AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WCL 2025: 39 ಎಸೆತಗಳಲ್ಲಿ ಸ್ಫೋಟಕ ಶತಕ; ಆಸೀಸ್ ಬೌಲರ್‌ಗಳ ಹೆಡೆಮುರಿ ಕಟ್ಟಿದ ಎಬಿ ಡಿವಿಲಿಯರ್ಸ್

AB de Villiers Blasts Two Centuries: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಆಸ್ಟ್ರೇಲಿಯಾ ವಿರುದ್ಧ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ಅವರು ತಮ್ಮದೇ ಆದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಮುರಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 116 ರನ್ ಗಳಿಸಿದ್ದ ಡಿವಿಲಿಯರ್ಸ್, ಈ ಪಂದ್ಯದಲ್ಲಿ 123 ರನ್‌ಗಳನ್ನು ಗಳಿಸಿದರು. ಈ ಸ್ಫೋಟಕ ಆಟದ ಮೂಲಕ ದಕ್ಷಿಣ ಆಫ್ರಿಕಾ ತಂಡ 241 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.

WCL 2025: 39 ಎಸೆತಗಳಲ್ಲಿ ಸ್ಫೋಟಕ ಶತಕ; ಆಸೀಸ್ ಬೌಲರ್‌ಗಳ ಹೆಡೆಮುರಿ ಕಟ್ಟಿದ ಎಬಿ ಡಿವಿಲಿಯರ್ಸ್
Ab De Villiers
ಪೃಥ್ವಿಶಂಕರ
|

Updated on: Jul 27, 2025 | 8:25 PM

Share

ಸುಮಾರು 4 ವರ್ಷಗಳ ಹಿಂದೆಯೇ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ (AB de Villiers) ಅಂತರರಾಷ್ಟ್ರೀಯ ಮತ್ತು ಫ್ರಾಂಚೈಸಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಎಬಿಡಿ ಆಟದಿಂದ ದೂರವಾಗಿದ್ದರೂ, ತನ್ನ ಆಟದ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ತಮ್ಮ ವೃತ್ತಿಜೀವನದುದ್ದಕ್ಕೂ ಬೌಲರ್‌ಗಳನ್ನು ದಂಡಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಡಿವಿಲಿಯರ್ಸ್, ಇದೀಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ( World Championship of Legends 2025) ಟೂರ್ನಮೆಂಟ್‌ನಲ್ಲಿಯೂ ಮುಂದುವರೆಸಿದ್ದಾರೆ. ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಡಿವಿಲಿಯರ್ಸ್, ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಡಿವಿಲಿಯರ್ಸ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಈ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಡಿವಿಲಿಯರ್ಸ್, ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಈ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು. ಹೀಗಾಗಿ ಆರಂಭಿಕನಾಗಿ ಬಂದ ನಾಯಕ ಡಿವಿಲಿಯರ್ಸ್ ತಮ್ಮ ಹೊಡಿಬಡಿ ಆಟದ ಮೂಲಕ ಆಸೀಸ್ ಬೌಲರ್​ಗಳ ಬೆವರಿಳಿಸಿದರು.

ಕೇವಲ 39 ಎಸೆತಗಳಲ್ಲಿ ಶತಕ

ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ಚಾಂಪಿಯನ್ಸ್ ವಿರುದ್ಧದಲ್ಲಿಯೂ ಡಿವಿಲಿಯರ್ಸ್ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ವೇಳೆ ಡಿವಿಲಿಯರ್ಸ್ ಒಂದೇ ಓವರ್‌ನಲ್ಲಿ ಸತತ 5 ಬೌಂಡರಿಗಳನ್ನು ಬಾರಿಸಿದರು.

‘ವಿಷಕಾರಿ ಜನರಿದ್ದರು’; ಐಪಿಎಲ್ ತಂಡದ ಬಗ್ಗೆ ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ

ಅತ್ಯಧಿಕ ಸ್ಕೋರ್ ಗಳಿಸಿ ದಾಖಲೆ

ಡಿವಿಲಿಯರ್ಸ್ ಅಂತಿಮವಾಗಿ 14 ನೇ ಓವರ್‌ನಲ್ಲಿ 123 ರನ್ ಗಳಿಸಿ ಔಟಾದರು. ಕೇವಲ 46 ಎಸೆತಗಳಲ್ಲಿ ಈ ರನ್ ದಾಖಲಿಸಿದ ಡಿವಿಲಿಯರ್ಸ್ ಅವರ ಇನ್ನಿಂಗ್ಸ್​ನಲ್ಲಿ 15 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ, ಡಿವಿಲಿಯರ್ಸ್ ಈ ಪಂದ್ಯಾವಳಿಯಲ್ಲಿ ತಮ್ಮದೇ ಆದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಸಹ ಮುರಿದರು. ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ಅವರು 116 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಡಿವಿಲಿಯರ್ಸ್ ಮಾತ್ರವಲ್ಲದೆ ಮತ್ತೊಬ್ಬ ಆರಂಭಿಕ ಆಟಗಾರ ಜೆಜೆ ಸ್ಮಟ್ಸ್ ಕೂಡ 53 ಎಸೆತಗಳಲ್ಲಿ 85 ರನ್ ಗಳಿಸಿದರು. ಇವರಿಬ್ಬರ ಇನ್ನಿಂಗ್ಸ್‌ಗಳ ಆಧಾರದ ಮೇಲೆ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 20 ಓವರ್‌ಗಳಲ್ಲಿ 241 ರನ್‌ಗಳ ಬೃಹತ್ ಸ್ಕೋರ್ ದಾಖಲಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ