AFG vs NZ: 16 ವರ್ಷಗಳ ಬಳಿಕ ಟೆಸ್ಟ್​ನಲ್ಲಿ ಮೂರು ದಿನದಾಟಗಳು ರದ್ದು..!

|

Updated on: Sep 11, 2024 | 1:56 PM

Afghanistan vs New Zealand: ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯವು ಮೂರು ದಿನ ಕಳೆದರೂ ಶುರುವಾಗಿಲ್ಲ. ನೋಯ್ಡಾದಲ್ಲಿ ನಡೆಯಬೇಕಿರುವ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡುತ್ತಿದೆ. ಹೀಗಾಗಿ 5 ದಿನಗಳ ಈ ಪಂದ್ಯದ ಮೊದಲ ಮೂರು ದಿನದಾಟಗಳು ರದ್ದಾಗಿವೆ.

AFG vs NZ: 16 ವರ್ಷಗಳ ಬಳಿಕ ಟೆಸ್ಟ್​ನಲ್ಲಿ ಮೂರು ದಿನದಾಟಗಳು ರದ್ದು..!
NZ vs AFG
Follow us on

ಅಫ್ಘಾನಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಸಂಪೂರ್ಣ ರದ್ದಾಗಿದೆ. ಭಾರತದ ಗ್ರೇಟರ್ ನೋಯ್ಡಾದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯಬೇಕಿದ್ದ ಮೊದಲ ದಿನದಾಟವು ಮಳೆಯ ಕಾರಣ ಸಂಪೂರ್ಣ ರದ್ದಾಗಿತ್ತು. ಇನ್ನು ಮೈದಾನವು ಸಂಪೂರ್ಣ ಒದ್ದೆಯಾಗಿದ್ದ ಕಾರಣ ದ್ವಿತೀಯ ದಿನದಾಟದಲ್ಲಿ ಪಂದ್ಯ ನಡೆದಿರಲಿಲ್ಲ. ಇನ್ನು ಮೂರನೇ ದಿನದಾಟದಲ್ಲಿ ಪಂದ್ಯ ಶುರುವಾಗುವ ನಿರೀಕ್ಷೆಯಿತ್ತು. ಆದರೆ ಮಂಗಳವಾರ ರಾತ್ರಿ ಸುರಿದ ಭಾರೀ ವರ್ಷಧಾರೆಯಿಂದಾಗಿ ಮೂರನೇ ದಿನದಾಟವು ಮಳೆಗೆ ಅಹುತಿಯಾಗಿದೆ.

16 ವರ್ಷಗಳ ಬಳಿಕ 3 ದಿನದಾಟಗಳು ರದ್ದು:

ವಿಶೇಷ ಎಂದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹೀಗೆ ಮೂರು ದಿನದಾಟಗಳು ರದ್ದಾಗಿರುವುದು ತುಂಬಾ ವಿರಳ. ಅದರಲ್ಲೂ ಇಂತಹದೊಂದು ರದ್ದತಿ ನೋಡಿ 16 ವರ್ಷಗಳ ಕಳೆದಿದ್ದವು. ಅಂದರೆ ಕೊನೆಯ ಬಾರಿ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಸಂಪೂರ್ಣ ರದ್ದಾಗಿರುವುದು 2008 ರಲ್ಲಿ. ಕಾಕತಾಳೀಯ ಎಂಬಂತೆ ಅಂದು ಸಹ ನ್ಯೂಝಿಲೆಂಡ್ ತಂಡ ಕಣದಲ್ಲಿತ್ತು.

2008 ರಲ್ಲಿ ಮೀರ್​ಪುರ್​ನಲ್ಲಿ ನಡೆದಿದ್ದ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ಮಳೆಗೆ ಅಹುತಿಯಾಗಿತ್ತು. ಇದೀಗ 16 ವರ್ಷಗಳ ಬಳಿಕ ನ್ಯೂಝಿಲೆಂಡ್ ಹಾಗೂ ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ರದ್ದಾಗಿದೆ.

ಪಂದ್ಯ ಡ್ರಾ ಸಾಧ್ಯತೆ:

ಅಫ್ಘಾನಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆ ಇನ್ನು ಕೇವಲ 2 ದಿನದಾಟಗಳು ಮಾತ್ರ ಬಾಕಿಯಿದೆ. ಗುರುವಾರ ಪಂದ್ಯವನ್ನು ಆಯೋಜಿಸಲು ಸಾಧ್ಯವಾದರೂ 4 ಇನಿಂಗ್ಸ್​ಗಳನ್ನಾಡಲು ಅವಕಾಶ ಸಿಗುವ ಸಾಧ್ಯತೆಯಿಲ್ಲ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.

ನಡೆಯದ ಟಾಸ್ ಪ್ರಕ್ರಿಯೆ:

ಕುತೂಹಲಕಾರಿ ವಿಷಯ ಎಂದರೆ ಅಫ್ಘಾನಿಸ್ತಾನ್ ಹಾಗೂ ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರು ದಿನದಾಟಗಳು ರದ್ದಾದರೂ, ಇನ್ನೂ ಸಹ ಟಾಸ್ ಪ್ರಕ್ರಿಯೆ ನಡೆದಿಲ್ಲ. ಅಂದರೆ ಉಭಯ ತಂಡಗಳ ನಾಯಕರುಗಳು ಮೈದಾನಕ್ಕಿಳಿದು ಟಾಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಟಾಸ್ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.

ಉಭಯ ತಂಡಗಳು:

ಅಫ್ಘಾನಿಸ್ತಾನ್ ಟೆಸ್ಟ್ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ) , ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ರಹಮತ್ ಷಾ , ರಿಯಾಝ್ ಹಸನ್ , ಬಹಿರ್ ಶಾ , ಶಾಹಿದುಲ್ಲಾ ಕಮಾಲ್ , ಅಜ್ಮತುಲ್ಲಾ ಒಮರ್ಜಾಯ್ , ಖೈಸ್ ಅಹ್ಮದ್ , ಜಹೀರ್ ಖಾನ್ , ಖಲೀಲ್ ಅಹ್ಮದ್ , ಜಿಯಾ ಉರ್ ರೆಹಮಾನ್, ಅಫ್ಸರ್ ಝಝೈ, ನಿಜಾತ್ ಮಸೂದ್, , ಅಬ್ದುಲ್ ಮಲಿಕ್.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಟಿಮ್ ಸೌಥಿ (ನಾಯಕ) , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ಡೇರಿಲ್ ಮಿಚೆಲ್ , ವಿಲ್ ಯಂಗ್ , ಗ್ಲೆನ್ ಫಿಲಿಪ್ಸ್ , ಮೈಕೆಲ್ ಬ್ರೇಸ್‌ವೆಲ್ , ಮಿಚೆಲ್ ಸ್ಯಾಂಟ್ನರ್ , ಅಜಾಜ್ ಪಟೇಲ್ , ಮ್ಯಾಟ್ ಹೆನ್ರಿ , ಟಾಮ್ ಬ್ಲುಂಡೆಲ್ , ರಚಿನ್ ರವೀಂದ್ರ, ಬೆನ್ ಸೀರ್ಸ್.

 

Published On - 1:56 pm, Wed, 11 September 24