IND vs NZ: ಸಿರಾಜ್ ಜೆರ್ಸಿ, ದುಬೆ ಬ್ಯಾಟ್.. ಫಾರ್ಮ್​ ಕಂಡುಕೊಳ್ಳಲು ಅಭಿಷೇಕ್ ಕಸರತ್ತು

Abhishek Sharma's T20 WC Final Magic: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಗಳಿಸಿ ಭಾರತಕ್ಕೆ ನೆರವಾದರು. ಹಿಂದಿನ ರನ್ ಬರವನ್ನು ಮರೆತು, ಶಿವಂ ದುಬೆ ಅವರ ಬ್ಯಾಟ್ ಬಳಸಿ ಶರ್ಮಾ ಅಬ್ಬರಿಸಿದರು. ಅವರ 52 ರನ್‌ಗಳ ಕೊಡುಗೆಯಿಂದ ಭಾರತ 255 ರನ್ ಗಳಿಸಿ ಟಿ20 ವಿಶ್ವಕಪ್ ಗೆದ್ದಿತು. ದುಬೆ ಬ್ಯಾಟ್‌ನಿಂದ ಯಶಸ್ಸು ಕಂಡ ಅಭಿಷೇಕ್, ತನ್ನ ಮ್ಯಾಜಿಕ್ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದರು.

IND vs NZ: ಸಿರಾಜ್ ಜೆರ್ಸಿ, ದುಬೆ ಬ್ಯಾಟ್.. ಫಾರ್ಮ್​ ಕಂಡುಕೊಳ್ಳಲು ಅಭಿಷೇಕ್ ಕಸರತ್ತು
Abhishek Sharma

Updated on: Mar 09, 2026 | 5:16 PM

ಇಡೀ ಟಿ20 ವಿಶ್ವಕಪ್​ನಲ್ಲಿ ( T20 World Cup) ರನ್ ಬರ ಎದುರಿಸಿದ್ದ ಅಭಿಷೇಕ್ ಶರ್ಮಾ (Abhishek Sharma), ಫೈನಲ್​ನಲ್ಲಿ ಅಬ್ಬರದ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಜು ಸ್ಯಾಮ್ಸನ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಿಂದಿನ ವೈಫಲ್ಯಗಳನ್ನು ಮರೆತು ಬ್ಯಾಟ್ ಬೀಸಿದರು. ಅದರ ಪರಿಣಾಮವಾಗಿ ಕೇವಲ 18 ಎಸೆತಗಳಲ್ಲಿ ತಮ್ಮ ಟಿ20 ವಿಶ್ವಕಪ್​ನ ಎರಡನೇ ಅರ್ಧಶತಕವನ್ನು ದಾಖಲಿಸಿದರು. ಆದರೆ ಅರ್ಧಶತಕದ ಬಳಿಕ ಹೆಚ್ಚು ಹೊತ್ತು ನಿಲ್ಲದ ಅಭಿಷೇಕ್ 21 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಇದರಲ್ಲಿ 3 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಸೇರಿದ್ದವು. ಅಭಿಷೇಕ್ ಶರ್ಮಾ ಅವರ ಈ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 255 ರನ್‌ ಕಲೆಹಾಕಿ ಪಂದ್ಯವನ್ನು 96 ರನ್‌ಗಳಿಂದ ಗೆದ್ದುಕೊಂಡಿತು.

ಫೈನಲ್​ನಲ್ಲಿ ದುಬೆ ಬ್ಯಾಟ್ ಬಳಸಿದ ಅಭಿಷೇಕ್

ಈ ಗೆಲುವಿನ ನಂತರ ತನ್ನ ಸ್ಫೋಟಕ ಬ್ಯಾಟಿಂಗ್​ನ ಹಿಂದಿರುವ ಮ್ಯಾಜಿಕ್ ರಿವೀಲ್ ಮಾಡಿರುವ ಅಭಿಷೇಕ್ ಶರ್ಮಾ ಫೈನಲ್ ಪಂದ್ಯದಲ್ಲಿ ತಾನು ಬಳಸುವ ಬ್ಯಾಟ್​ನ ಬದಲು ತಂಡದ ಸಹ ಆಟಗಾರ ಶಿವಂ ದುಬೆ ಅವರ ಬ್ಯಾಟ್ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ‘ಇಂದು ನಾನು ಶಿವಂ ದುಬೆ ಅವರ ಬ್ಯಾಟ್‌ನಿಂದ ಬ್ಯಾಟಿಂಗ್ ಮಾಡಿದೆ. ಪಂದ್ಯ ಆರಂಭಕ್ಕೂ ಮೊದಲು ನನಗೆ ಬೇರೆ ಏನಾದರೂ ಪ್ರಯತ್ನಿಸಬೇಕಾಯಿತು ಎಂದನಿಸಿತು. ಗಿಲ್ ನನ್ನೊಂದಿಗೆ ಇರಲಿಲ್ಲ, ಆದ್ದರಿಂದ ನಾನು ದುಬೆಯ ಬಳಿಗೆ ಹೋಗಿ ಅವರ ಬ್ಯಾಟ್ ಅನ್ನು ಪಡೆದೆ ಮತ್ತು ಅದೇ ಬ್ಯಾಟ್ ಬಳಸಿ ಫೈನಲ್ ಪಂದ್ಯವನ್ನು ಆಡಿದೆ. ಅಂತಿಮವಾಗಿ ಯಶಸ್ಸು ಸಿಕ್ಕಿತು. ನನಗೆ ಬ್ಯಾಟ್ ನೀಡಿದ ದುಬೆಗೆ ಧನ್ಯವಾದಗಳು ಎಂದಿದ್ದಾರೆ.

ಸಿರಾಜ್ ಜೆರ್ಸಿ ತೊಟ್ಟಿದ್ದ ಅಭಿಷೇಕ್

ವಾಸ್ತವವಾಗಿ ಕಳಪೆ ಫಾರ್ಮ್​ನಿಂದ ಹೊರಬರಲು ಅಭಿಷೇಕ್ ಈ ರೀತಿಯ ದಾರಿ ಹಿಡಿಯುವುದು ಇದೇ ಮೊದಲಲ್ಲ. ಇದೇ ಟಿ20 ವಿಶ್ವಕಪ್​ನಲ್ಲಿ ಅಭಿಷೇಕ್ ಶರ್ಮಾ, ವೇಗಿ ಮೊಹಮ್ಮದ್ ಸಿರಾಜ್ ಅವರ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಆದರೆ ಆ ಪಂದ್ಯದಲ್ಲೂ ಅಭಿಷೇಕ್​ಗೆ ಅದೃಷ್ಟ ಕೈಹಿಡಿಯಲಿಲ್ಲ, ಬೇಗನೇ ಔಟಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಗುಂಪು ಪಂದ್ಯದಲ್ಲಿ ಅಭಿಷೇಕ್ ಮೊಹಮ್ಮದ್ ಸಿರಾಜ್ ಅವರ ಜೆರ್ಸಿ ತೊಟ್ಟು ಬ್ಯಾಟ್ ಬೀಸಿದ್ದರು. ಆದರೆ ಆ ಪಂದ್ಯದಲ್ಲಿ ಮೂರು ಎಸೆತಗಳನ್ನು ಎದುರಿಸಿದ್ದ ಅಭಿಷೇಕ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದರು. ಆದಾಗ್ಯೂ ಫೈನಲ್​ನಲ್ಲಿ ಯಶಸ್ಸು ಕಂಡ ಅಭಿಷೇಕ್, ದುಬೆ ಬ್ಯಾಟ್​ನಿಂದ ಅರ್ಧಶತಕದ ಇನ್ನಿಂಗ್ಸ್ ಆಡಿದರು.

IND vs NZ: ಟಿ20 ವಿಶ್ವಕಪ್‌ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ

18 ಎಸೆತಗಳಲ್ಲಿ ಅರ್ಧಶತಕ

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಈ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಸಾಧನೆಯನ್ನು ಮಾಡಿದರು. ಹಾಗೆಯೇ ಸ್ಯಾಮ್ಸನ್ ಜೊತೆಗೆ, 98 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು, ಅದು ಭಾರತದ ಪ್ರಶಸ್ತಿ ಗೆಲುವಿಗೆ ಅಡಿಪಾಯ ಹಾಕಿತು. ಆದಾಗ್ಯೂ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಆಗಿರುವ ಅಭಿಷೇಕ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಕೇವಲ 17.6 ಸರಾಸರಿಯಲ್ಲಿ 141 ರನ್ ಕಲೆಹಾಕಲಷ್ಟೇ ಶಕ್ತರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Mon, 9 March 26

Follow Us