
ಐಪಿಎಲ್ ಸೀಸನ್ 15 ನಲ್ಲಿ (IPL 2022) ನಿರಾಶದಾಯಕ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಂಬರುವ ಸೀಸನ್ಗಾಗಿ ಬಲಿಷ್ಠ ತಂಡವನ್ನು ರೂಪಿಸಿಕೊಳ್ಳಬೇಕಿದೆ. ಏಕೆಂದರೆ ಪ್ರಸ್ತುತ ತಂಡದಲ್ಲಿ ಕೇವಲ 22 ಆಟಗಾರರಿದ್ದು, ಇವರಲ್ಲಿ ಅನಾನುಭವಿ ಆಟಗಾರರೇ ಹೆಚ್ಚು. ಆದರೆ ಮತ್ತೊಂದೆಡೆ ಮೆಗಾ ಹರಾಜಿನಲ್ಲಿ ಕೆಲ ಆಟಗಾರರನ್ನು ದುಬಾರಿ ಮೊತ್ತ ನೀಡಿ ಖರೀದಿಸಿದ್ದು, ಆರ್ಸಿಬಿ ಪಾಲಿಗೆ ಮುಳುವಾಗಿತ್ತು. ಇದೀಗ ಈ ತಪ್ಪುಗಳನ್ನು ಸರಿಪಡಿಸಲು ಆರ್ಸಿಬಿ ಮುಂದಾಗಲಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ (Aakash Chopra) ಅಭಿಪ್ರಾಯಪಟ್ಟಿದ್ದಾರೆ.
ಅದರಂತೆ ಆರ್ಸಿಬಿ ತಂಡವು ಐಪಿಎಲ್ 2023ರ (IPL 2023) ಹರಾಜಿಗೂ ಮುನ್ನ ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತ ಎಂದಿದ್ದಾರೆ. ಏಕೆಂದರೆ ಈ ಬಾರಿ ಆರ್ಸಿಬಿ ತಂಡವು ಸಿರಾಜ್ ಅವರನ್ನು ಬರೋಬ್ಬರಿ 7 ಕೋಟಿ ನೀಡಿ ರಿಟೈನ್ ಮಾಡಿಕೊಂಡಿತು. ಆದರೆ 15 ಪಂದ್ಯಗಳಲ್ಲಿ ಸಿರಾಜ್ ಪಡೆದಿದ್ದು ಕೇವಲ 9 ವಿಕೆಟ್ ಮಾತ್ರ. ಅಷ್ಟೇ ಅಲ್ಲದೆ 10. 07 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಸಿರಾಜ್ ಅವರನ್ನು ಆರ್ಸಿಬಿ ಬಿಡುಗಡೆ ಮಾಡಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ತಂಡದಲ್ಲಿ ಜೋಶ್ ಹ್ಯಾಝಲ್ವುಡ್ ಹಾಗೂ ಹರ್ಷಲ್ ಪಟೇಲ್ ಪ್ರಮುಖ ಬೌಲರ್ ಆಗಿ ಯಶಸ್ಸು ಸಾಧಿಸಿದ್ದಾರೆ. ಇನ್ನು ಆಕಾಶ್ ದೀಪ್ ಕೂಡ ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಹೀಗಾಗಿ 7 ಕೋಟಿ ಹೊಂದಿರುವ ಸಿರಾಜ್ ಅವರನ್ನು ಆರ್ಸಿಬಿ ಬಿಡುಗಡೆ ಮಾಡಿ ಹರಾಜಿಗಾಗಿ ಪರ್ಸ್ ಮೊತ್ತವನ್ನು ಹೆಚ್ಚಿಸಲಿದೆ. ಹಾಗೆಯೇ ಕಡಿಮೆ ಮೊತ್ತ ನೀಡಿ ಸಿರಾಜ್ ಅವರನ್ನು ಆರ್ಸಿಬಿ ತಂಡ ಮತ್ತೆ ಖರೀದಿಸುವ ಸಾಧ್ಯತೆಯನ್ನೂ ಕೂಡ ತಳ್ಳಿಹಾಕುವಂತಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಸಿರಾಜ್ ಹೊರತುಪಡಿಸಿ, ಅನೂಜ್ ರಾವತ್ ಕೂಡ ತಂಡದಿಂದ ಹೊರಬೀಳಲಿದ್ದಾರೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ತಂಡದಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಇದ್ದಾರೆ. ಇತ್ತ ಬರೋಬ್ಬರಿ 3.4 ಕೋಟಿ ರೂ.ಗೆ ಖರೀದಿಸಿದ ಅನೂಜ್ ರಾವತ್ ಈ ಬಾರಿ ಕಳಪೆ ಪ್ರದರ್ಶನ ನೀಡಿದ್ದರು. 8 ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದ್ದ ಅನೂಜ್ ರಾವತ್ ಕಲೆಹಾಕಿದ್ದು ಕೇವಲ 118 ರನ್ ಮಾತ್ರ. ಹೀಗಾಗಿ ಆರ್ಸಿಬಿ ರಾವತ್ ಅವರನ್ನು ಉಳಿಸಿಕೊಳ್ಳುವುದಿಲ್ಲ.
ಏಕೆಂದರೆ ಮೊಹಮ್ಮದ್ ಸಿರಾಜ್ ಹಾಗೂ ಅನೂಜ್ ರಾವತ್ ಅವರನ್ನು ಬಿಡುಗಡೆ ಮಾಡುವುದರಿಂದ ಆರ್ಸಿಬಿ ಹರಾಜಿಗಾಗಿ 10 ಕೋಟಿಗೂ ಅಧಿಕ ಮೊತ್ತವನ್ನು ರೂಪಿಸಬಹುದು. ಹೀಗಾಗಿ ಈ ಇಬ್ಬರನ್ನು ಆರ್ಸಿಬಿ ಉಳಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಇದರ ಹೊರತಾಗಿ ಡೇವಿಡ್ ವಿಲ್ಲಿ, ಶೆರ್ಫಾನ್ ರುದರ್‌ಫೋರ್ಡ್ ಅವರನ್ನು ಕೂಡ ಆರ್ಸಿಬಿ ಫ್ರಾಂಚೈಸಿ ಹರಾಜಿಗೂ ಮುನ್ನ ಕೈ ಬಿಡುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಮುಂಬರುವ ಹರಾಜಿಗೂ ಮುನ್ನ ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, 22 ಆಟಗಾರರಿಂದ ಯಾರೆಲ್ಲಾ ಹೊರಬೀಳಲಿದ್ದಾರೆ? ಯಾರು ರಿಟೈನ್ ಆಗಲಿದ್ದಾರೆ ಕಾದು ನೋಡಬೇಕಿದೆ.
ಆರ್ಸಿಬಿ ತಂಡ ಹೀಗಿದೆ (RCB Squad): ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.