Champions Trophy 2025: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಇನ್ನೂ ಅನುಮೋದಿಸದ ಐಸಿಸಿ
Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕರಡು ವೇಳಾಪಟ್ಟಿ ಪ್ರಕಟವಾಗಿದ್ದು, ಈ ವೇಳಾಪಟ್ಟಿಯಂತೆ ಫೆಬ್ರವರಿ 19 ರಿಂದ ಪಂದ್ಯಾವಳಿ ಶುರುವಾಗಲಿದೆ. ಇನ್ನು ಮಾರ್ಚ್ 1 ರಂದು ನಡೆಯಲಿರುವ 11ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳಲು ಈ ತಿಂಗಳು ಪಾಕ್ಗೆ ಭೇಟಿ ನೀಡಲಿರುವ ಐಸಿಸಿ ನಿಯೋಗವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ತಾತ್ಕಾಲಿಕ ವೇಳಾಪಟ್ಟಿಯ ಬಗ್ಗೆ ಚರ್ಚಿಸಲಿದೆ. ಇದರೊಂದಿಗೆ ಈ ಹಿಂದೆ ಪಿಸಿಬಿ ಕಳುಹಿಸಿರುವ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಕೂಡ ಅನುಮೋದಿಸಿಲ್ಲ ಎಂಬುದು ಖಚಿತವಾಗಿದೆ. ಇದೀಗ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಹೀಗಾಗಿ ಪಾಕಿಸ್ತಾನದ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಗೆ ಅನುಮೋದನೆ ಸಿಗುವುದು ಸಹ ಅನುಮಾನ ಎನ್ನಲಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಯ ಕರುಡು ವೇಳಾಪಟ್ಟಿ ಪ್ರಕಾರ, ಫೆಬ್ರವರಿ 19 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಇನ್ನು ಭಾರತ ತಂಡವು ಫೆಬ್ರವರಿ 20 ರಿಂದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಕರುಡು ವೇಳಾಪಟ್ಟಿ ಪ್ರಕಾರ, ಗ್ರೂಪ್-ಎ ನಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಎರಡನೇ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡದ ವಿರುದ್ಧ ಸೆಣಸಲಿದೆ.
ಒಂದೇ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಪಂದ್ಯಗಳು:
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಅಲ್ಲದೆ ಈ ಟೂರ್ನಿಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮೂರು ಸ್ಟೇಡಿಯಂಗಳನ್ನು ಫೈನಲ್ ಮಾಡಿದ್ದು, ಅದರಂತೆ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದೆ.
ಇಲ್ಲಿ ಟೀಮ್ ಇಂಡಿಯಾ ಪಂದ್ಯಗಳಿಗೆ ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಅನ್ನು ನಿಗದಿ ಮಾಡಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಲಾಹೋರ್ನಲ್ಲಿ ಆಡಲಿದೆ ಎಂದು ವರದಿಯಾಗಿದೆ.
ಇಷ್ಟೆಲ್ಲಾ ಸ್ಪಷ್ಟನೆ ನೀಡಿದರೂ ಭಾರತ ತಂಡವು ಪಾಕ್ನಲ್ಲಿ ಟೂರ್ನಿ ಆಡುವುದನ್ನು ಖಚಿತಪಡಿಸಿಲ್ಲ. ಹೀಗಾಗಿಯೇ ಐಸಿಸಿ ಕೂಡ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕಳುಹಿಸಿರುವ ಕರಡು ವೇಳಾಪಟ್ಟಿಗೆ ಇನ್ನೂ ಸಹ ಮುದ್ರೆ ಹಾಕಿಲ್ಲ. ಇದೀಗ ಜಯ್ ಶಾ ಐಸಿಸಿ ಗದ್ದುಗೆ ಏರಿರುವುದರಿಂದ ಅತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ಗೆ ಹೊಸ ಚಿಂತೆ ಶುರುವಾಗಿದೆ.
ಜಯ್ ಶಾ ಒಪ್ಪಿಗೆ ನೀಡುತ್ತಾರಾ?
ಡಿಸೆಂಬರ್ 1 ರಿಂದ ಐಸಿಸಿಯ ಹೊಸ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಧಿಕೃತಗೊಳಿಸುವ ಅಧಿಕಾರ ಜಯ್ ಶಾಗೆ ಇರಲಿದೆ. ಕಳೆದ ವರ್ಷ ಕೊನೆಯಲ್ಲಿ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದಂತೆಯೇ, ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಸಹ ಪಂದ್ಯಾವಳಿಯ ಪ್ರಾರಂಭಕ್ಕೆ ಕೆಲವೇ ವಾರಗಳ ಮೊದಲು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಜಯ್ ಶಾ ಅವರ ಅಂತಿಮ ನಿರ್ಧಾರ ಏನಾಗಿರಲಿದೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!
ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ?
ಭಾರತವು ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಮನವಿ ಮಾಡಿದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಒಪ್ಪಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇಡೀ ಟೂರ್ನಿಯು ಕೈ ತಪ್ಪುವ ಸಾಧ್ಯತೆಯಿದೆ. ಹೀಗಾಗಿ ಬಿಸಿಸಿಐ ಮನವಿಗೆ ಪಿಸಿಬಿ ಮಣಿಯಲೇಬೇಕಾದ ಒತ್ತಡದಲ್ಲಿದೆ. ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು.
Published On - 7:40 am, Thu, 12 September 24