GSL 2024: 5 ವಿದೇಶಿ ತಂಡಗಳು, 11 ಮ್ಯಾಚ್​ಗಳು: ಇದು ವಿಶ್ವ ಟಿ20 ಲೀಗ್

|

Updated on: Oct 08, 2024 | 11:38 AM

Global Super League: ಬಿಸಿಸಿಐ ಈ ಹಿಂದೆ ಚಾಂಪಿಯನ್ಸ್ ಲೀಗ್ ಹೆಸರಿನಲ್ಲಿ ವಿಶ್ವದ ಪ್ರಮುಖ ಫ್ರಾಂಚೈಸಿ ತಂಡಗಳನ್ನು ಒಂದೆಡೆ ಸೇರಿಸಿತ್ತು. ಇದೀಗ ಇದೇ ಮಾದರಿಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಗ್ಲೋಬಲ್ ಸೂಪರ್ ಲೀಗ್ ಆಯೋಜಿಸಲು ಮುಂದಾಗಿದೆ. ಹೀಗಾಗಿ ಗ್ಲೋಬಲ್ ಟಿ20 ಲೀಗ್​ ಮುಂಬರುವ ದಿನಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದರೂ ಅಚ್ಚರಿಪಡಬೇಕಿಲ್ಲ.

GSL 2024: 5 ವಿದೇಶಿ ತಂಡಗಳು, 11 ಮ್ಯಾಚ್​ಗಳು: ಇದು ವಿಶ್ವ ಟಿ20 ಲೀಗ್
Global Super League
Follow us on

ಟಿ20 ಕ್ರಿಕೆಟ್​ಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗಿದೆ. ಗ್ಲೋಬಲ್ ಸೂಪರ್ ಲೀಗ್​ ಹೆಸರಿನಲ್ಲಿ ಮೂಡಿಬರಲಿರುವ ಈ ಫ್ರಾಂಚೈಸಿ ಲೀಗ್​ನಲ್ಲಿ ವಿಶ್ವದ 5 ತಂಡಗಳು ಕಣಕ್ಕಿಳಿಯಲಿರುವುದು ವಿಶೇಷ. ಅಂದರೆ ಬೇರೆ ದೇಶಗಳ ಫ್ರಾಂಚೈಸಿ ತಂಡಗಳನ್ನು ಒಂದೆಡೆ ಸೇರಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.

8 ಕೋಟಿ ರೂ. ಬಹುಮಾನ ಮೊತ್ತ:

ಗಯಾನಾದಲ್ಲಿ ನಡೆಯಲಿರುವ ಗ್ಲೋಬಲ್ ಸೂಪರ್ ಲೀಗ್​ನ ಬಹುಮಾನ ಮೊತ್ತವಾಗಿ 1 ಮಿಲಿಯನ್ ಯುಎಸ್​ ಡಾಲರ್ ನೀಡಲಾಗುತ್ತದೆ. ಅಂದರೆ ಭಾರತೀಯ ಮೌಲ್ಯ ಸುಮಾರು 8 ಕೋಟಿ ರೂ.

ಗ್ಲೋಬಲ್ ಟಿ20 ಲೀಗ್ ಯಾವಾಗ ಶುರು?

ಈ ಹೊಸ ಟೂರ್ನಿಯು ನವೆಂಬರ್ 26 ರಿಂದ ಡಿಸೆಂಬರ್ 7 ರವರೆಗೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಗಯಾನಾ ಸರ್ಕಾರ ಅನುಮೋದನೆ ನೀಡಿದ್ದು, ಅದರಂತೆ ಚೊಚ್ಚಲ ಗ್ಲೋಬಲ್ ಟಿ20 ಟೂರ್ನಿಗೆ ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂ ಆತಿಥ್ಯವಹಿಸುವ ಸಾಧ್ಯತೆಯಿದೆ.

ಯಾವೆಲ್ಲಾ ತಂಡಗಳು ಕಣಕ್ಕೆ?

ಗ್ಲೋಬಲ್ ಸೂಪರ್ ಲೀಗ್‌ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಿಂದ ಗಯಾನಾ ಅಮೆಝಾನ್ ವಾರಿಯರ್ಸ್ ಕಣಕ್ಕಿಳಿಯುವುದು ಖಚಿತವಾಗಿದೆ.
ಹಾಗೆಯೇ ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಚಾಂಪಿಯನ್ ತಂಡ ಹ್ಯಾಂಪ್‌ಶೈರ್‌ಗೆ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಇನ್ನು ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಿಂದ ಒಂದು ತಂಡ ಆಯ್ಕೆಯಾಗಲಿದೆ ಎಂದು ತಿಳಿದು ಬಂದಿದೆ. ಇನ್ನುಳಿದ ಎರಡು ತಂಡಗಳಾವುವು ಎಂಬುದು ಇನ್ನಷ್ಟೇ ನಿರ್ಧಾರವಾಗಲಿದೆ.

5 ತಂಡಗಳು 11 ಪಂದ್ಯಗಳು:

ಗ್ಲೋಬಲ್ ಸೂಪರ್ ಲೀಗ್​ನ ಮೊದಲ ಸೀಸನ್​ನಲ್ಲಿ ಒಟ್ಟು 5 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳ ನಡುವೆ ಒಟ್ಟು 11 ಮ್ಯಾಚ್​ಗಳು ನಡೆಯಲಿದೆ. ಅಂದರೆ ಇಲ್ಲಿ ಮೊದಲ ಸುತ್ತಿನಲ್ಲಿ 10 ಪಂದ್ಯಗಳು ಜರುಗಲಿದ್ದು, ಈ ವೇಳೆ ಅತ್ಯಧಿಕ ಅಂಕಗಳನ್ನು ಪಡೆದ ಮೊದಲೆರಡು ತಂಡಗಳು ಫೈನಲ್ ಆಡಲಿವೆ.

ಚಾಂಪಿಯನ್ಸ್​ ಲೀಗ್​ಗೆ ಪರ್ಯಾಯ?

ಈ ಹಿಂದೆ ಬಿಸಿಸಿಐ ವಿಶ್ವದ ಪ್ರಮುಖ ಲೀಗ್​ಗಳ ಚಾಂಪಿಯನ್​ ತಂಡಗಳನ್ನು ಒಳಗೊಂಡಂತೆ ಚಾಂಪಿಯನ್ಸ್ ಲೀಗ್ ಅನ್ನು ಆಯೋಜಿಸಿತ್ತು. 2009-10 ರಿಂದ 2014-15 ರವರೆಗೆ ನಡೆದಿದ್ದ ಈ ಟೂರ್ನಿಯಲ್ಲಿ ಐಪಿಎಲ್​ನ ಮೂರು ತಂಡಗಳು, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಲೀಗ್​ನಿಂದ ತಲಾ ಎರಡು ತಂಡಗಳು ಹಾಗೂ ಪಾಕಿಸ್ತಾನ್, ವೆಸ್ಟ್ ಇಂಡೀಸ್ ಮತ್ತು ನ್ಯೂಝಿಲೆಂಡ್​ನ ಟಿ20 ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ತಂಡಗಳು ಕಣಕ್ಕಿಳಿದಿದ್ದವು.

ಇದನ್ನೂ ಓದಿ: ಕೊನೆಗೂ ಕಪ್ ಗೆದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ..!

ಇದೀಗ ಇದೇ ಮಾದರಿಯಲ್ಲಿ ಗ್ಲೋಬಲ್ ಟಿ20 ಲೀಗ್ ಆಯೋಜಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಚೊಚ್ಚಲ ಗ್ಲೋಬಲ್ ಸೂಪರ್ ಲೀಗ್ ಯಶಸ್ವಿಯಾದರೆ, ಚಾಂಪಿಯನ್ಸ್ ಲೀಗ್​ಗೆ ಪರ್ಯಾಯವಾಗಿ ಹೊಸ ಲೀಗ್ ಮುಂದುವರೆಯಲಿದೆ.