ಫೀಲ್ಡ್ ಅಂಪೈರ್‌ಗೆ ನಿಖರವಾಗಿ ಹೇಳಲು ಸಾಧ್ಯವಾಗದಿದ್ದಾಗ, ಆನ್‌ಫೀಲ್ಡ್ ಅಂಪೈರ್‌ಗಳು (ಫೀಲ್ಡ್‌ನಲ್ಲಿರುವವರು) ತಮ್ಮ ನಿರ್ಣಾಯ ಪ್ರಕಟಿಸಲು ಮೂರನೇ ಅಂಪೈರ್‌ನ ಸಹಾಯವನ್ನು ತೆಗೆದುಕೊಳ್ಳಬಹುದಾಗಿದೆ. ಆದರೆ ಇದಕ್ಕೂ ಮೊದಲು, ಬೌಲಿಂಗ್ ತುದಿಯಲ್ಲಿ ನಿಂತಿರುವ ಅಂಪೈರ್ ಇತರ ಅಂಪೈರ್‌ನೊಂದಿಗೆ ಸಮಾಲೋಚಿಸಿದ ನಂತರ ತನ್ನ ನಿರ್ಧಾರವನ್ನು (ಔಟ್ ಅಥವಾ ನಾಟೌಟ್) ನೀಡಬೇಕಾಗುತ್ತದೆ.
ಇದಾದ ನಂತರ ಅವರು ಸಾಫ್ಟ್ ಸಿಗ್ನಲ್ ನಿಯಮದ ಅಡಿಯಲ್ಲಿ ಮೂರನೇ ಅಂಪೈರ್ ಜೊತೆ ಮಾತನಾಡುತ್ತಾರೆ. ಇದರಲ್ಲಿ ಥರ್ಡ್ ಅಂಪೈರ್ ಆ ಸಂದರ್ಭದ ವಿಡಿಯೋ ತುಣುಕನ್ನು ವೀಕ್ಷಿಸುತ್ತಾರೆ. ಉದಾಹರಣೆಯೊಂದಿಗೆ ಹೇಳಬೇಕೆಂದರೆ, ಒಬ್ಬ ಫೀಲ್ಡರ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿದೆ ಎಂದಿಟ್ಟುಕೊಳ್ಳೋಣ. ಆ ಸಮಯದಲ್ಲಿ ಫೀಲ್ಡ್ ಅಂಪೈರ್, ಥರ್ಡ್ ಅಂಪೈರ್ ಬಳಿ ಈ ಬಗ್ಗೆ ಮನವಿ ಮಾಡುತ್ತಾರೆ. ಅದಕ್ಕೂ ಮುನ್ನ ಆನ್ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ (ಔಟ್ ಅಥವಾ ನಾಟೌಟ್). ನಂತರ ಮೂರನೇ ಅಂಪೈರ್ ಆ ಕ್ಯಾಚ್‌ನ ವಿಡಿಯೋ ತುಣುಕುಗಳನ್ನು ಕುಲಂಕುಶವಾಗಿ ಪರೀಕ್ಷಿಸುತ್ತಾರೆ. ಆದರೆ ಈ ಕ್ಯಾಚ್‌ನ ವೀಡಿಯೊ ತುಣುಕಿನಲ್ಲಿ ಮೂರನೇ ಅಂಪೈರ್‌ಗೆ ಸಾಕಷ್ಟು ಪುರಾವೆಗಳು ಸಿಗದಿದ್ದರೆ, ಆಗ ಆನ್‌ಫೀಲ್ಡ್ ಅಂಪೈರ್‌ಗಳು ನೀಡಿದ ನಿರ್ಧಾರವನ್ನೇ ಪುನರುಚ್ಚರಿಸುತ್ತಾರೆ. ಅಂದರೆ ಆನ್ಫೀಲ್ಡ್ ಅಂಪೈರ್ ನೀಡಿದ ತೀರ್ಪನೇ ಅಂತಿಮವಾಗಿ ಅವರು ಮರು ಪ್ರಕಟಿಸುತ್ತಾರೆ. ಈ ರೀತಿಯ ನಿರ್ಣಾಯ ಈ ಹಿಂದೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ಬಾರಿ ಈ ಸಾಫ್ಟ್ ಸಿಗ್ನಲ್ ನಿಯಮವನ್ನು ರದ್ದುಗೊಳಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Mon, 2 October 23