ಭವಿಷ್ಯದ ಬ್ಯಾಟಿಂಗ್ ಸೂಪರ್ ಸ್ಟಾರ್: ಕ್ರಿಕೆಟ್ ದೇವರನ್ನೇ ಇಂಪ್ರೆಸ್ ಮಾಡಿರುವ 5 ವರ್ಷದ ಶಾಹಿದ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 13, 2022 | 6:21 AM

2019 ರಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಮೆಂಟ್ ವೀಕ್ಷಿಸುತ್ತಿದ್ದ 2 ವರ್ಷ ಶಾಹಿದ್ ವಿರಾಟ್ ಕೊಹ್ಲಿಯನ್ನು ಅನುಕರಿಸುತ್ತಿದ್ದ. ಕ್ರಿಕೆಟ್ ಪಂದ್ಯ ನಡೆಯುವಾಗ ಅವನು ಟಿವಿ ಮುಂದೆ ಕೂತುಬಿಟ್ಟರೆ ಏಳುವ ಮಾತೇ ಇರಲ್ಲ ಅಂತ ಅವನ ತಂದೆ ಹೇಳುತ್ತಾರೆ.

ಭವಿಷ್ಯದ ಬ್ಯಾಟಿಂಗ್ ಸೂಪರ್ ಸ್ಟಾರ್: ಕ್ರಿಕೆಟ್ ದೇವರನ್ನೇ ಇಂಪ್ರೆಸ್ ಮಾಡಿರುವ 5 ವರ್ಷದ ಶಾಹಿದ್
ಸಚಿನ್​ ತೆಂಡೂಲ್ಕರ್ ಶಾಹಿದ್ ಜೊತೆ ತಮ್ಮ ಅಕಾಡೆಮಿಯಲ್ಲಿ
Follow us on

ಕೊಲ್ಕತಾ ನಗರ ಬಹಳಷ್ಟು ವಿಷಯಗಳಿಗೆ ಖ್ಯಾತಿ ಹೊಂದಿರಬಹುದು. ಆದರೆ ನಗರದ ಬೆಹಲಾ (Behela) ಪ್ರದೇಶ ಮುಚಿಪಾರಾ ಹೆಸರಿನ ಏರಿಯಾ ಕೇವಲ ಒಬ್ಬ 5 ವರ್ಷದ ಬಾಲಕ ಕ್ರಿಕೆಟ್ ಪ್ರತಿಭೆಯಿಂದಾಗಿ (cricketing talent) ಹೆಸರುವಾಸಿಯಾಗುತ್ತಿದೆ ಅಂತ ಹೇಳಿದರೆ ನಂಬುತ್ತೀರಾ? ಶೇಖ್ ಶಾಹಿದ್ (Shaikh Shahid) ಹೆಸರು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಸ್ಟೀವ್ ವಾ, ಕೆವಿನ್ ಪೀಟರ್ಸನ್ ಮೊದಲದ ಲೆಜೆಂಡರಿ ಕ್ರಿಕೆಟ್ ಆಟಗಾರರಿಗೆ ಶಾಹಿದ್ ಕುರಿತು ಕೇಳಿ ನೋಡಿ. ಅವನು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಅವರು ನಿಮಗೆ ತೋರಿಸುತ್ತಾರೆ.

ಹೌದು, ಅವನ ವಯಸ್ಸು ಕೇವಲ 5, ಆದರೆ ಕ್ರಿಕೆಟ್ ಬ್ಯಾಟನ್ನು ಅವನ ಕೈಗೆ ಕೊಟ್ಟರೆ, ಕ್ರಿಕೆಟ್ ದೇವರು ಅಂತ ಕರೆಸಿಕೊಳ್ಳುವ ತೆಂಡೂಲ್ಕರ್ ಅವರೇ ನಿಬ್ಬೆರಗಾಗುವ ಹೊಡೆತಗಳನ್ನು ಬಾರಿಸುತ್ತಾನೆ. ಸ್ಟ್ರೇಟ್ ಡ್ರೈವ್, ಕವರ್ ಡ್ರೈವ್, ಅನ್ ಡ್ರೈವ್, ಲಾಫ್ಟೆಡ್ ಶಾಟ್, ಫ್ಲಿಕ್-ನೀವು ಅಂದುಕೊಳ್ಳುವ ಯಾವುದೇ ಹೊಡೆತವನ್ನು ಅವನಿಗೆ ಹೇಳಿ, ಒಬ್ಬ ನುರಿತ ಬ್ಯಾಟರ್ ನಂತೆ ಅವನು ಬಾರಿಸಿ ತೋರಿಸುತ್ತಾನೆ.

ಶಾಹಿದ್ ಬ್ಯಾಟಿಂಗ್ ಮಾಡುವ ವಿಡಿಯೋ ನೋಡಿ ತೆಂಡೂಲ್ಕರ್ ಅದೆಷ್ಟು ಇಂಪ್ರೆಸ್ ಆಗಿದ್ದರೆಂದರೆ ಅವನನ್ನು ಕೊಲ್ಕತಾದ ಬೆಹಲಾದಿಂದ ಮುಂಬೈನಲ್ಲಿರುವ ತಮ್ಮ ತೆಂಡೂಲ್ಕರ್ ಮಿಡ್ಲ್ಸೆಕ್ಸ್ ಗ್ಲೋಬಲ್ ಅಕಾಡೆಮಿಗೆ (ಟಿ ಎಮ್ ಜಿ ಎ) ಕರೆಸಿ ಅವನೊಂದಿಗೆ 5 ದಿನ ಕಳೆದಿದ್ದಾರೆ. ಅವನು ಹೋಗಿ ಬರುವ ಖರ್ಚು, ವಸತಿ-ಊಟ, ಬಟ್ಟೆ ಎಲ್ಲವನ್ನೂ ಮೇಸ್ಟ್ರೋ ಭರಿಸಿದ್ದಾರೆ.

ಟಿ ಎಮ್ ಜಿ ಎ ನಲ್ಲಿ ಶಾಹಿದ್ ಸಚಿನ್ ಸಮ್ಮುಖದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ಈ ವಿಡಿಯೋನಲ್ಲಿ ನೀವು ನೋಡಬಹುದು.

ಹಾಗೆ ನೋಡಿದರೆ ಶಾಹಿದ್ ಬಗ್ಗೆ ಜನರಿಗೆ ಗೊತ್ತಾಗಿದ್ದು ಇಂಗ್ಲೆಂಡ್ ಮಾಜಿ ಗ್ರೇಟ್ ಬ್ಯಾಟರ್ ಕೆವಿನ್ ಪೀಟರ್ಸನ್ ಮೂಲಕ ಇರಬಹುದು. ಅವರು ಎರಡು ವರ್ಷಗಳ ಹಿಂದೆ ಅಂದರೆ ಶಾಹಿದ್ ಮೂರು ವರ್ಷದವನಾಗಿದ್ದಾಗ ಡಯಾಪರ್ ಧರಿಸಿ, ಕೈಗೆ ಗ್ಲೌಸ್ ಹಾಕಿಕೊಂಡು ತನ್ನ ಪ್ಲಾಸ್ಟಿಕ್ ಬ್ಯಾಟ್ ನಿಂದ ನಂಬಲಸದಳ ಹೊಡೆತಗಳನ್ನು ಬಾರಿಸುತ್ತಿದ್ದ ವಿಡಿಯೋವನ್ನು ಸಂಗ್ರಹಿಸಿ ಬಿಟ್ಟಿದ್ದರು.

ಅದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅವರು ಪೋಸ್ಟ್ ಮಾಡಿದ ಬಳಿಕ ನೋಡಿದ ಕೊಹ್ಲಿ, ಮೈಕೆಲ್ ವಾನ್ ಇನ್ನೂ ಹಲವಾರು ಹಾಲಿ ಮತ್ತು ಮಾಜಿ ಆಟಗಾರರು ಅವನನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಕೆವಿನ್ ಅವರು ಕೊಹ್ಲಿಯೊಂದಿಗೆ ವಿಡಿಯೋವನ್ನು ಶೇರ್ ಮಾಡಿ, ನಿಮ್ಮ ಟೀಮಿಗೆ ಈ ಹುಡುಗನನ್ನು ಸೇರಿಸಿಕೊಳ್ಳಿ ಅಂತ ಹೇಳಿದ್ದರು.

ವಿಡಿಯೋವನ್ನು ನೋಡಿದ ಬಳಿಕ ಕೊಹ್ಲಿ ನಂಬಲಸಾಧ್ಯ ಪ್ರತಿಭೆ ಎಂದು ಉದ್ಗರಿಸಿ ಅವನೆಲ್ಲಿರುತ್ತಾನೆ ಅಂತ ಕೇಳಿದರಂತೆ.

2020 ರಲ್ಲೇ ತಮ್ಮ ಪುಸ್ತಕದ ಲಾಂಚ್ ನಿಮಿತ್ತ ಕೊಲ್ಕತಾಗೆ ಆಗಮಿಸಿದ್ದ ಸ್ಟೀವ್ ಶಾಹಿದ್ ನನ್ನು ಹುಡುಕಿಕೊಂಡು ಹೋಗಿ ಅವನ ಕೈಗೆ ಬ್ಯಾಟ್ ನೀಡಿ ಅವನು ಬಾರಿಸಿದ ಹೊಡೆಗಳನ್ನು ವಿಡಿಯೋ ಮಾಡಿಕೊಂಡರಂತೆ. ನಂತರ ಅವನ ತಂದೆ ಶೇಖ್ ಶಂಶೇರ್ ಜೊತೆ ಮಾತಾಡಿ ಶಾಹಿದ್ ಫೋಟೋಗಳನ್ನು ತಮ್ಮ ಮುಂದಿನ ಪುಸ್ತಕದಲ್ಲಿ ಬಳಸಿಕೊಳ್ಳುವುದಾಗಿ ಹೇಳಿದರಂತೆ.

2019 ರಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಮೆಂಟ್ ವೀಕ್ಷಿಸುತ್ತಿದ್ದ 2 ವರ್ಷ ಶಾಹಿದ್ ವಿರಾಟ್ ಕೊಹ್ಲಿಯನ್ನು ಅನುಕರಿಸುತ್ತಿದ್ದ. ಕ್ರಿಕೆಟ್ ಪಂದ್ಯ ನಡೆಯುವಾಗ ಅವನು ಟಿವಿ ಮುಂದೆ ಕೂತುಬಿಟ್ಟರೆ ಏಳುವ ಮಾತೇ ಇರಲ್ಲ ಅಂತ ಅವನ ತಂದೆ ಹೇಳುತ್ತಾರೆ.

ಶಂಶೇರ್ ಒಂದು ಕ್ಷೌರಿಕ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಆದಾಯ ಮನೆ ನಡೆಸಲು ಸಾಕಾಗುವಿದಿಲ್ಲವಾದರೂ, ತನ್ನ ಮಗನ ಉಜ್ವಲ ಭವಿಷ್ಯದ ಬಗ್ಗೆ ಆಶಾಭಾವನೆ ತಳೆದಿದ್ದಾರೆ.

ಶಾಹಿದ್ ಪ್ರತಿಭೆಯಿಂದ ಪ್ರಭಾವಕ್ಕೊಳಗಾದವರಲ್ಲಿ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹ ಒಬ್ಬರು. ಅವರ ಸಹೋದರ ಸ್ನೇಹಶೀಷ್ ಗಂಗೂಲಿ ಕೊಲ್ಕತಾದಲ್ಲಿ ಒಂದು ಕ್ರಿಕೆಟ್ ಅಕ್ಯಾಡೆಮಿ ನಡೆಸುತ್ತಾರೆ. ಸೌರವ್, ಶಾಹಿದ್ ನನ್ನು ಈ ಅಕಾಡೆಮಿಗೆ ಸೇರಿಸಿದ್ದಾರೆ.

ಗಂಗೂಲಿ ಅಕ್ಯಾಡೆಮಿಯಲ್ಲಿರುವ ಕೋಚ್ ಅಮಿತ್ ಚಕ್ರವರ್ತಿ ಶಾಹಿದ್ ಬಗ್ಗೆ ಏನು ಹೇಳುತ್ತಾರೆ ಅಂತ ಈ ವಿಡಿಯೋ ನೋಡಿ ಕೇಳಿಸಿಕೊಳ್ಳಿ.

ನಿಸ್ಸಂದೇಹವಾಗಿ ಭಾರತಕ್ಕೆ ಮುಂದಿನ ಬ್ಯಾಟಿಂಗ್ ಸೂಪರರ್ ಸ್ಟಾರ್ ಸಿಕ್ಕುಬಿಟ್ಟಿದ್ದಾನೆ!!

ಇದನ್ನೂ ಓದಿ:  ಭಾರತ ವನಿತಾ ಕ್ರಿಕೆಟ್ ತಂಡದಲ್ಲಿ ನಿಮ್ಮ ನೆಚ್ಚಿನ ಆಟಗಾರ್ತಿ ಯಾರು? ಟಿವಿ9 ಕನ್ನಡ ಡಿಜಿಟಲ್ ಸರ್ವೆಯಲ್ಲಿ ಬಂದ ಉತ್ತರವೇನು?