15 ಎಸೆತಗಳಲ್ಲಿ ಅರ್ಧಶತಕ, 35 ಎಸೆತಗಳಲ್ಲಿ ಶತಕ; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ!

ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಅವರು, 35 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ 4ನೇ ಟಿ20 ಶತಕ ಸಿಡಿಸಿ ಮಿಂಚಿದರು. 8 ಬೌಂಡರಿ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ಈ ಮಹತ್ವದ ಮೈಲಿಗಲ್ಲು ತಲುಪಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.

15 ಎಸೆತಗಳಲ್ಲಿ ಅರ್ಧಶತಕ, 35 ಎಸೆತಗಳಲ್ಲಿ ಶತಕ; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ!
ಅಭಿಷೇಕ್ ಶರ್ಮಾ
Image Credit source: PTI

Updated on: Oct 27, 2026 | 3:55 PM

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ, ಈ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್​ಗಳ ಸಹಿತ ಅರ್ಧಶತಕ ಪೂರೈಸಿದ್ದ ಅಭಿಷೇಕ್, 35 ಎಸೆತಗಳಲ್ಲಿ 8 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ತಮ್ಮ ಟಿ20 ವೃತ್ತಿಜೀವನದ 4ನೇ ಶತಕ ಸಿಡಿಸಿ ಮಿಂಚಿದರು. 10ನೇ ಓವರ್​ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಅಭಿಷೇಕ್ ತಮ್ಮ ಶತಕ ಪೂರೈಸಿದ್ದು ವಿಶೇಷವಾಗಿತ್ತು.  ಈ ಮೂಲಕ ಅಭಿಷೇಕ್ ವಿದೇಶಿ ನೆಲದಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಂತ ವೇಗದ ಶತಕವೆಂಬ ದಾಖಲೆ ಸೃಷ್ಟಿಸಿದರು. ಇದಕ್ಕೂ ಮೊದಲು, ಅಭಿಷೇಕ್ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಈಗ, ಅವರು ನ್ಯೂಜಿಲೆಂಡ್​ನಲ್ಲಿ ಅತಿ ವೇಗದ ಶತಕ ಬಾರಿಸಿದ್ದಾರೆ.

ಸೂರ್ಯಕುಮಾರ್ ದಾಖಲೆ ಸರಿಗಟ್ಟಿದ ಅಭಿಷೇಕ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಇದೀಗ ಸೂರ್ಯಕುಮಾರ್ ಯಾದವ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ತಲಾ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ. ಫಿಲ್ ಸಾಲ್ಟ್ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಐದು ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಭಿಷೇಕ್ ಇದೇ ರೀತಿಯ ಬ್ಯಾಟಿಂಗ್ ಮುಂದುವರಿಸಿದರೆ ಈ ಇಬ್ಬರ ದಾಖಲೆಯನ್ನೂ ಮುರಿಯುವ ಸಾಧ್ಯತೆಯಿದೆ.

ಅತಿ ಹೆಚ್ಚು ಶತಕಗಳು

  • 5 ಶತಕ- ಗ್ಲೆನ್ ಮ್ಯಾಕ್ಸ್‌ವೆಲ್
  • 5 ಶತಕ- ರೋಹಿತ್ ಶರ್ಮಾ
  • 4 ಶತಕ- ಕರಣ್‌ಬೀರ್ ಸಿಂಗ್
  • 4 ಶತಕ- ಫಿಲ್ ಸಾಲ್ಟ್
  • 4 ಶತಕ- ಸೂರ್ಯಕುಮಾರ್ ಯಾದವ್
  • 4 ಶತಕ- ಅಭಿಷೇಕ್ ಶರ್ಮಾ

ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ..!

ಕೊಹ್ಲಿ, ವಾರ್ನರ್ ದಾಖಲೆ ಮುರಿದ ಅಭಿಷೇಕ್

ಟಿ20 ಕ್ರಿಕೆಟ್‌ನ ಒಟ್ಟಾರೆ ಸ್ವರೂಪದಲ್ಲಿ ಅಭಿಷೇಕ್ ಶರ್ಮಾ ತಮ್ಮ 11ನೇ ಶತಕವನ್ನು ದಾಖಲಿಸಿದ್ದಾರೆ. ಈ ಮೂಲಕ ತಲಾ 10 ಟಿ20 ಶತಕಗಳನ್ನು ಬಾರಿಸಿರುವ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಆಝಂ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ 11 ಶತಕಗಳನ್ನು ಹೊಂದಿರುವ ಅಭಿಷೇಕ್, ಈ ಇಬ್ಬರು ಆಟಗಾರರ ದಾಖಲೆಯತ್ತ ಮುನ್ನಡೆಯುತ್ತಿದ್ದಾರೆ.

ಭಾರತಕ್ಕೆ ಸುಲಭ ಜಯ

ಅಭಿಷೇಕ್ ಶರ್ಮಾ ಅವರ ದಾಖಲೆಯ ಇನ್ನಿಂಗ್ಸ್‌ನಿಂದಾಗಿ, ಭಾರತವು ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಭಾರತವು ಕೇವಲ 13.2 ಓವರ್‌ಗಳಲ್ಲಿ 199 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಹೀಗಾಗಿ ಮುಂದಿನ ಎರಡು ಟಿ20 ಪಂದ್ಯಗಳು ಭಾರತದ ಪಾಲಿಗೆ ಕೇವಲ ಔಪಚಾರಿಕವಾಗಿವೆ. ಆದಾಗ್ಯೂ, ಭಾರತ ತಂಡದ ಪ್ರಸ್ತುತ ಫಾರ್ಮ್ ಗಮನಿಸಿದರೆ ನ್ಯೂಜಿಲೆಂಡ್ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Tue, 27 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us