‘ಮೂರು ವಿಶ್ವಕಪ್‌ಗಳಲ್ಲೂ ಹೀಗೆ ಆಗಿದೆ’; ಬೇಸರ ಹೊರಹಾಕಿದ ಯುಜ್ವೇಂದ್ರ ಚಹಲ್‌

Yuzvendra Chahal: ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಆಯ್ಕೆಯಾದ 15 ಮಂದಿಯ ತಂಡದಲ್ಲಿಯೂ ಚಹಲ್ ಸ್ಥಾನ ಪಡೆದಿಲ್ಲ. 2021ರಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಚಹಲ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ನಂತರ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ತಂಡದಲ್ಲಿದ್ದರು, ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಇದೀಗ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಅವಕಾಶ ಗಿಟ್ಟಿಸಿಕೊಳ್ಳದ ಚಹಲ್​ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ.

‘ಮೂರು ವಿಶ್ವಕಪ್‌ಗಳಲ್ಲೂ ಹೀಗೆ ಆಗಿದೆ’; ಬೇಸರ ಹೊರಹಾಕಿದ ಯುಜ್ವೇಂದ್ರ ಚಹಲ್‌
ಯುಜ್ವೇಂದ್ರ ಚಹಲ್‌
Follow us
ಪೃಥ್ವಿಶಂಕರ
|

Updated on: Oct 02, 2023 | 8:59 AM

ಅಗಾದ ಪ್ರತಿಭೆಯ ನಡುವೆಯೂ ತಂಡದಿಂದ ನಿರ್ಲಕ್ಷಕ್ಕೊಳಗಾಗುತ್ತಿರುವ ಹಲವು ಟೀಂ ಇಂಡಿಯಾ (Team India) ಆಟಗಾರರ ಪೈಕಿ ಗೂಗ್ಲಿ ಮಾಸ್ಟರ್ ಯುಜ್ವೇಂದ್ರ ಚಹಲ್‌ (Yuzvendra Chahal) ಅಗ್ರಸ್ಥಾನದಲ್ಲಿ ಬಂದು ನಿಲ್ಲುತ್ತಾರೆ. ನಿರ್ಣಾಯಕ ಹಂತದಲ್ಲಿ ವಿಕೆಟ್ ತೆಗೆದುಕೊಡುವ ಸಾಮಥ್ಯ್ರವಿರುವ ಈ ಲೆಗ್ ಸ್ಪಿನ್ನರ್​ಗೆ ಭಾರತ ತಂಡದ ಬಾಗಿಲು ಮುಚ್ಚಿದೆ ಅಂತಲೇ ಹೇಳಲಾಗುತ್ತಿದೆ. ವಾಸ್ತವವಾಗಿ ಕೆಲವು ದಿನಗಳಿಂದ ಟೀಂ ಇಂಡಿಯಾದಿಂದ ಹೊರುಗಳಿದಿರುವ ಚಹಲ್​ಗೆ ಭಾರತ ವಿಶ್ವಕಪ್ (2023 ODI World Cup) ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅದಾಗ್ಯೂ ಚಹಲ್​ಗೆ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಯುಜ್ವೇಂದ್ರ ಚಹಲ್‌ಗೆ ವಿಶ್ವಕಪ್‌ ತಂಡದಲ್ಲಿ ಆಡುವ ಅವಕಾಶ ಕೈತಪ್ಪಿದೆ. ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಭಾರತಕ್ಕೆ ಆಯ್ಕೆಯಾದ 15 ಮಂದಿಯ ತಂಡದಲ್ಲಿಯೂ ಚಹಲ್ ಸ್ಥಾನ ಪಡೆದಿಲ್ಲ. 2021ರಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಚಹಲ್ ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ನಂತರ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ಗೆ (T20 World Cup) ತಂಡದಲ್ಲಿದ್ದರು, ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಇದೀಗ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಅವಕಾಶ ಗಿಟ್ಟಿಸಿಕೊಳ್ಳದ ಚಹಲ್​ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ.

ಮೂರು ವಿಶ್ವಕಪ್‌ಗಳು ನಡೆದಿದ್ದು ಹೀಗೆ

ಇತ್ತೀಚೆಗೆ ವಿಸ್ಡನ್‌ಗೆ ನೀಡಿದ ಸಂದರ್ಶನದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಮಾತನಾಡಿರುವ ಚಹಲ್, ‘ತಂಡದಲ್ಲಿ ಕೇವಲ 15 ಆಟಗಾರರಿಗೆ ಮಾತ್ರ ಅವಕಾಶ ಸಿಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ಇದು ವಿಶ್ವಕಪ್. 17 ಅಥವಾ 18 ಜನರನ್ನು ಕರೆದೊಯ್ಯಲು ಸಾಧ್ಯವಿಲ್ಲ. ಆದರೆ ಅವಕಾಶ ಸಿಗದಿರುವುದು ಬೇಸರ ತಂದಿದೆ. ಆದರೆ ಮುಂದೆ ಸಾಗುವುದು ನನ್ನ ಜೀವನದ ಮುಖ್ಯ ಮಂತ್ರ. ಮತ್ತು ಇದು ನನಗೆ ಒಗ್ಗಿಕೊಂಡಿರುವುದು. ಮೂರು ವಿಶ್ವಕಪ್‌ಗಳು ನಡೆದಿದ್ದು ಹೀಗೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಚಹಲ್ ಚಮತ್ಕಾರ; ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದ ಗೂಗ್ಲಿ ಮಾಸ್ಟರ್

ಭಾರತ ಟೆಸ್ಟ್ ತಂಡದಲ್ಲಿ ಆಡುವ ಆಸೆ

ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬಳಿಕ ಟೆಸ್ಟ್ ಕ್ರಿಕೆಟ್​ನತ್ತ ಹೆಚ್ಚು ಒಲವು ತೋರಿರುವ ಚಹಲ್, ಕೆಂಪು ಚೆಂಡನ್ನು ಆಡಿದ ಅನುಭವವನ್ನು ಪಡೆಯಲು ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಕೆಂಟ್ ತಂಡವನ್ನು ಪ್ರತಿನಿಧಿಸಿದ್ದ ಚಹಲ್ ಗಮನಾರ್ಹ ಪ್ರದರ್ಶನ ಕೂಡ ನೀಡಿದ್ದರು. ಅಲ್ಲದೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಆಸೆಯನ್ನೂ ಸಹ ಚಹಲ್ ವ್ಯಕ್ತಪಡಿಸಿದ್ದಾರೆ. ‘ಎಲ್ಲೋ ಕ್ರಿಕೆಟ್ ಆಡಬೇಕೆಂಬ ಆಸೆಯಿಂದ ಕೆಂಟ್‌ನಲ್ಲಿ ಆಡುತ್ತಿದ್ದೇನೆ. ಇಲ್ಲಿ ನನಗೆ ಕೆಂಪು ಚೆಂಡನ್ನು ಆಡುವ ಅವಕಾಶ ಸಿಗುತ್ತದೆ. ನಾನು ನಿಜವಾಗಿಯೂ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ. ಹಾಗಾಗಿ ಈ ಅನುಭವ ಉಪಯುಕ್ತವಾಗಲಿದೆ’ ಎಂದರು.

ಆಗ ಮಾತ್ರ ತಂಡಕ್ಕೆ ಮರಳುತ್ತೇನೆ

ಭಾರತ ತಂಡದಲ್ಲಿ ಸ್ಪಿನ್ ವಿಭಾಗದಲ್ಲಿ ಸ್ಥಾನ ಪಡೆಯಲು ಚಹಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಜೊತೆ ಪೈಪೋಟಿ ನಡೆಸಬೇಕಾಗಿದೆ. ಹೀಗಾಗಿ ತಂಡದಲ್ಲಿರುವ ಇತರ ಸ್ಪಿನ್ನರ್‌ಗಳ ಜತೆಗಿನ ಪೈಪೋಟಿ ಕುರಿತು ಮಾತನಾಡಿದ ಚಹಲ್, ‘ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಏಕೆಂದರೆ ನಾನು ಉತ್ತಮ ಪ್ರದರ್ಶನ ನೀಡಿದರೆ ನಾನು ತಂಡದಲ್ಲಿ ಆಡುತ್ತೇನೆ ಎಂದು ನನಗೆ ತಿಳಿದಿದೆ. ಭವಿಷ್ಯದಲ್ಲಿ ನನ್ನ ಸ್ಥಾನವನ್ನು ಬೇರೆಯವರು ಪಡೆದುಕೊಳ್ಳಬಹುದು. ನಾನು ಇನ್ನೂ ಹೆಚ್ಚು ಕೆಲಸ ಮಾಡಬೇಕು, ಆಗ ಮಾತ್ರ ತಂಡಕ್ಕೆ ಮರಳುತ್ತೇನೆ ಎಂದು ಯಾವಾಗಲೂ ಹೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ