ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು. ಅದರಲ್ಲೂ ಎರಡು ತಂಡಗಳನ್ನು ಹೊಂದಿರುವ ಕಿಂಗ್ಸ್ ಫ್ರಾಂಚೈಸಿಗೆ ಕಪ್ ಎಂಬುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ 12ನೇ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವದ ಸೇಂಟ್ ಲೂಸಿಯಾ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಮತ್ತು ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರಹಮಾನುಲ್ಲಾ ಗುರ್ಬಾಝ್ (0) ಶೂನ್ಯಕ್ಕೆ ಔಟಾದರೆ, ಮೊಯೀನ್ ಅಲಿ 14 ರನ್ಗಳಿಸಿ ಔಟಾದರು.
ಆ ಬಳಿಕ ಬಂದ ಶಾಯ್ ಹೋಪ್ 22 ರನ್ ಬಾರಿಸಿದರೆ, ರೊಮಾರಿಯೊ ಶೆಫರ್ಡ್ 19 ರನ್ಗಳ ಕೊಡುಗೆ ನೀಡಿದರು. ಇನ್ನು 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡ್ವೈನ್ ಪ್ರಿಟೋರಿಯಸ್ 25 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್. ಈ ಮೂಲಕ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಕಲೆಹಾಕಿತು.
139 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ (21) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬಂದಿರಲಿಲ್ಲ. ಪರಿಣಾಮ 51 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆಗೂಡಿದ ರೋಸ್ಟನ್ ಚೇಸ್ ಹಾಗೂ ಆರೋನ್ ಜೋನ್ಸ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 22 ಎಸೆತಗಳನ್ನು ಎದುರಿಸಿದ ರೋಸ್ಟನ್ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 39 ರನ್ ಬಾರಿಸಿದರೆ, ಜೋನ್ಸ್ 31 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ನೊಂದಿಗೆ ಅಜೇಯ 48 ರನ್ ಸಿಡಿಸಿದರು. ಈ ಮೂಲಕ 18.1 ಓವರ್ಗಳಲ್ಲಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.
ಈ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ 17 ವರ್ಷಗಳಿಂದ ಟ್ರೋಫಿ ಗೆದ್ದಿಲ್ಲವೆಂಬ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಕೊರಗು ಕೂಡ ನೀಗಿದೆ.
Published On - 11:17 am, Mon, 7 October 24